ದೆಹಲಿ :
ದೇಶದ ಚುನಾವಣಾ ಇತಿಹಾಸ ಬರೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತ ಹಾಗೂ ವಿರೋಧಪಕ್ಷಗಳು ಇದೀಗ ಭರ್ಜರಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. ಕರ್ನಾಟಕದ ಪ್ರಮುಖ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ತನ್ನ ಒಂದು ಕಾಲದ ಮಿತ್ರ ಬಿಜೆಪಿ ಕಡೆ ತನ್ನ ನಡಿಗೆ ಹಾಕುತ್ತಿದೆ. ಇದು ಕರ್ನಾಟಕ ರಾಜಕೀಯದಲ್ಲಿ ಹೊಸ ಅಧ್ಯಾಯವನ್ನೇ ಹುಟ್ಟು ಹಾಕುವ ನಿರೀಕ್ಷೆ ಇದೆ.
ಬಿಜೆಪಿ ಹೈಕಮಾಂಡ್ ಜೆಡಿಎಸ್ ಅನ್ನು ತನ್ನ ಪಕ್ಷದಲ್ಲಿ ವಿಲೀನ ಮಾಡಿಕೊಳ್ಳುವ ಬೇಡಿಕೆ ಮುಂದೆ ಇಟ್ಟಿದೆ. ಆದರೆ ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿಯೇ ಗುರುತಿಸಿಕೊಳ್ಳಲು ಮುಂದಾಗಿದ್ದು ವಿಲೀನದ ಬೇಡಿಕೆಯನ್ನು ತಳ್ಳಿ ಹಾಕಿದೆ, ಬಿಜೆಪಿಯಲ್ಲಿ ಕರ್ನಾಟಕ ರಾಜಕೀಯದಲ್ಲಿ ಹೇಳುವುದಾದರೆ ಪ್ರಬಲ ನಾಯಕರ ಕೊರತೆ ಎದುರಿಸುತ್ತಿದೆ. ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಬಿಜೆಪಿಗೆ ಸೆಳೆದುಕೊಂಡು ಅವರನ್ನೇ ಪ್ರತಿಪಕ್ಷ ನಾಯಕ ಹಾಗೂ ಭವಿಷ್ಯದಲ್ಲಿ ಮುಖ್ಯಮಂತ್ರಿ ಮಾಡುವ ಭರವಸೆಯನ್ನು ಬಿಜೆಪಿ ನೀಡಿದೆ. ಆದರೆ ಅವರು ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದು ಬಿಜೆಪಿಯೊಂದಿಗೆ ವಿಲೀನ ಬದಲು ಮೈತ್ರಿಗೆ ಒಲವು ತೋರಿದ್ದಾರೆ. ಕುಮಾರಸ್ವಾಮಿ ಬಿಜೆಪಿಗೆ ಬಂದಿದ್ದರೆ ಅವರಿಗೆ ಪ್ರತಿಪಕ್ಷ ನಾಯಕ ಸ್ಥಾನ ಕಟ್ಟಿಟ್ಟ ಬುತ್ತಿ ಆಗುತ್ತಿತ್ತು. ಆದರೆ ಇದೀಗ ಬಿಜೆಪಿ ಮತ್ತೊಬ್ಬ ನಾಯಕನನ್ನು ಪ್ರತಿ ಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಿಕೊಳ್ಳುವಂತೆ ಆಗಿದೆ. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಕರ್ನಾಟಕದ ಜೆಡಿಎಸ್ ಪ್ರಾಬಲ್ಯದ ಕ್ಷೇತ್ರಗಳ ಆ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ಉಳಿದಂತೆ ರಾಜ್ಯದ ಇದರ ಭಾಗಗಳಲ್ಲಿ ಜೆಡಿಎಸ್ ಬಿಜೆಪಿಯನ್ನು ಬೆಂಬಲಿಸಲಿದೆ.
ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಆಡಳಿತಾರೂಢ ಎನ್ಡಿಎ ಮತ್ತು ವಿಪಕ್ಷಗಳು ಅಂಕಿ-ಅಂಶಗಳೊಂದಿಗೆ ಹೈ ವೋಲ್ಟೇಜ್ ರಾಜಕೀಯ ಹಣಾಹಣಿಗೆ ಸಿದ್ಧತೆ ನಡೆಸಿವೆ.
ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್ಡಿಎ) ಮಂಗಳವಾರ ನವದೆಹಲಿಯಲ್ಲಿ ಬೃಹತ್ ಸಭೆ ಮಾಡುವ ಬಗ್ಗೆ ಘೋಷಿಸಿದ್ದು, ಇದಕ್ಕೆ ಸುಮಾರು 30 ಪಕ್ಷಗಳು ಮೈತ್ರಿಗೆ ಬೆಂಬಲವನ್ನು ಪುನರುಚ್ಚರಿಸುವ ನಿರೀಕ್ಷೆಯಿದೆ. ಇದೇವೇಳೆ ತಮ್ಮ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಂಡು ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಬಿಜೆಪಿಯನ್ನು ಎದುರಿಸಲು 24 ವಿರೋಧ ಪಕ್ಷಗಳು ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನಲ್ಲಿ ಸಭೆ ಸೇರಿ ಯೋಜನೆ ರೂಪಿಸಲಿವೆ. ಜುಲೈ 20 ರಂದು ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಈ ಪಕ್ಷಗಳು ಸಿದ್ಧತೆ ನಡೆಸಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ಡಿಎ ಸಭೆ ನಡೆಯಲಿದೆ. ಮಂಗಳವಾರ ಸಂಜೆ ದೆಹಲಿಯ ಅಶೋಕ್ ಹೋಟೆಲ್ನಲ್ಲಿ ನಡೆಯಲಿರುವ ಸಭೆಗೆ ತಮ್ಮ ಮಿತ್ರ ಪಕ್ಷಗಳನ್ನು ಹೊರತುಪಡಿಸಿ, ಬಿಜೆಪಿ ಹಲವಾರು ಹೊಸ ಮಿತ್ರರನ್ನು ಮತ್ತು ಕೆಲವು ಮಾಜಿ ಮಿತ್ರರನ್ನು ಕೂಡ ಆಹ್ವಾನಿಸಿದೆ. ಎನ್ಡಿಎಯಲ್ಲಿರುವ ಎಲ್ಲಾ ಪಕ್ಷಗಳು ಸಂಸತ್ತಿನಲ್ಲಿ ಅಸ್ತಿತ್ವವನ್ನು ಹೊಂದಿಲ್ಲ.
ಬಿಹಾರದ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಚಿರಾಗ್ ಪಾಸ್ವಾನ್, ಹಿಂದೂಸ್ತಾನಿ ಅವಾಮ್ ಮೋರ್ಚಾದ ಜಿತನ್ ರಾಮ್ ಮಾಂಝಿ, ರಾಷ್ಟ್ರೀಯ ಲೋಕ ಸಮತಾ ಪಕ್ಷದ ಉಪೇಂದ್ರ ಸಿಂಗ್ ಕುಶ್ವಾಹಾ ಮತ್ತು ವಿಕಾಸಶೀಲ ಇನ್ಸಾನ್ ಪಕ್ಷದ ಮುಖೇಶ್ ಸಹಾನಿ ಅವರನ್ನು ಈ ಸಭೆಗೆ ಆಹ್ವಾನಿಸಲಾಗಿದೆ. ಮತ್ತು ಅವರ ಪಕ್ಷಗಳನ್ನು ಎನ್ಡಿಎಗೆ ಸೇರಿಸಿಕೊಳ್ಳಲಾಗುತ್ತದೆ.
ಉತ್ತರ ಪ್ರದೇಶದಲ್ಲಿ ಅಖಿಲೇಶ ಯಾದವ್ ಅವರ ಸಮಾಜವಾದಿ ಪಕ್ಷದ ಮಿತ್ರಪಕ್ಷವಾಗಿದ್ದ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಓಂ ಪ್ರಕಾಶ್ ರಾಜಭರ್ ಅವರು ಭಾನುವಾರ ಬೆಳಿಗ್ಗೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ನಂತರ ಎನ್ಡಿಎಗೆ ಮರು ಸೇರ್ಪಡೆಗೊಳ್ಳುವುದಾಗಿ ಘೋಷಿಸಿದರು.
ಈ ಮಧ್ಯೆ ಉತ್ತರ ಪ್ರದೇಶದ ಮೌ ಜಿಲ್ಲೆಯ ಘೋಸಿಯ ಸಮಾಜವಾದಿ ಪಕ್ಷದ ಶಾಸಕ ದಾರಾ ಸಿಂಗ್ ಚೌಹಾಣ್ ಅವರು ನಿನ್ನೆ ಉತ್ತರ ಪ್ರದೇಶ ವಿಧಾನಸಭೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಆಂದ್ರಪ್ರದೇಶದಲ್ಲಿ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಮತ್ತು ಬಾದಲ್ ಕುಟುಂಬದ ನೇತೃತ್ವದ ಶಿರೋಮಣಿ ಅಕಾಲಿದಳವು ಹಲವು ಊಹಾಪೋಹಗಳ ನಂತರವೂ ಎನ್ಡಿಎ ಭಾಗವಾಗುವುದಿಲ್ಲ ಹಾಗೂ ಈ ಪಕ್ಷಗಳೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಇದು ಪಂಜಾಬ್ನಲ್ಲಿ ಏಕಾಂಗಿಯಾಗಿ ಚುನಾವಣೆಗೆ ಹೋಗಲಿದೆ ಹಾಗೂ ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಯೋಜಿಸಿದೆ ಎಂದು ಹೇಳಲಾಗುತ್ತಿದೆ.
