ಬೆಳಗಾವಿ :ದೇಶದ ಸ್ವಾತಂತ್ರ್ಯ ಹೋರಾಟ ಉಚ್ಛ್ರಾಯ ಘಟ್ಟದಲ್ಲಿದ್ದ ಸಂದರ್ಭದಲ್ಲಿ, ನಮ್ಮ ಬೆಳಗಾವಿಯ ನೆಲದಲ್ಲಿ ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನಕ್ಕೆ ಇಂದು ಶತಮಾನದ ಸಂಭ್ರಮ. ಈ ಸಂಭ್ರಮಾಚರಣೆಯ ನಿಮಿತ್ತ ರಾಜ್ಯ ಸರ್ಕಾರವು ‘ಗಾಂಧಿ ಭಾರತ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿರುವುದು ಸ್ವಾಗತಾರ್ಹ.
ಈ ಕಾರ್ಯಕ್ರಮವು ಗಾಂಧಿಜೀ ಅವರ ತತ್ವಾದರ್ಶಗಳನ್ನು & ಸಂದೇಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಕಾರ್ಯಕ್ರಮವಾಗಬೇಕಿತ್ತು.
ಆದರೆ, ಈ ಕಾರ್ಯಕ್ರಮದ ರೂಪುರೇಷೆಗಳನ್ನು ನೋಡಿದರೆ, ಇದೊಂದು ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಗಾಂಧಿಜೀ ಅವರ ಹೆಸರಿನಲ್ಲಿ ಸಿದ್ದರಾಮಯ್ಯನವರ ಸರ್ಕಾರ ಜನರ ತೆರಿಗೆ ದುಡ್ಡಲ್ಲಿ, ಕಾಂಗ್ರೆಸ್ ಪಕ್ಷದ ಜಾತ್ರೆ ಮಾಡುತ್ತಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ನಕಲಿ ಗಾಂಧಿಗಳ ಗುಲಾಮಗಿರಿ ಮಾಡಲು, ಮಹಾತ್ಮ ಗಾಂಧಿಜೀಯವರ ಹೆಸರನ್ನು ಬಳಸಿಕೊಂಡು ರಾಜ್ಯದ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್ ಎಂಬುದು ರಾಜಕೀಯ ಪಕ್ಷವಾಗಿರಲಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ವೇದಿಕೆಯಾಗಿತ್ತು. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕೆಂದು ಮಹಾತ್ಮರು ಬಯಸಿದ್ದರು. ಆದರೆ ಅವರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷವು, ಇಂದು ಅವರ ಹೆಸರಿನಲ್ಲಿ ಕಾರ್ಯಕ್ರಮ ನಡೆಸುತ್ತಿರುವುದು ಹಾಸ್ಯಾಸ್ಪದ.
ಮಹಾತ್ಮರ ಅಂದಿನ ಬೆಳಗಾವಿ ಅಧಿವೇಶನವು ಕಾಂಗ್ರೆಸ್ನ ಕಡು ವಿರೋಧಿಯಾಗಿದ್ದ ಸ್ವರಾಜ್ಯ ಪಕ್ಷವರನ್ನೂ ವೇದಿಕೆಯ ಮೇಲೆ ಒಂದುಗೂಡಿಸುವುದರ ಮೂಲಕ, ಐಕ್ಯತಾ ಸಮ್ಮೇಳನ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಆದರೆ, ಅದರ ಸಂಭ್ರಮಾಚರಣೆಯಲ್ಲಿ ನಡೆಯುತ್ತಿರುವ ಇಂದಿನ ಕಾರ್ಯಕ್ರಮಕ್ಕೆ ವಿರೋಧ ಪಕ್ಷದವರಿಗೆ ಕನಿಷ್ಠ ಸೌಜನ್ಯಕ್ಕೂ ಈ ಕಾಂಗ್ರೆಸ್ ಸರ್ಕಾರ ಆಹ್ವಾನ ನೀಡಿಲ್ಲ.
