ಬೆಳಗಾವಿ : ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಅವರು ಇಂದು ರಾಮದುರ್ಗ ತಾಲೂಕಿನ ಐತಿಹಾಸಿಕ ಶಬರಿಕೊಳ್ಳದ ಶ್ರೀ ಶಬರಿದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದು, ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಕೈಗೊಳ್ಳಬೇಕಾದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.
ಕ್ಷೇತ್ರವನ್ನು ವೀಕ್ಷಣೆ ಮಾಡಿದ ಸಂಸದರು ಇಲ್ಲಿ ಆಗಮಿಸುವ ಸಾವಿರಾರು ಭಕ್ತಾದಿಗಳ ಅನುಕೂಲಕ್ಕಾಗಿ ಇದನ್ನು ಪ್ರವಾಸಿ ತಾಣವಾಗಿ ಮಾಡುವ ಬಗ್ಗೆ ಹಾಗೂ ಅವಶ್ಯವಿರುವ ಎಲ್ಲಾ ಮೂಲಭೂತ ಒದಗಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರೊಂದಿಗೆ ಅವರು ಅವಶ್ಯವಾಗಿ ಚರ್ಚಿಸುವುದಾಗಿ ತಿಳಿಸಿದರು.
ಭಗವಾನ್ ಶ್ರೀ ರಾಮಚಂದ್ರನ ಭಕ್ತಳೆನಿಸಿದ ಶ್ರೀ ಶಬರಿಮಾತೆಯು ಆತನ ಮೇಲಿನ ಅತೀಯಾದ ವಾತ್ಸಲ್ಯದಿಂದಾಗಿ ಆಗಿನ ಕಾಲದಲ್ಲಿ ತಿನ್ನಲು ಬೋರೆಹಣ್ಣು ನೀಡಿದ ಈ ಶಬರಿಕೊಳ್ಳ ಪೂಣ್ಯ ಕ್ಷೇತ್ರವಾದ ಕಾರಣ ಇದು ಒಂದು ಐತಿಹಾಸಿಕ ಸ್ಥಳವಾಗಿ ಮಾರ್ಪಟ್ಟಿದೆ ಎಂದರೆ ತಪ್ಪಾಗಲಾರದು. ಇಲ್ಲಿರುವ ಕೊಳ್ಳದಲ್ಲಿ ಎಂದಿಗೂ ನೀರು ಜರಿಯಾಗಿ ವರ್ಷ ಉದ್ದಕ್ಕು ಹರಿಯುತ್ತಿರುವುದು ವಿಶೇಷ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಡಾ. ಕೆ. ವಿ ಪಾಟೀಲ, ಮುಖಂಡರಾದ ಮಲ್ಲಣ್ಣ ಯಾದವಾಡ, ರಾಜೇಶ ಬೀಳಗಿ, ಸಂಗನಗೌಡರ ಪಾಟೀಲ, ನಿಂಗಪ್ಪ ಮೆಳ್ಳಿಕೇರಿ, ಮಹಾದೇವಪ್ಪ ಮದಕಟ್ಟಿ, ಶ್ರೀಶೈಲ್ ಮಲ್ಲಿಕೇರಿ, ನಿಂಗಪ್ಪ ಮುಳ್ಳೂರ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ನಾರಾಯಣ್ ಹುಲಿಗೆರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.