ಎನ್ಡಿಎ ಪ್ರಸ್ತುತ ಬಿಜೆಪಿ, ಎಐಎಡಿಎಂಕೆ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್ಪಿಪಿ (ನ್ಯಾಷನಲ್ ಪೀಪಲ್ಸ್ ಪಾರ್ಟಿ), ಎನ್ಡಿಪಿಪಿ (ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ), ಎಸ್ಕೆಎಂ (ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ), ಜೆಜೆಪಿ (ಜನನಾಯಕ್ ಜನತಾ ಪಾರ್ಟಿ), ಐಎಂಕೆಎಂಕೆ ( ಭಾರತೀಯ ಮಕ್ಕಳ್ ಕಲ್ವಿ ಮುನ್ನೇತ್ರ ಕಜ್ಗಮ್), AJSU (ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್), ಆರ್ಪಿಐ (ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ), ಎಂಎನ್ ಎಫ್ (ಮಿಜೋ ನ್ಯಾಷನಲ್ ಫ್ರಂಟ್), ಟಿಎಂಸಿ (ತಮಿಳು ಮನಿಲಾ ಕಾಂಗ್ರೆಸ್), ಐಪಿಎಫ್ ಟಿ (ತ್ರಿಪುರ), ಬಿಪಿಪಿ (ಬೋಡೋ ಪೀಪಲ್ಸ್ ಪಾರ್ಟಿ), ಪಿಎಂಕೆ (ಪಾಟಲಿ ಮಕ್ಕಳ್ ಕಚ್ಚಿ), ಎಂಜಿಪಿ (ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ), ಅಪ್ನಾ ದಳ, ಎಜಿಪಿ (ಅಸ್ಸಾಂ ಗಣ ಪರಿಷತ್), ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ, ನಿಶಾದ್ ಪಾರ್ಟಿ, ಯುಪಿಪಿಎಲ್ (ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್), ಎಐಆರ್ಎನ್ಸಿ (ಅಖಿಲ ಭಾರತ ಎನ್ಆರ್ ಕಾಂಗ್ರೆಸ್ ಪುದುಚೇರಿ), ಶಿರೋಮಣಿ ಅಕಾಲಿದಳ ಸಂಯುಕ್ತ (ಧಿಂಧ್ಸಾ), ಮತ್ತು ಜನಸೇನಾ (ಪವನ್ ಕಲ್ಯಾಣ) ಹೀಗೆ 24 ಪಕ್ಷಗಳನ್ನು ಹೊಂದಿದೆ.
ಎನ್ಸಿಪಿ (ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಅಜಿತ್ ಪವಾರ್ ಬಣ), ಲೋಕ ಜನ ಶಕ್ತಿ ಪಾರ್ಟಿ (ರಾಮ್ ವಿಲಾಸ್), ಎಚ್ಎಎಂ (ಹಿಂದೂಸ್ತಾನಿ ಅವಾಮ್ ಮೋರ್ಚಾ), ಆರ್ಎಲ್ಎಸ್ಪಿ (ರಾಷ್ಟ್ರೀಯ ಲೋಕ ಸಮತಾ ಪಾರ್ಟಿ), ವಿಐಪಿ (ವಿಕಾಸಶೀಲ ಇನ್ಸಾನ್ ಪಾರ್ಟಿ), ಮತ್ತು ಎಸ್ಬಿಎಸ್ಪಿ (ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ) ಓಂ ಪ್ರಕಾಶ್ ರಾಜಭರ್) ಆಡಳಿತಾರೂಢ ಎನ್ಡಿಎ ಮೈತ್ರಿಕೂಟಕ್ಕೆ ಹೊಸದಾಗಿ ಸೇರ್ಪಡೆಯಾಗಲಿದ್ದಾರೆ.
ದೆಹಲಿಯ ಅಧಿಕಾರಶಾಹಿಯ ಮೇಲೆ ಹಿಡಿತ ಸಾಧಿಸಿದ ವಿವಾದಾಸ್ಪದ ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಆಮ್ ಆದ್ಮಿ ಪಕ್ಷದ ಅಭಿಯಾನಕ್ಕೆ ಕಾಂಗ್ರೆಸ್ ಬೆಂಬಲ ಘೋಷಣೆ ಮಾಡಿದ ನಂತರ ಆಮ್ ಆದ್ಮಿ ಪಾರ್ಟಿ ಬೆಂಗಳೂರಿನಲ್ಲಿ ಸೋಮವಾರದಿಂದ ನಡೆಯುವ ಎರಡು ದಿನಗಳ 24 ವಿರೋಧ ಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದೆ.