ಬೆಳಗಾವಿ : ಬೆಳಗಾವಿಯ ಪೋಕ್ಸೊ ನ್ಯಾಯಾಲಯ ಮತ್ತೊಬ್ಬ ಅತ್ಯಾಚಾರಿಗೆ ಜೈಲು ಶಿಕ್ಷೆಯನ್ನು ವಿಧಿಸಿ ಮಹತ್ವದ ತೀರ್ಪು ನೀಡಿದೆ. ಬಾಲಕಿ ಇನ್ನೂ ಅಪ್ರಾಪ್ತೆ ಇದ್ದರೂ ಆಕೆಯನ್ನು ನಂಬಿಸಿ ಅಪಹರಣ ಮಾಡಿ ಅತ್ಯಾಚಾರ ಎಸಗಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಆರೋಪಿಗೆ ಪೋಕ್ಸೋ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಈತ ಮದುವೆಯಾಗುವುದಾಗಿ ಬಾಲಕಿಯನ್ನು ನಂಬಿಸಿ ಬೈಕಿನಲ್ಲಿ ಅಪಹರಣ ಮಾಡಿದ್ದ. ತನ್ನ ಸಂಬಂಧಿಕರ ಮನೆಯಲ್ಲಿಟ್ಟು ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕಾರಣಕ್ಕಾಗಿ ಆರೋಪಿಗೆ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆ ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಿದೆ.
ಖಾಸಬಾಗ ಭಾರತ ನಗರ ಐದನೇ ಕ್ರಾಸ್ನ ಆನಂದ ಶಿವಾಜಿ ಜಂತಿಕಟ್ಟಿ (25) ಶಿಕ್ಷೆಗೊಳಗಾದ ಆರೋಪಿ. 2021ರ ಆಗಸ್ಟ್ 9 ರಂದು ಮಧ್ಯಾಹ್ನ 3:00 ರ ಸುಮಾರಿಗೆ ಈತ ಸಂತ್ರಸ್ತೆಯನ್ನು ನಂಬಿಸಿ ತನ್ನ ಬೈಕಿನಲ್ಲಿ ಅಪಹರಿಸಿ ಹಲಗಾದ ತನ್ನ ಚಿಕ್ಕಮ್ಮನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಶಹಾಪುರ ಪೊಲೀಸ್ ಠಾಣೆಯ ಪಿ ಐ ಹೆಚ್ ವೈ ಕುದ್ರೇಮನಿ ಪ್ರಕರಣ ದಾಖಲಿಸಿದ್ದರು. ವಿನಾಯಕ ಬಡಿಗೇರ ಪ್ರಕರಣದ ತನಿಖೆ ಮುಂದುವರಿಸಿ ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶೆ ಸಿಎಂ ಪುಷ್ಪಲತಾ ವಿಚಾರಣೆ ನಡೆಸಿದ್ದರು. ಆರೋಪಿಗೆ ಕಲಂ 36ರ ಪ್ರಕಾರ 10 ವರ್ಷ ಜೈಲು ಶಿಕ್ಷೆ,ರೂ. 20 ಸಾವಿರ ದಂಡ, ತಪ್ಪಿದರೆ ಮತ್ತೊಂದು ವರ್ಷ ಜೈಲು ಶಿಕ್ಷೆ, ಕಲಂ 368 ರಡಿ ಏಳು ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ರೂ.5,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.


