ದಾವಣಗೆರೆ : ಪತ್ರಕರ್ತರು ಹಾರ್ಡ್ ವೇರ್ ಇದ್ದಂತೆ. ಕಾಲಕ್ಕೆ ತಕ್ಕ ಸಾಫ್ಟ್ ವೇರ್ ಅಳವಡಿಸಿಕೊಳ್ಳುವ ಸವಾಲು ನಮ್ಮೆದುರಿಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಪತ್ರಕರ್ತರು ಭವಿಷ್ಯದ ಸವಾಲುಗಳನ್ನು ಎದುರಿಸಲು ನಾವು ಸಜ್ಜಾಗಬೇಕಿದೆ. ಈಗ ತಂತ್ರಜ್ಞಾನದ ವೇಗ ವಿಪರೀತ ಹೆಚ್ಚಿದೆ. ಈ ವೇಗಕ್ಕೆ ನಾವು ಪತ್ರಕರ್ತರು ಸಿದ್ದಗೊಳ್ಳಬೇಕಿದೆ.
ಮೊಬೈಲಿನ ಒಂದು ಆವಿಷ್ಕಾರ ಉಳಿದೆಲ್ಲಾ ವೃತ್ತಿಗಳಿಗಿಂತ ಪತ್ರಿಕಾವೃತ್ತಿಯಲ್ಲಿ ಅಪಾರ ಬದಲಾವಣೆ ತಂದಿದೆ.
ಮೊಬೈಲ್ ಬರ್ತಿದ್ದ ಹಾಗೆ STD ಬೂತ್ ಗಳು ಹೋದವು. ಲ್ಯಾಂಡ್ ಲೈನ್ ಫೋನ್ ಗಳು ಹೋದವು. ವಾಚ್ ಗಳು, ಗಡಿಯಾರಗಳು ಹೋದವು.
ಪೆನ್ನು ಪೇಪರ್ ಹಿಡಿದು ನೋಟ್ಸ್ ಮಾಡಿಕೊಳ್ಳುವುದೂ ಮುಕ್ಕಾಲು ಭಾಗ ಕಡಿಮೆ ಆಗಿದೆ. ಪುಸ್ತಕ ಓದಿ ಮಾಹಿತಿ ಪಡೆಯುವುದೂ ನಿಂತುಹೋಗಿದೆ. ಇವೆಲ್ಲವನ್ನೂ ಈಗ ಮೊಬೈಲ್ ನಲ್ಲೇ ಮಾಡಿಕೊಳ್ತೇವೆ.
ಅಷ್ಟೆ ಅಲ್ಲ. ಮೊಬೈಲ್ ಬಂದ ಮೇಲೆ ದುಡ್ಡು ಕೂಡ ಬದಲಾಗಿದೆ. ಮೊಬೈಲ್ ಬ್ಯಾಂಕಿಂಗ್ ಮೂಲಕವೇ ಸಂಬಳವೂ ಆಗಿ ಬಿಡತ್ತೆ. ATM ಕಾರ್ಡ್ ಗಳೂ ಈಗ ಮಾಯ ಆಗುತ್ತಿವೆ. ಸಾಫ್ಟ್ ವೇರ್ ಗಳು ಬಂದ ಮೇಲೆ ಪ್ಲಾಸ್ಟಿಕ್ ಕಾರ್ಡ್ ಗಳ ಅಗತ್ಯವೂ ಇಲ್ಲವಾಗಿದೆ.
Paytm ಕೇವಲ ಒಂದು software. ಇದರ ಬಳಿ ಬ್ಯಾಂಕ್ ಇಲ್ಲ. ಆದರೆ ಬ್ಯಾಂಕಿಂಗ್ ವ್ಯವಸ್ಥೆಯೇ paytm ಕೈಯಲ್ಲಿದೆ.
ವಿಶ್ವದಲ್ಲಿ ಅತಿ ಹೆಚ್ಚು ಕಾರುಗಳನ್ನು ಹೊಂದಿರುವ ಸಂಸ್ಥೆ UBER ಮತ್ತು OLA. ಮಜಾ ಅಂದರೆ ಇವೆರಡೂ ಕಂಪನಿಗಳೂ ಒಂದೇ ಒಂದು ಕಾರನ್ನೂ ಖರೀದಿಸಿಲ್ಲ. ಕೇವಲ ಒಂದು software ನಲ್ಲಿ ಅತಿ ಹೆಚ್ಚು ಕಾರುಗಳನ್ನು ಹೊಂದಿದ್ದು ವಿಶ್ವದಲ್ಲೇ ಅತಿ ಹೆಚ್ಚು ಡ್ರೈವರ್ ಗಳಿಗೆ ಕೆಲಸ ಕೊಟ್ಟಿದೆ.
ಅಮೆಜಾನ್ ಯಾವ ವಸ್ತುವನ್ನೂ ಉತ್ಪಾದಿಸಲ್ಲ. ಆದರೆ ಅಮೆಜಾನ್ ಅಪ್ಪ-ಅಮ್ಮ ಬಿಟ್ಟು ಎಲ್ಲವನ್ನೂ ಮಾರಾಟ ಮಾಡುತ್ತದೆ ಎಂದು ಹಾಸ್ಯದ ದಾಟಿಯಲ್ಲಿ ವಿವರಿಸಿದರು.
ಹೊಸ software ಗಳು, ಹೊಸ ತಂತ್ರಜ್ಞಾನ ಪತ್ರಿಕಾ ಕ್ಷೇತ್ರಕ್ಕೂ ವೇಗವಾಗಿ ಬರುತ್ತಿವೆ.
ನಾವು ಪತ್ರಕರ್ತರು ಹಾರ್ಡ್ ವೇರ್ ಗಳಿದ್ದಂತೆ. ನಾವು ನಮ್ಮೊಳಗಿನ software ನ್ನು update ಮಾಡಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ನಮ್ಮನ್ನು ನಾವು ಹೊಸ ವೇಗಕ್ಕೆ, ಹೊಸ ಸ್ವರೂಪಕ್ಕೆ update ಮಾಡಿಕೊಳ್ಳಬೇಕಿದೆ. ನಾನು ಮೊಳೆ ಜೋಡಿಸುವ ಕಾಲದಿಂದ ಪತ್ರಿಕಾ ವೃತ್ತಿಯಲ್ಲಿ ಇದ್ದೇನೆ. ಇವತ್ತಿನ ಶೇ50 ರಷ್ಟು ಪತ್ರಕರ್ತರು ಮೊಳೆ ಜೋಡಿಸುವುದನ್ನು ನೋಡಿಯೇ ಇಲ್ಲ.
ಹಾಗೆ ಮುಂದಿನ 10-20 ವರ್ಷಗಳಲ್ಲಿ ಪತ್ರಿಕಾವೃತ್ತಿ ಇವತ್ತಿನ ರೀತಿ ಇರುವುದಿಲ್ಲ.
ನ್ಯೂಸ್ ರೂಮುಗಳು, ಪತ್ರಿಕಾ ಕಚೇರಿಗಳೇ ಇಲ್ಲದೆ ಪತ್ರಕರ್ತರು ಎಲ್ಲೆಲ್ಲಿ ಇರ್ತೀವೋ ಅಲ್ಲಿಂದಲೇ, ಅವರ ಮನೆಗಳನ್ನೇ, ಕಾಫಿ ಶಾಪ್ ಗಳನ್ನೇ ಕಚೇರಿ ಅಂತ ತಿಳಿದು ಕೆಲಸ ಮಾಡಬೇಕಾಗಬಹುದು. ಕೋವಿಡ್ ಅವಧಿಯಲ್ಲಿ ಇದರ ಸ್ಯಾಂಪಲ್ ಹೇಗಿರತ್ತೆ ಅಂತ ನಮಗೆ ಅನುಭವ ಆಗಿದೆ ಎಂದರು.
