ನವದೆಹಲಿ: ಛತ್ತೀಸಗಢದ ಸಣ್ಣ ಕಥೆಗಾರ ವಿನೋದ್
ಕುಮಾರ್ ಶುಕ್ಲಾ ಅವರು 59ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯಕ್ಕಾಗಿ ನೀಡುವ ಈ ಅತ್ಯುನ್ನತ ಪ್ರಶಸ್ತಿ ಛತ್ತೀಸಗಢ ರಾಜ್ಯದವರಿಗೆ ಇದೇ ಮೊದಲ ಬಾರಿಗೆ ಲಭಿಸಿದೆ.
ಹಿಂದಿ ಭಾಷೆಯ ಸಮಕಾಲೀನ ಬರಹಗಾರರಲ್ಲಿ 88 ವರ್ಷದ ವಿನೋದ್, ಪ್ರಮುಖರು. ಸಣ್ಣ ಕಥೆಗಳು, ಕವಿತೆ, ಪ್ರಬಂಧ… ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿನೋದ್ ಅವರು ಸಾಹಿತ್ಯ ರಚಿಸಿದ್ದಾರೆ. ಹಿಂದಿ ಭಾಷೆಗೆ ದೊರೆಯುತ್ತಿರುವ 12ನೇ ಜ್ಞಾನಪೀಠ ಪ್ರಶಸ್ತಿ ಇದಾಗಿದೆ. ಪ್ರಶಸ್ತಿಯು ₹11 ಲಕ್ಷ ನಗದು ಬಹುಮಾನ ಮತ್ತು ಸರಸ್ವತಿಯ ಕಂಚಿನ ಪ್ರತಿಮೆಯನ್ನು ಒಳಗೊಂಡಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಥೆಗಾರ್ತಿ ಪ್ರತಿಭಾ ರಾಯ್ ಅಧ್ಯಕ್ಷತೆಯ ಆಯ್ಕೆ ಸಮಿತಿಯು ವಿನೋದ್ ಅವರನ್ನು ಆಯ್ಕೆ ಮಾಡಿದೆ. ‘ಹಿಂದಿ ಸಾರಸ್ವತ ಲೋಕಕ್ಕೆ ವಿನೋದ್ ಅವರ ಕೊಡುಗೆಗಳನ್ನು ಗಮನಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಹಿತ್ಯ, ಕ್ರಿಯಾತ್ಮಕತೆ ಮತ್ತು ವಿಶಿಷ್ಟವಾದ ಬರಹ ಶೈಲಿಗಾಗಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ಸಮಿತಿ ಹೇಳಿದೆ.
ಪ್ರಮುಖ ಕೃತಿಗಳು: ‘ದಿವಾರ್ ಮೇ ಏಕ್ ಖಿಡಕಿ ರಹತೀ ಥಿ’ ಕೃತಿಗೆ ವಿನೋದ್ ಅವರಿಗೆ 1999ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ‘ನೌಕರ್ ಕಿ ಕಮೀಜ್’ (1979) ಅವರ ಪ್ರಮುಖ ಕೃತಿಯಾಗಿದೆ. ಈ ಕಾದಂಬರಿಯನ್ನೇ ಇಟ್ಟುಕೊಂಡು, ಇದೇ ಹೆಸರಿನ ಸಿನಿಮಾವನ್ನು ಮೌನಿ ಕೌಲ್ ಅವರು ನಿರ್ದೇಶಿಸಿದ್ದಾರೆ. ‘ಸಬ್ ಕುಚ್ ಹೋನಾ ಬಚಾ ರಹೇಗಾ’ (1992) ಅವರ ಪ್ರಮುಖ ಕವನ ಸಂಕಲನವಾಗಿದೆ.
* ಇದು ನಿಜಕ್ಕೂ ದೊಡ್ಡ ಪ್ರಶಸ್ತಿಯೇ ಸರಿ. ನನಗೆ ಇಂಥದ್ದೊಂದು ಪ್ರಶಸ್ತಿ ಲಭಿಸುತ್ತದೆ ಎಂದು ಎಣಿಸಿರಲಿಲ್ಲ. ಪ್ರಶಸ್ತಿಗಳಿಗೆಲ್ಲ ತಲೆಕೆಡಿಸಿಕೊಂಡವನೂ ನಾನಲ್ಲ. ನಾನು ಜ್ಞಾನಪೀಠ ಪಡೆಯುವುದಕ್ಕೆ ಅರ್ಹನಾಗಿದ್ದೇನೆ ಎಂದು ಸ್ನೇಹಿತರೊಂದಿಗೆ ಮಾತಕತೆ ನಡೆಸುವಾಗಲೆಲ್ಲಾ ಅವರು ನನಗೆ ಹೇಳುತ್ತಿದ್ದರು. ಅವರಿಗೆ ನಾನೇನು ಉತ್ತರಿಸಲಿ. ಹಿಂಜರಿಕೆಯಿಂದ ನಾನೇನು ಹೇಳುತ್ತಲೇ ಇರಲಿಲ್ಲ.
* ಬರವಣಿಗೆ ಎನ್ನುವುದು ಸಣ್ಣ ಕೆಲಸವಲ್ಲ. ನೀವು ಬರೆಯುತ್ತಿದ್ದರೆ ಸದಾ ಬರೆಯುತ್ತಲೇ ಇರಿ. ನಿಮ್ಮ ಮೇಲೆ
ನಿಮಗೆ ಆತ್ಮವಿಶ್ವಾಸವಿರಲಿ. ನಿಮ್ಮ ಪುಸ್ತಕ ಪ್ರಕಟವಾದ ಬಳಿಕ ಯಾರಾದರೂ ಅದನ್ನು ವಿಮರ್ಶಿಸಿದರೆ ಆ ವಿಮರ್ಶೆ ಬಗ್ಗೆ ನೀವು ಗಮನ ಹರಿಸಬೇಕು-ವಿನೋದ್ ಕುಮಾರ್ ಶುಕ್ಲಾ ಕಥೆಗಾರ