ಬೆಳಗಾವಿ :
ಕರ್ನಾಟಕಕ್ಕೆ ತಮ್ಮನ್ನು ಸೇರಿಸಬೇಕೆಂದು ಪಂಚಾಯತಿಗಳಲ್ಲಿ
ನಿರ್ಣಯಗಳನ್ನು ಅಂಗೀಕರಿಸುತ್ತಿರುವ
ಮಹಾರಾಷ್ಟ್ರದ ಜತ್ತ,ಅಕ್ಕಲಕೋಟೆ
ತಾಲೂಕುಗಳ ಕನ್ನಡಿಗರ ಧ್ವನಿಯನ್ನು
ಮತ್ತು ಹೋರಾಟವನ್ನು ಮಹಾರಾಷ್ಟ್ರ
ಸರಕಾರ ಧಮನಿಸುವ ಪ್ರಯತ್ನ ಮಾಡುತ್ತಿದೆ. ಇದರ ವಿರುದ್ಧ ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಇಂದು ಬೆಳಗಾವಿ ಜಿಲ್ಲಾಧಿಕಾರಿ
ಕಚೇರಿಯ ಎದುರು ಪ್ರತಿಭಟನೆ
ನಡೆಸಿತು.
ಮಹಾರಾಷ್ಟ್ರ ಸರಕಾರ ಅಲ್ಲಿಯ
ಕನ್ನಡಿಗರ ಮೇಲೆ ಪೋಲೀಸರ ಮೂಲಕ
ದಬ್ಬಾಳಿಕೆ ನಡೆಸಿದ್ದು ನಿರ್ಣಯ
ಅಂಗೀಕರಿಸಿದ ಪಂಚಾಯತಿಗಳ
ಪ್ರಮುಖರನ್ನು ಬೆದರಿಸುವ ತಂತ್ರ ಅನುಸರಿಸುತ್ತಿದೆ. ಆದ್ದರಿಂದ ಕರ್ನಾಟಕ
ಸರಕಾರ ಈ ಕೂಡಲೇ ಇಬ್ಬರು ಹಿರಿಯ
ಸಚಿವರನ್ನು ಮತ್ತು ಗಡಿ ಸಂರಕ್ಷಣಾ
ಆಯೋಗದ ಅಧ್ಯಕ್ಷರನ್ನು ಜತ್ತ
ಪ್ರದೇಶಕ್ಕೆ ಕಳಿಸಬೇಕು. ಅಲ್ಲಿಯ
ಕನ್ನಡಿಗರೊಂದಿಗೆ ಚರ್ಚಿಸಬೇಕು. ಅವರ
ಸಮಸ್ಯೆಗಳ ಪರಿಹಾರಕ್ಕೆ ಸಾಧ್ಯವಿರುವ
ಎಲ್ಲ ಕ್ರಮಗಳನ್ನು ಕೈಕೊಳ್ಳಬೇಕು ಎಂದು
ಮುಖ್ಯಮಂತ್ರಿಗಳನ್ನು ಒತ್ತಾಯಿಸುವ
ಮನವಿಯನ್ನು ಜಿಲ್ಲಾಧಿಕಾರಿಗಳಿಗೆ
ಸಲ್ಲಿಸಲಾಯಿತು.
ಜತ್ತ ಪ್ರದೇಶವನ್ನು ಕರ್ನಾಟಕಕ್ಕೆ
ಸೇರಿಸಲು ಕ್ರಮ ಕೈಕೊಳ್ಳುವದಾಗಿ ನೀವು
15 ದಿನಗಳ ಹಿಂದೆ ಹೇಳಿಕೆ ನೀಡಿದ
ನಂತರ ಜತ್ತ, ಅಕ್ಕಲಕೋಟೆ ಕನ್ನಡಿಗರಲ್ಲಿ
ಹೊಸ ಆಶಾ ಭಾವನೆ ಮೂಡಿದೆ. ಅಲ್ಲದೇ ಅಲ್ಲಿಯ ಕನ್ನಡಿಗರು ಕರ್ನಾಟಕಕ್ಕೆ
ಸೇರುವ ತಮ್ಮ ಇಚ್ಛೆ ವ್ಯಕ್ತಪಡಿಸಿ
ನಿರ್ಣಯಗಳನ್ನು ಅಂಗೀಕರಿಸಲು
ಆರಂಭಿಸಿದ್ದಾರೆ. ಎರಡು ದಿನಗಳಿಂದ
ಅಲ್ಲಿಯ ಸರಕಾರ ಕನ್ನಡಿಗರ ವಿರುದ್ಧ
ಆಕ್ರಮಿಕ ನಿಲುವನ್ನು ತಳೆಯುತ್ತಿದ್ದಾರೆ.
ಪೋಲೀಸರು ಕನ್ನಡದ ಪ್ರಮುಖರಿಗೆ
ನೋಟೀಸು ನೀಡುವ ಮೂಲಕ
ಹೋರಾಟಗಳ ವಿರುದ್ಧ ಬೆದರಿಕೆ
ಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ
ಕರ್ನಾಟಕ ಸರಕಾರ ಮಹಾರಾಷ್ಟ್ರದ
ಕನ್ನಡಿಗರನ್ನು ನಡು ನೀರಿನಲ್ಲಿ
ಕೈಬಿಡಬಾರದು ಎಂದು ಬೊಮ್ಮಾಯಿ
ಅವರನ್ನು ಆಗ್ರಹಿಸಲಾಗಿದೆ.
ರಾಜ್ಯ ಸರಕಾರ ಜತ್ತ ಕನ್ನಡಿಗರ
ಬೆನ್ನಿಗೆ ನಿಲ್ಲದಿದ್ದರೆ ಅವರಿಗೆ ದ್ರೋಹ
ಬಗೆದಂತಾಗುತ್ತದೆ.ಆದ್ದರಿಂದ ಸರಕಾರ
ಎಚ್ಚೆತ್ತುಕೊಂಡು ತುರ್ತಾಗಿ ಕನ್ನಡಿಗರ
ನೆರವಿಗೆ ಧಾವಿಸಬೇಕೆಂದು ಮನವಿಯಲ್ಲಿ
ಬೊಮ್ಮಾಯಿ ಅವರನ್ನು ಒತ್ತಾಯಿಸಲಾಗಿದೆ.
ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ
ಚಂದರಗಿ, ಹೋರಾಟಗಾರರಾದ
ಎಮ್.ಜಿ.ಮಕಾನದಾರ, ರಮೇಶ
ಸೊಂಟಕ್ಕಿ, ಶಂಕರ ಬಾಗೇವಾಡಿ, ಮಲ್ಲಪ್ಪ
ಅಕ್ಷರದ, ಸಾಗರ ಬೋರಗಲ್ಲ, ರಜತ
ಅಂಕಲೆ , ಆದರ್ಶ ಅನಗೋಳ ಹಾಗೂ ಸುಮಾ ಪಾಟೀಲ ಮುಂತಾದವರು
ಮನವಿ ಸಲ್ಲಿಸಿದರು.