ಬೆಳಗಾವಿ :ಕ್ರೀಡೆಗಳು ಒಬ್ಬ ವ್ಯಕ್ತಿಯನ್ನು ಮಾನಸಿಕ ಹಾಗೂ ದೈಹಿಕ ಅಷ್ಟೇ ಅಲ್ಲದೆ ಶ್ರೇಷ್ಠ ನಾಯಕನನ್ನಾಗಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಬೆಳಗಾವಿ ಕಂಗ್ರಾಳಿಯ ಪೊಲೀಸ್ ತರಬೇತಿ ಶಾಲೆಯ ಕಾನೂನು ಇನ್ಸ್ಪೆಕ್ಟರ್ ಜಾವೇದ ಮುಶಾಪುರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶುಕ್ರವಾರ ಅವರು ನಗರದ ಕೆಎಲ್ ಇ ಸಂಸ್ಥೆಯ ಜಿಎ ಸಂಯುಕ್ತ ಪದವಿಪೂರ್ವ ಸಂಯುಕ್ತ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಸುಮಾರು 16 ವರ್ಷಗಳ ಕಾಲ ಬೆಳಗಾವಿಯಲ್ಲಿ ವಿವಿಧ ಪೊಲೀಸ್ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ನಾನು ಬೆಳಗಾವಿಗೆ ಮೊದಲು ಬಂದಾಗ ಇಲ್ಲಿಯ ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸಿದೆ. ಆರಂಭದ ದಿನಗಳಲ್ಲಿ ಅಂದರೆ 2007-2008 ರಲ್ಲಿ ಮತ್ತು ಈಗಿನ ಸಂದರ್ಭ ಸಾಕಷ್ಟು ಬದಲಾವಣೆ ಕಂಡಿದ್ದೇನೆ. ಆಗಿನ ಕಾಲದಲ್ಲಿ ನಡೆಯುತ್ತಿದ್ದ ಅಪರಾಧ ಹಾಗೂ ಈಗಿನ ಕಾಲದಲ್ಲಿ ನಡೆಯುವ ಅಪರಾಧದಲ್ಲೂ ಹಲವಾರು ಅಜಗಜಾಂತರ ಬದಲಾವಣೆಗಳು ಕಂಡು ಬಂದಿವೆ. ಬೆಳಗಾವಿಯಲ್ಲಿ ನಾನು ಕರ್ತವ್ಯ ನಿರ್ವಹಿಸುತ್ತಿರುವಾಗ ಆಗಿನ ಸಂದರ್ಭದಲ್ಲಿ ಅಪರಾಧಗಳು ತೀರಾ ಕಡಿಮೆ ಇದ್ದವು. ಆದರೆ ಇಂದು ವಿಪರೀತ ಜಾಸ್ತಿಯಾಗಿವೆ. ಅದೇ ರೀತಿ ಅಪರಾಧಗಳ ಸ್ವರೂಪದಲ್ಲಿಯೂ ಬದಲಾವಣೆ ಕಂಡಿದ್ದೇನೆ. ನಾನು ಹಳ್ಳಿಯಲ್ಲಿ ಕಲಿಯುವಾಗ ಹಿರಿಯರ ಎದುರೇ ಹೋಗುತ್ತಿರಲಿಲ್ಲ. ಆಗ ನಮ್ಮ ಊರಿನ ಹೋಟೆಲ್ ಗಳಿಗೆ ತೆರಳಿ ಚಹಾ ಕುಡಿಯುವುದೇ ಒಂದು ದೊಡ್ಡ ಅಪರಾಧವಾಗುತ್ತಿತ್ತು. ಆಗ ನಮ್ಮ ಊರಿನ ಹಿರಿಯರು ನಮ್ಮನ್ನು ಪ್ರಶ್ನಿಸುತ್ತಿದ್ದರು. ನಿಮ್ಮ ತಾಯಿ ಮನೆಯಲ್ಲಿ ರೊಟ್ಟಿ ಮಾಡಿರಲಿಲ್ಲವೇ ಎಂದು ನಮ್ಮನ್ನು ಕೇಳುತ್ತಿದ್ದರು. ಆಗ ಹೊಟೇಲಲ್ಲಿ ಚಹಾ ಕುಡಿಯುವುದೇ ಅಪರಾಧವಾಗಿತ್ತು. ಆದರೆ, ಇಂದಿನ ಪರಿಸ್ಥಿತಿ ಹಾಗಿಲ್ಲ. ನಮ್ಮ ಇಂದಿನ ಯುವ ಪೀಳಿಗೆ ಮಾದಕ ವಸ್ತುಗಳಾದ ಗಾಂಜಾ, ಅಫೀಮು ಮುಂತಾದವುಗಳನ್ನು ರಾಜಾರೋಷವಾಗಿಯೇ ಸೇವಿಸುತ್ತಿದ್ದಾರೆ. ಇದು ಅತ್ಯಂತ ಕಳವಳಕಾರಿ ಸಂಗತಿ. ಅದೇ ರೀತಿ ಡಾಲ್ಬಿ ಹಚ್ಚಿ ಕುಣಿಯುವುದರ ದುಷ್ಪರಿಣಾಮದ ಕುರಿತು ಸ್ವತಃ ತಾವೇ ಕಂಡ ಒಂದು ಕೆಟ್ಟ ಅನುಭವವನ್ನು ಬಿಚ್ಚಿಟ್ಟರು.
ನೀವು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಕ್ರೀಡೆಯಲ್ಲಿ ಪರಸ್ಪರ ಸಹಕಾರ ಭಾವನೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ ಅವರು, ಭವಿಷ್ಯದ ಜೀವನದಲ್ಲಿ ನೀಟ್ ಪರೀಕ್ಷೆಯಲ್ಲಿ ಸಾಧನೆಗೈದರೆ ಅಂತಹ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವೆ ಎಂದರು.
ಉಪ ಪ್ರಾಚಾರ್ಯ ಎಸ್ .ಆರ್. ಗದಗ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಆಜೀವ ಸದಸ್ಯ ಮಹಾದೇವ ಬಳಿಗಾರ ಉಪಸ್ಥಿತರಿದ್ದರು. ಸಾಧನ ಗುಗ್ಗರಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪಿ.ಎಸ್.ನಿಡೋಣಿ ಪಥ ಸಂಚಲನ ನಡೆಸಿಕೊಟ್ಟರು. ಸಿ.ಎಂ.ಪಾಗದ ಪ್ರಾಸ್ತಾವಿಕ ಮತ್ತು ಸ್ವಾಗತಿಸಿದರು. ಎಸ್ ಜೆ. ಏಳುಕೋಟಿ ಪರಿಚಯಿಸಿದರು. ಎಚ್.ಜಿ.ವೀರಗಂಟಿ ವಂದಿಸಿದರು. ಎ.ಆರ್. ಪಾಟೀಲ ಮತ್ತು ಪಿ.ಎಸ್.ಚಿಮ್ಮಡ ನಿರೂಪಿಸಿದರು.