ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿಯಿಂದ ಪ್ರಭಾವಿ ಕೇಂದ್ರ ಸಚಿವ ಹಾಗೂ ಪ್ರಧಾನಿ ಮೋದಿ ಪರಮಾಪ್ತ ಪ್ರಹ್ಲಾದ ಜೋಶಿ ಅವರಿಗೆ ಮತ್ತೆ ಟಿಕೆಟ್ ಸಿಕ್ಕಿದೆ. ಇದರಿಂದ ಕೆಂಡಾಮಂಡಲವಾಗಿರುವ ಲಿಂಗಾಯತ ಸ್ವಾಮೀಜಿಗಳು ಒಂದೇ ವೇದಿಕೆ ಅಡಿ ಬಂದು ಈ ಬಾರಿ ಲಿಂಗಾಯತರಿಗೆ ಅವಕಾಶ ಮಾಡಿಕೊಡಬೇಕು ಎಂದು ಗಡುವು ವಿಧಿಸಿರುವುದು ಬಿಜೆಪಿ ವರಿಷ್ಠರ ಪಾಲಿಗೆ ಬಹುದೊಡ್ಡ ತೊಡಕಾಗಿ ಪರಿಣಮಿಸಿದೆ. ಒಂದು ವೇಳೆ ಲಿಂಗಾಯತ ಸ್ವಾಮೀಜಿಗಳು ಹಾಕಿರುವ ಲಕ್ಷ್ಮಣ ರೇಖೆಯನ್ನು ಮೀರಿ ಪ್ರಹ್ಲಾದ ಜೋಶಿ ಅವರಿಗೆ ಟಿಕೆಟ್ ಅಂತಿಮಗೊಳಿಸಿದ್ದೇ ಆದಲ್ಲಿ ಧಾರವಾಡದಲ್ಲಿ ಈ ಬಾರಿ ಸುಲಭವಾಗಿ ಬಿಜೆಪಿ ಸೋಲುವುದಂತು ಖಚಿತ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಲಿಂಗಾಯತರು ಈ ಸಲ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಲಿಂಗಾಯತರು ಈ ಬಾರಿ ಪ್ರಹ್ಲಾದ ಜೋಶಿ ವಿರುದ್ಧ ಸಿಡಿದೆದಿದ್ದಾರೆ.
⏩ *ಲಿಂಗಾಯತರ ರೋಷವೇಶ, ಸಿಡಿದೆದ್ದ ಸಮುದಾಯದ ಪ್ರಜ್ಞಾವಂತರು
⏩ *100 ಕ್ಕೂ ಹೆಚ್ಚು ಲಿಂಗಾಯತ ಸ್ವಾಮೀಜಿಗಳ ಅಬ್ಬರಕ್ಕೆ ದಿಗಿಲುಗೊಂಡ ಪ್ರಭಾವಿ ಸಚಿವ
⏩ *ಲಕ್ಷ್ಮಣರೇಖೆಯ ಗಡುವು ನೀಡಿದ ಲಿಂಗಾಯತರು
⏩ *ಹಿಂದೆಂದೂ ಇಲ್ಲದ ರೀತಿಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಲಿಂಗಾಯತರು
ಬೆಳಗಾವಿ : ನೆರೆಯ ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಈ ಬಾರಿ ಹಾಲಿ ಸಂಸದ ಹಾಗೂ ಕೇಂದ್ರದ ಪ್ರಭಾವಿ ಸಚಿವ ಪ್ರಹ್ಲಾದ ಜೋಶಿ ಅವರಿಗೆ ನಡುಕ ಪ್ರಾರಂಭವಾಗಿದೆ. ಇದಕ್ಕೆ ಕಾರಣ ಲಿಂಗಾಯತ ಸ್ವಾಮೀಜಿಗಳು ತೋರಿರುವ ಒಗ್ಗಟ್ಟು.
ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಈ ಬಾರಿ ಲಿಂಗಾಯತರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ದೊಡ್ಡ ಪ್ರಮಾಣದಲ್ಲಿ ಕೇಳಿ ಬರುತ್ತಿದೆ, ಅದರಲ್ಲೂ ಈಗಾಗಲೇ ಬಿಜೆಪಿ ಟಿಕೆಟ್ ಘೋಷಣೆಯಾಗಿದ್ದು ಪ್ರಹ್ಲಾದ ಜೋಶಿ ಅವರಿಗೆ ಟಿಕೆಟ್ ಎಂದಿನಂತೆ ಸಿಕ್ಕಿದೆ. ಈ ಹಿಂದಿನ ಚುನಾವಣೆಗಳಲ್ಲಿ ಲಿಂಗಾಯತರು ಬ್ರಾಹ್ಮಣ ಅಭ್ಯರ್ಥಿಯಾಗಿರುವ ಪ್ರಹ್ಲಾದ ಜೋಶಿ ಅವರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಹೀಗಾಗಿ ಈ ಬಾರಿ ಲಿಂಗಾಯತರಿಗೆ ಅವಕಾಶ ಕೊಡಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿಯವರು ಮಾಡಿರುವ ಬೇಡಿಕೆ ಅತ್ಯಂತ ಸಮಂಜಸವಾಗಿದೆ. ಇದು ಇಡೀ ಲಿಂಗಾಯತ ಸಮುದಾಯವನ್ನೇ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದ್ದು ಪ್ರಹ್ಲಾದ ಜೋಶಿಯವರ ಪಾಲಿಗೆ ಲಿಂಗಾಯತ ಸ್ವಾಮೀಜಿಗಳ ಬೇಡಿಕೆ ಆರಗಿಸಿಕೊಳ್ಳಲಾಗದಂತೆ ಮಾಡಿದೆ. ಒಂದು ವೇಳೆ ಬಿಜೆಪಿ ಇದೀಗ ಮುಂದಡಿ ಇಟ್ಟು ಪ್ರಹ್ಲಾದ ಜೋಶಿ ಅವರಿಗೆ ಟಿಕೆಟ್ ನೀಡಿದ್ದನ್ನೇ ಅಂತಿಮಗೊಳಿಸಿದರೆ ಈ ಬಾರಿ ಪ್ರಭಾವಿ ಕೇಂದ್ರ ಸಚಿವರು ಧಾರವಾಡದಲ್ಲಿ ಹೀನಾಯವಾಗಿ ಸೋಲುವುದಂತು ಖಚಿತ. ಅಷ್ಟೊಂದು ದೊಡ್ಡ ಮಟ್ಟದಲ್ಲಿ ಈ ಬಾರಿ ಲಿಂಗಾಯತರು ಒಗ್ಗಟ್ಟು ಪ್ರದರ್ಶನ ಮಾಡಿದ್ದು ನೂರಕ್ಕೂ ಹೆಚ್ಚು ಸ್ವಾಮೀಜಿಗಳು ದಿಂಗಾಲೇಶ್ವರ ಸ್ವಾಮೀಜಿಗಳಿಗೆ ಜೈಕಾರ ಹಾಕಿದ್ದು ವಿಶೇಷವಾಗಿ ಕಂಡುಬಂದಿದೆ.
ಒಟ್ಟಾರೆ ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಯನ್ನು ತಕ್ಷಣವೇ ಹಿಂಪಡೆಸಿಕೊಂಡು ಲಿಂಗಾಯತ ನಾಯಕರಿಗೆ ಟಿಕೆಟ್ ನೀಡಬೇಕಾಗಿದೆ. ಈ ಮೂಲಕ ಕ್ಷೇತ್ರದಲ್ಲಿ ಆಗಬಹುದಾದ ಬಾರಿ ಮುಖಭಂಗವನ್ನು ತಪ್ಪಿಸಿ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವುದು ನಾಡಿನ ಲಿಂಗಾಯತ ಸ್ವಾಮೀಜಿಗಳು ಮತ್ತು ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರ ಒಟ್ಟಾರೆ ಅಭಿಪ್ರಾಯವಾಗಿದೆ.