ಶ್ರೀನಗರ : ಜಮ್ಮು- ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ಸಿದ್ಧತೆಗಳು ಶುರುವಾಗಿದೆ. ಕೇಂದ್ರಾಡಳಿತ ಪ್ರದೇಶವಾಗಿರುವ ಕಾಶ್ಮೀರ ಸದ್ಯದಲ್ಲಿಯೇ ರಾಜ್ಯ ಸ್ಥಾನಮಾನವನ್ನು ಪಡೆಯಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ಮೂರನೇ ಬಾರಿ ಪ್ರಧಾನಿಯಾದ ಬಳಿಕ ಮೊದಲ ಬಾರಿ ಕಾಶ್ಮೀರಕ್ಕೆ ಭೇಟಿ ನೀಡಿದ ಮೋದಿ, ಸುಮಾರು 1,500 ಕೋಟಿ ರು ವೆಚ್ಚದ 84 ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ ಬಳಿಕ ಈ ಮಾತು ಹೇಳಿದರು.
370 ವಿಧಿ ರದ್ಧತಿ ಬಗ್ಗೆಯೂ ಮಾತನಾಡಿದ ಮೋದಿ ‘370ನೇ ವಿಧಿಯ ಗೋಡೆ 2019ರ ಆಗಸ್ಟ್ನಲ್ಲಿ ಕುಸಿದು ಬಿದ್ದಿದೆ. ಇಲ್ಲಿ ಭಾರತೀಯ ಸಂವಿಧಾನದ ಹಣ್ಣು ಬೆಳೆದಿದೆ. ಇವತ್ತು ಭಾರತೀಯ ಸಂವಿಧಾನ ಪೂರ್ಣ ಪ್ರಮಾಣದಲ್ಲಿ ಜಮ್ಮು – ಕಾಶ್ಮೀರದಲ್ಲಿ ಜಾರಿಯಾಗಿದೆ’ ಎಂದರು.
ಈ ವೇಳೆ ಕಾಶ್ಮೀರದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲಾಗುವುದು ಎನ್ನುವ ಭರವಸೆ ನೀಡಿದ ಅವರ, ‘ಕೇಂದ್ರಾಡಳಿತ ಪ್ರದೇಶದಲ್ಲಿ ಇತ್ತೀಚಿಗೆ ನಡೆದ ಭಯೋತ್ಪಾದಕ ಘಟನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಗೃಹ ಸಚಿವರು ಸಭೆ ನಡೆಸಿ, ಕಾರ್ಯ ವಿಧಾನ ಪರಿಶೀಲಿಸಿದ್ದಾರೆ. ಜಮ್ಮು ಕಾಶ್ಮೀರದ ಶತ್ರುಗಳಿಗೆ ತಕ್ಕ ಉತ್ತರವನ್ನು ನೀಡಲಾಗುವುದು. ಶತ್ರುಗಳನ್ನು ಶಿಕ್ಷಿಸುವ ಯಾವುದೇ ಅವಕಾಶವನ್ನೂ ಬಿಡುವುದಿಲ್ಲ’ ಎಂದರು.