ಬೆಳಗಾವಿ: ಲೋಕಸಭಾ ಚುನಾವಣೆ ನಿಮಿತ್ತ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಬಿಜೆಪಿ ಜಗದೀಶ ಶೆಟ್ಟರ್ ಅವರು ಮೂಡಲಗಿ ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.
ಲೋಕಸಭಾ ಚುನಾವಣೆಯ ಅಂಗವಾಗಿ ಮೂಡಲಗಿ ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಬಹಿರಂಗ ಸಭೆ ನಡೆಸಿ ಮತಯಾಚನೆ ಮಾಡಿದರು. ರೋಡ್ ಶೋ ವೇಳೆ ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯಗಳ ಮೂಲಕ ಜಗದೀಶ್ ಶೆಟ್ಟರ್ ಅವರಿಗೆ ಭವ್ಯವಾಗಿ ಸ್ವಾಗತ ಕೋರಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸಚಿವ ಮುರಗೇಶ್ ನಿರಾಣಿ ಅವರು, ನಾನು 12 ಜಿಲ್ಲೆಗಳ ಪ್ರವಾಸ ಮಾಡಿದ್ದೇನೆ. ಮೂಡಲಗಿಯಲ್ಲಿ ಜನ ತೊರುತ್ತಿರುವ ಹುಮ್ಮಸ್ಸು ಬೇರೆಲ್ಲೂ ನೋಡಿಲ್ಲ. ರಾಜಕಾರಣದಲ್ಲಿ ಯಾವ ರೀತಿ ಇರಬೇಕು ಎಂದು ಬಾಲಚಂದ್ರ ಜಾರಕಿಹೊಳಿ ತೋರಿಸಿಕೊಟ್ಟಿದ್ದಾರೆ. ಸೂರ್ಯ-ಚಂದ್ರ ಹುಟ್ಟುವುದು ಎಷ್ಟು ಸತ್ಯವೂ ಮೋದಿಯವರು ಮತ್ತೆ ಪ್ರಧಾನಿ ಆಗಯವುದು ಅಷ್ಟೆ ಸತ್ಯ. ಹಾಗಾಗಿ ಈ ಹಿಂದೆ ದಿ. ಸುರೇಶ್ ಅಂಗಡಿಯವರಿಗೆ ನೀಡಿದ ಲೀಡ್ ಗಿಂತ ಹೆಚ್ಚಿನ ಲೀಡ್ ಜಗದೀಶ್ ಶೆಟ್ಟರ್ ಅವರಿಗೆ ನೀಡಬೇಕು ಎಂದು ಮುರಗೇಶ್ ನಿರಾಣಿ ಅವರು ಕರೆ ನೀಡಿದರು.
ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು, ಮೂಡಲಗಿ ಇತಿಹಾಸದಲ್ಲಿ ದಾಖಲೆ ಬರೆಯುವ ಸಮಾವೇಶ ಇದಾಗಿದೆ. ಈ ದೇಶದ ಭವಿಷ್ಯ ನರೇಂದ್ರ ಮೋದಿ ಮೇಲೆ ನಿಂತಿದೆ. ಮೋದಿ ಅಂತಹ ನಾಯಕ ನಮಗೆ ಸಿಕ್ಕಿದ್ದು ನಮ್ಮ ಸೌಭಾಗ್ಯ. ನರೇಂದ್ರ ಮೋದಿ ನಮ್ಮ ನಾಯಕ ಮುಂದಿನ ಪ್ರಧಾನಿ ಆದರೆ, ಇಂಡಿಯಾ ಮೈತ್ರಿಕೂಟದ ನಾಯಕ ಯಾರು..? ರಾಹುಲ್ ಗಾಂಧಿನಾ, ಮಮತಾ ಬ್ಯಾನರ್ಜಿನಾ, ಮಲ್ಲಿಕಾರ್ಜುನ ಖರ್ಗೆನಾ, ಅಖಿಲೇಶ್ ಯಾದವನಾ ಅಥವಾ ಜೈಲಿನಲ್ಲಿ ಇರುವ ಕೇಜ್ರೀವಾಲ ಎಂದು ಪ್ರಶ್ನಿಸಿದರು. ನಮಗೆ ನಿಜವಾದ ಗ್ಯಾರಂಟಿ ದೇಶದ ರಕ್ಷಣೆ, ದೇಶದ ಸುಭದ್ರತೆ, ದೇಶದ ಗೌರವ ಇದುವೇ ಮೋದಿಯವರ ಗ್ಯಾರಂಟಿ ಎಂದು ತಿಳಿಸಿದರು.
