ಬೆಳಗಾವಿ : ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಮಹತ್ವದ ವಿಷಯಗಳ ಚರ್ಚೆ ನಡೆಸಿದರು. ನನೆಗುದಿಗೆ ಬಿದ್ದಿರುವ ಹಲವು ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಅವರು ಪ್ರಧಾನಿಯರಲ್ಲಿ ಮನವಿ ಮಾಡಿಕೊಂಡರು.
ನರೇಂದ್ರ ಮೋದಿ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ, “ನೂತನ ವರ್ಷ – 2025″ ದ ಶುಭಾಶಯ ಕೋರಿದರು. ಭೇಟಿಯಾದ ಸಂದರ್ಭದಲ್ಲಿ ಪ್ರಥಮ ಬಾರಿಗೆ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು ಚುನಾವಣೆಯ ಸಂದರ್ಭದಲ್ಲಿ ಸ್ವತಹ ಬೆಳಗಾವಿ ನಗರಕ್ಕೆ ಆಗಮಿಸಿ, ಅತ್ಯುತ್ತಮ ಸಹಕಾರವನ್ನು ನೀಡಿದ್ದನ್ನು ಸಂಸದರು ಮೋದಿಜಿಯವರೊಂದಿಗೆ ಸ್ಮರಿಸಿದರು. ಸಂಸದರು ಸನ್ಮಾನಿಸಲು ಹೋದಾಗ ನಾನು ಸಾಮಾನ್ಯ ಕಾರ್ಯಕರ್ತ ಸನ್ಮಾನ ಬೇಡ ಎಂದು ಕುಟುಂಬದ ಆತ್ಮೀಯ ಸದಸ್ಯರಂತೆ ಸಂಸದರ ಕುಶಲೊಪರಿಯನ್ನು ಪ್ರಧಾನ ಮಂತ್ರಿಗಳು ವಿಚಾರಿಸಿದರು.
ಈ ಸಂದರ್ಭದಲ್ಲಿ ಸಂಸದರು ಸವಿ ನೆನಪಿಗಾಗಿ ಹುಬ್ಬಳ್ಳಿ ಸಾಹಿತ್ಯ ಭಂಡಾರ ಪ್ರಕಟ ಮಾಡಿದ ” Temple treasures a journey through time ” ಪುಸ್ತಕವನ್ನು ನೀಡಿದರು.
ಸಂಸದರು ಸವದತ್ತಿಯ ಶ್ರೀ ಕ್ಷೇತ್ರ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಕ್ಕೆ ನರೇಂದ್ರ ಮೋದಿಜಿಯವರಿಗೆ ಧನ್ಯವಾದಗಳನ್ನು ತಿಳಿಸಿ, ಅದೇ ರೀತಿ ರಾಮದುರ್ಗ ತಾಲೂಕಿನಲ್ಲಿರುವ ಐತಿಹಾಸಿಕ ಶಬರಿ ಕೊಳ್ಳವನ್ನು ಸಹ ಅಭಿವೃದ್ಧಿಪಡಿಸುವಂತೆ ವಿನಂತಿಸಿದರು.
ಬೆಂಗಳೂರು – ಧಾರವಾಡ ನಡುವೆ ಸದ್ಯ ಸಂಚರಿಸುತ್ತಿರುವ “ವಂದೇ ಭಾರತ” ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಬೆಳಗಾವಿಯವರೆಗೆ ವಿಸ್ತರಿಸಿ ಬೆಳಗಾವಿ ಜಿಲ್ಲೆಯ ನಿವಾಸಿಗಳ ಅನೇಕ ದಿನಗಳ ಬೇಡಿಕೆಯನ್ನು ಪರಿಗಣಿಸುವಂತೆ ವಿನಂತಿಸಿ, ಮನವಿ ಮಾಡಿದರು.
ವಿಮಾನಯಾನ ಸೇವೆಗೆ ಸಂಬಂಧಿಸಿ “ಉಡಾನ್ 3.0” ಯೋಜನೆಯ ಅವಧಿಯನ್ನು ಇನ್ನೂ ಹೆಚ್ಚಿಸಿದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಮತ್ತು ಬೆಳಗಾವಿ ನಗರ ಹಾಗೂ ಟು ಟಯರ್ ಸಿಟಿಗಳ ವಿಮಾನಯಾನ ಸೇವೆಯ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಪ್ರಧಾನಮಂತ್ರಿಯವರಲ್ಲಿ ವಿನಂತಿಸಿದರು.
ಬೇಡಿಕೆಯನ್ನು ಅವಲೋಕಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇದನ್ನು ಈಡೇರಿಸುವ ಬಗ್ಗೆ ಕೇಂದ್ರ ರೈಲ್ವೆ ಸಚಿವರಿಗೆ ಅವಶ್ಯ ಸೂಚಿಸುವ ಕುರಿತು ಭರವಸೆಯನ್ನು ನೀಡಿರುವುದಾಗಿ ಜಗದೀಶ ಶೆಟ್ಟರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.