ಈಗ ಬಹುತೇಕ ದೊಡ್ಡ ಸಂಸ್ಥೆಗಳೂ ಕೃತಕ ಬುದ್ದಿಮತ್ತೆಯನ್ನು ಅಳವಡಿಸಿಕೊಳ್ಳಲು ಮುಂದಾಗಿವೆ. ಕೆಲವೇ ವರ್ಷಗಳಲ್ಲಿ
ಕೃತಕ ಬುದ್ದಿಮತ್ತೆ ಎಲ್ಲಾ ನ್ಯೂಸ್ ರೂಮುಗಳಲ್ಲೂ ಚಾಲ್ತಿಗೆ ಬರುತ್ತವೆ. ಮೇಕಪ್ ಅಗತ್ಯವಿಲ್ಲದ ಕೃತಕ ಸುಂದರಿಯರು ನ್ಯೂಸ್ ಆ್ಯಂಕರ್ ಗಳಾಗುತ್ತಾರೆ ಎಂದರು.
ಈ ಸವಾಲಿಗೆ ನಾವುಗಳು ಸಜ್ಜಾಗಬೇಕಿದೆ. ಈ ತಂತ್ರಜ್ಞಾನವನ್ನು ಅರಿಯುವ, ಕಲಿಯುವ ಕಾರ್ಯಾಗಾರಗಳು ಮತ್ತು ಶಿಬಿರಗಳನ್ನು ಪತ್ರಕರ್ತರ ಸಂಘಗಳು ಹೆಚ್ಚೆಚ್ಚು ಸಂಘಟಿಸಬೇಕು.
ಇದಕ್ಕಾಗಿ ವಾರ್ತಾ ಇಲಾಖೆ, ಮಾಧ್ಯಮ ಅಕಾಡೆಮಿ ಸಹಯೋಗ ಪಡೆಯಬಹುದು.
ಮೊಬೈಲ್ ನಲ್ಲಿ ಕ್ರಾಪ್ ಮಾಡಿದ ಒಂದು ಸುಳ್ಳು ಫೋಟೋ, voice converter ಮೂಲಕ ಸೃಷ್ಟಿಸಿದ ಒಂದು ಆಡಿಯೊ, ಕೃತಕ ಬುದ್ದಿಮತ್ತೆ ಮೂಲಕ ರೆಡಿಯಾದ ಒಂದು ವಿಡಿಯೊ ಸಮಾಜದಲ್ಲಿ ದೊಡ್ಡ ಗಲಭೆಗಳನ್ನು ಸೃಷ್ಟಿಸಿ ಸರ್ವನಾಶ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಇವತ್ತು ತಂತ್ರಜ್ಞಾನವನ್ನು ಸಮಾಜದ ಶಾಂತಿ ಕೆಡಿಸಲು, ಸುಳ್ಳನ್ನು ಅತಿ ವೇಗವಾಗಿ ಹರಡಲು ಬಳಸಿಕೊಳ್ಳಲಾಗುತ್ತಿದೆ. ಇದನ್ನು ತಡೆಯುವ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಇದಕ್ಕಾಗಿ ಸೈಬರ್ ತಂತ್ರಜ್ಞಾನ ಮತ್ತು ಸುಳ್ಳು ಪತ್ತೆ ತಂತ್ರಜ್ಞಾನದ ಅರಿವು ಪತ್ರಕರ್ತರಿಗೆ ಅನಿವಾರ್ಯ.
ಆದ್ದರಿಂದ ಪತ್ರಕರ್ತರ ಸಂಘಗಳು, ಮಾಧ್ಯಮ ಸಂಸ್ಥೆಗಳು ಒಟ್ಟಾಗಿ ಕಾರ್ಯಾಗಾರಗಳ ಮೂಲಕ ಸೈಬರ್ ಮತ್ತು ಕೃತಕ ಬುದ್ದಿಮತ್ತೆಯ ತಂತ್ರಜ್ಞಾನದ ಅಪಾಯ ಮತ್ತು ಅವಕಾಶಗಳನ್ನು ಅರಿತುಕೊಳ್ಳಬೇಕಿದೆ. ಈ ದಿಕ್ಕಿನಲ್ಲಿ ಪ್ರಯತ್ನಿಸೋಣ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಕೊಪ್ಪಳ ವಿವಿಯ ವಿಸಿ ಬಿ.ಕೆ.ರವಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.