ಗಾಂಧೀಯವರು ತಮ್ಮ ಜೀವನದುದ್ದಕ್ಕೂ ಸತ್ಯವನ್ನು ಆಚರಿಸಿಕೊಂಡು ಬಂದಿದ್ದರು. ಆದರೆ, ಈಗಿನ ಕಾಂಗ್ರೆಸ್ ನಾಯಕರಿಗೆ ಸುಳ್ಳೇ ಅವರ ಮನೆ ದೇವರಾಗಿದೆ. ಮುಖ್ಯಮಂತ್ರಿಗಳು ತಮ್ಮ ಸಮ್ಮುಖದಲ್ಲೇ ಜಗದೀಶ ಶೆಟ್ಟರ ಅವರಿಗೆ ಕರೆ ಮಾಡಿ ಖುದ್ದು ಆಹ್ವಾನ ನೀಡಿದ್ದಾರೆಂಬ ಡಿ.ಕೆ ಶಿವಕುಮಾರ್ ಅವರ ಹೇಳಿಕೆ ಶುದ್ಧ ಸುಳ್ಳು. ಮುಖ್ಯಮಂತ್ರಿಗಳ ಕರೆ ಒತ್ತಟ್ಟಿಗಿರಲಿ, ಯಾವುದೇ ಹಿರಿಯ ಅಧಿಕಾರಿಗಳಿಂದಲೂ ನನಗೆ ಸೌಜನ್ಯಕ್ಕೂ ಅಧಿಕೃತ ಆಹ್ವಾನ ಬಂದಿಲ್ಲ. ಡಿ.ಕೆ ಶಿವಕುಮಾರ್ ಅವರು ಈ ರೀತಿ ಹಸಿ ಸುಳ್ಳುಗಳ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ.
ಇನ್ನೂ ಈ ಸಂದರ್ಭದಲ್ಲಿ ಅನವಶ್ಯಕವಾಗಿ ದಿ.ಸುರೇಶ ಅಂಗಡಿ ಅವರ ಸಾವನ್ನು ತಮ್ಮ ನೀಚ ರಾಜಕಾರಣಕ್ಕೆ ಉಪಯೋಗಿಸಿಕೊಳ್ಳುತ್ತಿರುವ ಡಿ.ಕೆ ಶಿವಕುಮಾರ್ ಅವರು, ತಮ್ಮ ನೀಚ-ನಿರ್ಲಜ್ಜ ರಾಜಕಾರಣದ ತುತ್ತ ತುದಿ ತಲುಪಿದ್ದಾರೆ. ಅಜಾತಶತ್ರುಗಳಾಗಿದ್ದ ದಿ. ಸುರೇಶ ಅಂಗಡಿಯವರು, ಬೆಳಗಾವಿ ಜನತೆಯ ಪ್ರೀತಿ, ಆಶೀರ್ವಾದಿಂದ ಕೇಂದ್ರ ಸಚಿವರಾಗಿದ್ದರು. ಕೊರೋನಾ ಮಹಾಮಾರಿಗೆ ಅವರು ಉಸಿರು ಚೆಲ್ಲಿದ ಬಳಿಕ, ಅವರನ್ನು ಕೊನೆಯದಾಗಿ ಕಣ್ತುಂಬಿಕೊಳ್ಳಬೇಕು, ಅವರು ಹುಟ್ಟಿ ಬೆಳೆದ ನೆಲದಲ್ಲಿಯೇ ಅವರ ಅಂತ್ಯಸಂಸ್ಕಾರ ಆಗಬೇಕೆಂದು ಬೆಳಗಾವಿ ಜನರ ಬೇಡಿಕೆಯಾಗಿತ್ತು. ರಾಜಕಾರಣದಾಚೆಗೂ ದಿ. ಸುರೇಶ್ ಅಂಗಡಿಯವರು, ನನಗೆ ಬಂಧುಗಳು ಮತ್ತು ಪ್ರಾಣ ಸ್ನೇಹಿತರಾಗಿದ್ದರು. ಅವರ ಪಾರ್ಥೀವ ಶರೀರವನ್ನು ಅವರ ಹುಟ್ಟೂರಿಗೆ ತರಬೇಕೆಂಬ ಹಂಬಲ ನನ್ನಲ್ಲಿಯೂ ಹೆಚ್ಚಿತ್ತು. ಆದರೆ, ಅಂದಿನ ಸಂದರ್ಭದಲ್ಲಿ ಸರ್ಕಾರದ ಕೊರೋನಾ ನಿಯಮಾವಳಿಗಳನ್ನು ನಾವು ಪಾಲಿಸಬೇಕಿತ್ತು. ಆದ್ದರಿಂದ, ಅವರ ಪಾರ್ಥಿವ ಶರೀರವನ್ನು ಇಲ್ಲಿಗೆ ತರಲಾಗಲಿಲ್ಲವೆಂಬ ಬೇಸರ ಇನ್ನೂ ನಮಗೆ ಕಾಡುತ್ತಿದೆ. ನೀತಿ-ನಿಯಮ, ಈ ನೆಲದ ಕಾನೂನುಗಳಿಗೆ ಎಂದಿಗೂ ಬೆಲೆ ಕೊಡದ, ಈ ಕಾಂಗ್ರೆಸ್ಸಿಗರು ಅಂತಹ ಅಜಾತ ಶತ್ರುವಿನ ಸಾವನ್ನೂ ತಮ್ಮ ರಾಜಕಾರಣದ ದಾಳವಾಗಿಸಲು ವಿಫಲ ಪ್ರಯತ್ನ ನಡೆಸುತ್ತಿರುವುದು ನಾಚಿಕೆಗೇಡಿನ ವಿಚಾರ.
ಇನ್ನೂ ಈ ಸರ್ಕಾರಿ ಪ್ರಾಯೋಜಿತ ಕಾಂಗ್ರೆಸ್ ಕಾರ್ಯಕ್ರಮದ ಸ್ವಾಗತ ಬ್ಯಾನರ್ಗಳಲ್ಲಿನ ಭಾರತದ ಭೂಪಟವನ್ನು ಗಮನಿಸಿದರೆ, ಈ ನಕಲಿ ಕಾಂಗ್ರೆಸ್ ಪಕ್ಷದ ನೈಜ ಮನಸ್ಥಿತಿ ಅರ್ಥವಾಗುತ್ತದೆ.
ಮಹಾತ್ಮ ಗಾಂಧಿಯವರು ಬೆಳಗಾವಿಯ ಇದೇ ನೆಲದಲ್ಲಿ ನಿಂತು, ವೇದಿಕೆ ಮೇಲಿದ್ದ ಮಹಮ್ಮದ್ ಅಲಿ ಜಿನ್ನಾ ಅವರ 9 ವರ್ಷದ ಮಗಳು ಗುಲ್ನಾರ್ಳನ್ನು ಉದ್ದೇಶಿಸಿ, “ಗೋಹತ್ಯೆ ನಾನು ಒಪ್ಪುವುದಿಲ್ಲ. ನಾನು ಸನಾತನಿ, ಹಿಂದೂ. ಹಾಗಾಗಿ, ನಾನು ಗೋಹತ್ಯೆ ಒಪ್ಪಲ್ಲ. ನಾನು ಗೋಹತ್ಯೆ ಯಾಕೆ ವಿರೋಧಿಸುತ್ತಿದ್ದೇನೆ ಎಂಬುದು ಈ ಬಾಲಕಿ ದೊಡ್ಡವಳಾದ ಮೇಲೆ ಆಕೆಗೆ ಅರ್ಥವಾಗುತ್ತದೆ” ಎಂದಿದ್ದರು. ಗಾಂಧಿಜೀಯವರ ಈ ಆಶಯಕ್ಕೆ ತದ್ವಿರುದ್ಧರಾಗಿ ಗೋಹತ್ಯೆಯ ಪರವಿರುವ ಈ ನಕಲಿ ಗಾಂಧಿಗಳಿಗೆ, ಮಹಾತ್ಮರ ಹೆಸರಿನಲ್ಲಿ ಕಾರ್ಯಕ್ರಮ ಮಾಡುವುದು ಬಿಡಿ, ಅವರ ಹೆಸರೆತ್ತಲೂ ಇವರಿಗೆ ಯೋಗ್ಯತೆ ಇಲ್ಲ ಆಕ್ರೋಶ ವ್ಯಕ್ತಪಡಿಸಿದರು.