ಬೆಳಗಾವಿ : ಕೊಲೆ ಮಾಡಲು ಪ್ರಯತ್ನಿಸಿದ ಆರೋಪಿಗೆ ಬೆಳಗಾವಿಯ ನ್ಯಾಯಾಲಯ ಜೈಲು ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಆರೋಪಿತನು ಹಾಗೂ ಜಯಮಾಲಾ ಶಿವಪ್ಪ ಅಡಕಿ ಇವರು ಗಂಡ-ಹೆಂಡತಿ ಇದ್ದು, ಇವರ ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು.
ಆರೋಪಿತನು ಜಯಮಾಲಾ ಅಡಕಿ ಇವರ ಮೇಲೆ ಬೈಲಹೊಂಗಲ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಸದರಿ ಪ್ರಕರಣ ಮಾನ್ಯ ನ್ಯಾಯಾಲಯದಲ್ಲಿ ದಿನಾಂಕ: 29-09-2021 ರಂದು ವಿಚಾರಣೆಗಾಗಿ ನಿಗದಿಪಡಿಸಿದ್ದರಿಂದ ಜಯಮಾಲಾ ಅಡಕಿ ಅವರು ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಆಗಮಿಸಿ, ಮಾನ್ಯ ನ್ಯಾಯಾಲಯದಲ್ಲಿ ಹಾಜರಾದ ನಂತರ ಮಾನ್ಯ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಬೇರೊಂದು ದಿನಾಂಕಕ್ಕೆ ಮುಂದೂಡಿದಾಗ ಜಯಮಾಲಾ ಅಡಕಿ ಇವರು ನ್ಯಾಯಾಲಯದ ಆವರಣದಲ್ಲಿದ್ದ ಕ್ಯಾಂಟಿನ್ ನಿಂದ ಹೊರಗೆ ಬರುತ್ತಿರುವಾಗ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿತನು ಅವರನ್ನು ಮಚ್ಚಿನಿಂದ ನ್ಯಾಯಾಲಯದ ಆವರಣದಲ್ಲಿ ಎಡಗಡೆ ಕಿವಿಯ ಹತ್ತಿರ, ಬಲಗಡೆ ಭುಜಕ್ಕೆ, ತಲೆಗೆ, ಕುತ್ತಿಗೆಗೆ ಹೊಡೆದು ನೆಲಕ್ಕೆ ಉರಳಿಸಿ ಎಡಗಾಲು ಪಾದ ಕತ್ತರಿಸಿ ಎಡಗೈ ರಟ್ಟೆಗೆ, ಬಲಗೈ ಅಂಗೈಗೆ ಬಲವಾಗಿ ಮಚ್ಚಿನಿಂದ ಕೊಚ್ಚಿ ಭಾರಿ ಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನ ಪಟ್ಟ ಅಪರಾಧ ಎಸಗಿದ್ದ.
ತನಿಖಾಧಿಕಾರಿಯವರು ತನಿಖೆ ಕೈಗೊಂಡು ಆರೋಪಿತನ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಮಾನ್ಯ 9ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬೆಳಗಾವಿಯ ಪ್ರಭಾರಿ ನ್ಯಾಯಾಧೀಶರಾದ ಮಾನ್ಯ ಸುಭಾಶ ಸಂಕದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿ ಅವರು ಪ್ರಕರಣ ವಿಚಾರ ಮಾಡಿ ಆರೋಪಿ ಶಿವಪ್ಪ ನಿಂಗಪ್ಪ ಅಡಕಿ ಈತನ ಮೇಲೆ ಆರೋಪಣೆಗಳು ಸಾಬೀತಾಗಿವೆ ಎಂದು ದಿನಾಂಕ: 17-02-2026 ರಂದು ತೀರ್ಪು ನೀಡಿ, ಆರೋಪಿತನು ಭಾರತೀಯ ದಂಡ ಸಂಹಿತೆ ಕಲಂ. 307 ರ ಅಡಿಯಲ್ಲಿ ಎಸಗಿರುವ ಅಪರಾಧದ ಕುರಿತು 10 ವರ್ಷ ಕಾರಾಗೃಹ ಶಿಕ್ಷೆ ಮತ್ತು ರೂ. 25,000/- ದಂಡ ವಿಧಿಸಿ ದಿನಾಂಕ: 21-02-2026 ರಂದು ಪ್ರಕರಣದಲ್ಲಿ ಆದೇಶ ಹೊರಡಿಸಿರುತ್ತಾರೆ.
ಸರಕಾರದ ಪರವಾಗಿ ಕೃಷ್ಣ ನಾರಾಯಣ ಪಾಟೀಲ ಸರ್ಕಾರಿ ಅಭಿಯೋಜಕರು, 9ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿ ರವರು ಪ್ರಕರಣವನ್ನು ನಡೆಸಿ ವಾದ ಮಂಡಿಸಿದ್ದರು.


