ಅಥಣಿ : ಸುಕ್ಷೇತ್ರ ಶೇಗುಣಸಿ ವಿರಕ್ತ ಮಠದ ಪೂಜ್ಯಶ್ರೀ ಲಿಂ. ಮುರುಘೇಂದ್ರ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಹಾಗೂ ಪ್ರಭುಲಿಂಗ ಲೀಲೆ ಪ್ರವಚನ ಕಾರ್ಯಕ್ರಮವು ಮಂಗಳೋತ್ಸವ ಕಾರ್ಯಕ್ರಮ ಗುರುವಾರ ಏಪ್ರಿಲ್ 20. ರಂದು ನೆರವೇರಲಿದೆ.
ಏ.20 ರಂದು ಮುಂಜಾನೆ 7 ಗಂಟೆಗೆ ಇಷ್ಡಲಿಂಗ ದೀಕ್ಷಾ, ರುದ್ರಾಕ್ಷಿಧಾರಣೆ ಸಮಾರಂಭ ಹಾಗೂ ಸಕಲ ವಾದ್ಯಗಳೊಂದಿಗೆ ಮಹೋತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗುವುದು. ಸಾಯಂಕಾಲ 5 ಗಂಟೆಗೆ ಮಹಾರಥೋತ್ಸವ ಹಾಗೂ ಸಂಜೆ 7 ಗಂಟೆಗೆ ಶಿವಾನುಭವ ಚಿಂತನಗೋಷ್ಠಿ ಜರುಗಲಿದೆ.
ಚಿಂತನಗೋಷ್ಠಿಯಲ್ಲಿ ಗದುಗಿನ ಜಗದ್ಗುರು ತೋಂಟದ ಸಿದ್ದರಾಮ ಶ್ರೀ. ನಾಗನೂರು ಡಾ. ಅಲ್ಲಮಪ್ರಭು ಶ್ರೀ, ಹಂದಿಗುಂದ ಶಿವಾನಂದ ಶ್ರೀ, ಹಲ್ಯಾಳ ಗುರುಸಿದ್ದ ಶ್ರೀಗಳ ಉಪಸ್ಥಿತಿಯಲ್ಲಿ ಶೇಗುಣಸಿ ವಿರಕ್ತ ಮಠದ ಪೀಠಾಧಿಪತಿ ಡಾ. ಮಹಾಂತ ಸ್ವಾಮಿಗಳವರ ಸಮ್ಮುಖದಲ್ಲಿ ನೆರವೇರುವುದು. 15 ದಿನಗಳ ಪರ್ಯಂತರವಾಗಿ ಜರುಗಿದ ಶ್ರೀ ಪ್ರಭುಲಿಂಗ ಲೀಲೆ ಪ್ರವಚನ ಕಾರ್ಯಕ್ರಮ ಮುಕ್ತಾಯದ ಜೊತೆ ಮಹಾಪ್ರಸಾದ ನೆರವೇರಲಿದೆ.
ಕೃಷ್ಣಾ ನದಿ ತಟದಲ್ಲಿರುವ ಶೇಗುಣಸಿ ವಿರಕ್ತ ಮಠ ಭವ್ಯ ಪರಂಪರೆ ಹೊಂದಿದೆ. ಶ್ರೀಮಠದ 10 ನೇ ಪೀಠಾಧಿಪತಿಗಳಾಗಿದ್ದ ಪೂಜ್ಯಶ್ರೀ ಲಿಂ. ಮುರುಘೇಂದ್ರ ಮಹಾಸ್ವಾಮಿಗಳು ತ್ರಿಕಾಲ ಜ್ಞಾನಿಗಳಾಗಿದ್ದರು. ಪೂಜ್ಯರು ನಂಬಿದ ಭಕ್ತರ ನೋವ ನಿವಾರಿಸಿ ನಿರಂಜನ ಯೋಗಿಗಳಾಗಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗಗಳಲ್ಲಿ ಅಪಾರ ಭಕ್ತರನ್ನು ಹೊಂದಿದ್ದರು.
ನಾಗನೂರು ರುದ್ರಾಕ್ಷಿಮಠದ ಮಹಾಪ್ರಸಾದಿ ಪೂಜ್ಯ ಶ್ರೀ ಶಿವಬಸವ ಮಹಾಸ್ವಾಮಿಜಿ ಸ್ಥಾಪಿಸಿದ್ದ ಶ್ರೀ ಕುಮಾರೇಶ್ವರ ಉಚಿತ ಪ್ರಸಾದ ನಿಲಯದ ಬೆಳವಣಿಗೆಗೆ ಸಹಾಯ, ಸಹಕಾರ ನೀಡಿದವರು. ಶಿಕ್ಷಣ ಪ್ರೇಮಿಗಳಾದ ಶ್ರೀಗಳು ಗ್ರಾಮೀಣ ಭಾಗದ ಬಡಮಕ್ಕಳ ಕಲ್ಯಾಣಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಬೆಳೆಸಿದವರು. ಬೆಳಗಾವಿ ನಗರದಲ್ಲಿಯೂ ಶ್ರೀಮಠ ಹಾಗು ವಿದ್ಯಾರ್ಥಿ ನಿಲಯ ಸ್ಥಾಪಿಸಿದವರು. ಪೂಜ್ಯರ ಮಾರ್ಗದರ್ಶನದಂತೆ ಶ್ರೀಮಠದ ಜಾತ್ರಾಮಹೋತ್ಸವವು ಗುರುವಾರ ಜರುಗುತ್ತಿದೆ.