ಬೆಳಗಾವಿ: ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಉದ್ಯೋಗ ಕೋಶ ಮತ್ತು ಐಕ್ಯೂಎಸಿ ಹಾಗೂ ಟಿಸಿಎಸ್ ಸಹಯೋಗದೊಂದಿಗೆ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಉದ್ಯೋಗ ನೋಂದಣಿ ಅಭಿಯಾನವನ್ನು ಟಿ.ಸಿ.ಎಸ್.ನ ಎಚ್ಆರ್ ತಂಡದ ಸದಸ್ಯ ವಿಜಯ್ ಕುಮಾರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಟಿಸಿಎಸ್ ಎಂಬುದು ಭಾರತೀಯ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದ್ದು ಮಾಹಿತಿ ತಂತ್ರಜ್ಞಾನ ಮತ್ತು ಸಲಹಾ ಸೇವೆಗಳಲ್ಲಿ ಪರಿಣತಿಯನ್ನು ಹೊಂದಿದೆ. ಇದು ಟಾಟಾ ಗ್ರೂಪ್ನ ಸಮೂಹ ಸಂಸ್ಥೆಯಾಗಿದ್ದು, ಬಿಸಿನೆಸ್ ಪ್ರೊಸೆಸ್ ಔಟ್ಸೂರ್ ಸಿಂಗ್ ಸೇವೆಗಳಲ್ಲಿ ಅತಿ ಹೆಚ್ಚು ಸಹಾಯವನ್ನು ನೀಡುವ ಕಂಪನಿಗಳಲ್ಲಿ ಒಂದಾಗಿದೆ. ಪ್ರವೇಶ ಮಟ್ಟದ ಈ ಕಂಪನಿಯು ಪದವೀಧರರಿಂದ ಬಿಸಿನೆಸ್ ಪ್ರೋಸೆಸ್ ಸರ್ವಿಸಸ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ತಾವೆಲ್ಲರೂ ನೋಂದಣಿ ಮಾಡಬೇಕೆಂದು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಟಿಸಿಎಸ್ ನ ಟ್ಯಾಲೆಂಟ್ ಎಕ್ವೈಸೇಶನ್ ಹೆಚ್. ಆರ್. ತಂಡದ ಸದಸ್ಯ ಗಿರೀಶ್ ಪ್ರಕಾಶ ಮಾತನಾಡಿ 2026 ನೇ ಸಾಲಿನ ಉದ್ಯೋಗಾವಕಾಶದ ಪ್ರವೇಶ ಮಟ್ಟದ ನೊಂದಣಿ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು.
ಈ ತಂಡದ ಸದಸ್ಯ ಪ್ರದ್ಯುತ್ ಮಾತನಾಡಿ ಟಿ.ಸಿ.ಎಸ್. ನಿಂದ ನಡೆಸಲಾಗುವ ಈ ಉದ್ಯೋಗ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು, ಉದ್ಯೋಗಾವಕಾಶಗಳನ್ನು ಪಡೆಯುವುದರ ಮೂಲಕ ತಮ್ಮ ಆರ್ಥಿಕ ಸ್ವಾವಲಂಬನೆಯನ್ನು ಪಡೆಯಬೇಕೆಂದು ಹೇಳಿದರು.
ಟಿಸಿಎಸ್ ತಂಡದ ಸದಸ್ಯ ದಿವ್ಯಾ. ಪಿ ಮಾತನಾಡಿ ನೋಂದಣಿಯ ನಂತರ ಏರ್ಪಡಿಸಲಾಗುವ ಟಿಸಿಎಸ್ ಪರೀಕ್ಷೆಯ ಮಾದರಿ ಪಠ್ಯಕ್ರಮ, ಅನಂತರದ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ಅರ್ಜುನ ಜಂಬಗಿ ಅವರು, ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ಟಿಸಿಎಸ್ ಅವರು ಕಳೆದ ಬಾರಿಯೂ ನಮ್ಮ ಮಹಾವಿದ್ಯಾಲಯದಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಂಡು ನೂರಾರು ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ನೀಡಿದ್ದಾರೆ. ಈ ಸಲವು ಅಂತಿಮ ವರ್ಷದ ವಿದ್ಯಾರ್ಥಿಗಳೆಲ್ಲರೂ ನೋಂದಣಿ ಮಾಡಿಕೊಂಡು ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ವಿದ್ಯಾರ್ಥಿನಿ ಅನನ್ಯಾ ನಾಯಕ್ ನಿರೂಪಿಸಿದರು. ಡಾ. ನಮಿತಾ ಪೋತರಾಜ ಸ್ವಾಗತಿಸಿದರು, ಉದ್ಯೋಗ ಕೋಶದ ಸಂಯೋಜಕ ಡಾ. ಮುಕುಂದ ಮುಂಡರಗಿ ವಂದಿಸಿದರು. ಅಭಿಯಾನದಲ್ಲಿ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಅಂತಿಮ ವರ್ಷದ ಸುಮಾರು 300 ವಿದ್ಯಾರ್ಥಿಗಳು ಭಾಗವಹಿಸಿದ್ದರು.