ಕೇಂದ್ರದ ಅನೇಕ ಯೋಜನೆಗಳು ಎಲ್ಲಾ ವರ್ಗದವರಿಗೆ ಸಿಗುತ್ತಿದೆ. ಬಿಜೆಪಿ ಸರ್ಕಾರ ಎಲ್ಲಾ ವರ್ಗದವರಿಗೆ ಎಲ್ಲಾ ಯೋಜನೆಗಳು ನೀಡಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಠಿಕರ ಮಾಡುತ್ತಿದೆ. ವಿಧಾನ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ ಅಂದರು ಅದನ್ನು ಖಂಡಿಸುವ ಕೆಲಸ ಕಾಂಗ್ರೆಸ್ ಮಾಡಿಲ್ಲ. ನಾನು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ಬೆಳಗಾವಿಯನ್ನು ಸಾಕಷ್ಟು ಅಭಿವೃದ್ಧಿ ಮಾಡುತ್ತೇನೆ. ಬೆಳಗಾವಿಯನ್ನು ಬೆಂಗಳೂರಿನ ಹಾಗೆ ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡುತ್ತೇನೆ ಎಂದು ಪ್ರಮಾಣ ಮಾಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ನಮಗೆ ಎಲ್ಲಾ ಜಾತಿ, ಎಲ್ಲಾ ಸಮಾಜ ಸಮಾನವಾಗಿದೆ. ನಮ್ಮ ಕ್ಷೇತ್ರದಲ್ಲಿ ಎಲ್ಲರೂ ಸರ್ವಜನಾಂಗದ ಶಾಂತಿಯ ತೋಟ ಎನ್ನುವ ರೀತಿಯಲ್ಲಿ ಬಾಳುತ್ತಿದ್ದೇವೆ. ಮೇ.7 ರಂದು ಏನೇ ಆದರು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಗೆ ಮತ ನೀಡಿ, ಅವರಿಗೆ ಗೆಲ್ಲಿಸಬೇಕು. ಮುಂದೆ ಎನೆ ಆದರೂ ನಾವು ನಿಮ್ಮ ಜೊತೆ ಇರುತ್ತೇವೆ. ನನ್ನನ್ನು ನಿಮ್ಮ ಮನೆಮಗನ ರೀತಿಯಲ್ಲಿ ಆಶಿರ್ವಾದ ಮಾಡಿದ ಹಾಗೆ ಜಗದೀಶ್ ಶೆಟ್ಟರ್ ಅವರನ್ನು ಕೂಡಾ ಗೆಲ್ಲಿಸಬೇಕು. ಜಗದೀಶ್ ಶೆಟ್ಟರ್ ಅವರು ಗೆಲ್ಲಬೇಕು ಎಂಬ ಆಸೆ ನಮಗೆ ಇದೆ. ಹಾಗಾಗಿ ಮೇ 7 ರಂದು ಬಿಜೆಪಿಗೆ ವೋಟ್ ಹಾಕಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಮಂಡಳ ಅಧ್ಯಕ್ಷ ಮಹಾದೇವಪ್ಪ ಶೇಕಿ, ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ, ಇಂದಿರಾ ಅಂತರಗಟ್ಟಿ, ಸತೀಶ್ ಒಂಟಗೋಡಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
*ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಭರ್ಜರಿ ಪ್ರಚಾರ*
*ಮೂಡಲಗಿ-ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ ಹೋದಲ್ಲೆಲ್ಲ ಜಗದೀಶ್ ಶೆಟ್ಟರ್ ಗೆ ಅಭೂತಪೂರ್ವ ಬೆಂಬಲ*
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಬುಧವಾರ ಮೂಡಲಗಿ-ಅರಭಾವಿ ವಿಧಾನಸಭಾ ವ್ಯಾಪ್ತಿಯ ಮೇಳವಂಕಿ, ಕೌಜಲಗಿ, ಕುಲಗೋಡ, ವಡೇರಹಟ್ಟಿ ಹಾಗೂ ಮುಡಲಗಿಯಲ್ಲಿ ಬೃಹತ್ ಸಮಾವೇಶ್ ನಡೆಸಿದರು. ಈ ವೇಳೆ ಶಾಸಕ ಬಾಲಚಂದ್ರ, ಮಾಜಿ ಸಚಿವ ಮುರಗೇಶ ನಿರಾಣಿ, ಮಾಜಿ ವಿಧಾನ ಪರಿಷತ ಸದಸ್ಯ ಮಹಾಂತೇಶ ಕವಟಗಿಮಠ, ಸೇರಿದಂತೆ ಅನೇಕ ನಾಯಕರು ಜಗದೀಶ್ ಶೆಟ್ಟರ್ ಅವರಿಗೆ ಸಾಥ್ ನೀಡದರು.
ಮೂಡಲಗಿ-ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ ದಿನವಿಡಿ ಜಗದೀಶ ಶೆಟ್ಟರ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಅಬ್ಬರದ ಪ್ರಚಾರ ನಡೆಸಿದರು. ಈ ವೇಳೆ ಹೋದಲ್ಲೆಲ್ಲ ಜನ ಅಭೂತಪೂರ್ವ ಬೆಂಬಲ ಸೂಚಿಸಿದ್ದಾರೆ.