ಬೆಂಗಳೂರು :
ಪ್ರತಿಷ್ಠಿತ ಮಾಧ್ಯಮ ಸಂಪಾದಕರು ಮತ್ತು ಪತ್ರಕರ್ತರಿಗೆ ನೀಡಲಾಗಿರುವ ದೀಪಾವಳಿಯ ಗಿಫ್ಟ್ ರೂಪದಲ್ಲಿ ನಗದು ನೀಡಿರುವ ಬಗ್ಗೆ ಇದೀಗ ಪತ್ರಕರ್ತರ ವಲಯದಿಂದಲೇ ತನಿಖೆಗೆ ಒತ್ತಾಯ ಕೇಳಿಬಂದಿದೆ. ಒಟ್ಟಾರೆ ಇದೀಗ ದೀಪಾವಳಿಯ ಗಿಫ್ಟ್ ರಾಜ್ಯಾದ್ಯಂತ ಅದರಲ್ಲೂ ಪತ್ರಕರ್ತರಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಸಿಎಂ ಕಚೇರಿಯಿಂದ ರಾಜ್ಯ ಮಟ್ಟದ ಮಾಧ್ಯಮ ಸಂಸ್ಥೆಗಳ ಸಂಪಾದಕರು, ಮುಖ್ಯ ವರದಿಗಾರರು ಮತ್ತು ಕೆಲ ಆಯ್ದ ಪತ್ರಕರ್ತರಿಗೆ ದೀಪಾವಳಿ ಉಡುಗೊರೆಯಾಗಿ ಸ್ವೀಟ್ ಬಾಕ್ಸ್ ಜೊತೆಗೆ 2.5 ಲಕ್ಷ ರೂಪಾಯಿ ಖುಷಿ ಕೊಡಲಾಗಿದೆ ಎಂಬ ವದಂತಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಅಳಿದುಳಿರುವ ಪತ್ರಿಕೋದ್ಯಮದ ಪಾವಿತ್ರ್ಯತೆ ಕಾಪಾಡಿಕೊಳ್ಳುವುದಕ್ಕಾಗಿ ಈ ಬೆಳವಣಿಗೆಯ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಯುವುದು ಸೂಕ್ತ. ಸತ್ಯ ತಿಳಿಯುವುದು ಪತ್ರಿಕೆಗಳ ಕೋಟ್ಯಂತರ ಓದುಗರ ಹಕ್ಕು ಕೂಡ ಹೌದು. ತಮಗೆ ತಲುಪಿದ ಸ್ವೀಟ್ ಬಾಕ್ಸ್ ಮತ್ತು 2.5 ಲಕ್ಷ ರೂಪಾಯಿ ಅನ್ನು ತಿರಸ್ಕಾರ ಮಾಡಿರುವುದಾಗಿ ಕೆಲ ಪತ್ರಕರ್ತರು ಹೇಳಿದ್ದರೆ, ಇನ್ನೂ ಕೆಲವರು ನಮಗೆ ಸ್ವೀಟ್ ಬಾಕ್ಸ್ ಹೊರತಾಗಿ ಬೇರೆನೂ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪತ್ರಿಕೆಗಳ ಸಂಪಾದಕರು ಮತ್ತು ಮುಖ್ಯ ವರದಿಗಾರರು ನೀಡಿರುವ ಈ ಹೇಳಿಕೆಗಳನ್ನು ಗಮನಿಸಿದರೆ ಇಂತಹ ಬೆಳವಣಿಗೆ ನಡೆದಿರುವುದು ನಿಜ ಎಂದು ಯಾರಿಗಾದರೂ ಅನ್ನಿಸುವುದು ಸಹಜ.
ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭದ ಮಾನ, ಮರ್ಯಾದೆ ಮತ್ತು ವಿಶ್ವಾಸಾರ್ಹತೆ ಕಾಪಾಡುವ ದೃಷ್ಟಿಯಿಂದ ಈ ಬಗ್ಗೆ ಸುದೀರ್ಘ ತನಿಖೆ ಮತ್ತು ಬಹಿರಂಗ ಚರ್ಚೆ ನಡೆಯಲಿ. ಪತ್ರಿಕೆಗಳ ಓದುಗರು, ಸುದ್ದಿ ವಾಹಿನಿಗಳ ವೀಕ್ಷಕರು ಈ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ‘ಸ್ವಚ್ಛ ಮಾಧ್ಯಮ’ ಅಭಿಯಾನದಲ್ಲಿ ಪಾಲ್ಗೊಳ್ಳಲಿ
ಎನ್ನುವುದು ಹಿರಿಯ ಪತ್ರಕರ್ತರ ಒತ್ತಾಯವಾಗಿದೆ.