ಬೆಳಗಾವಿ: ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ವ್ಯಕ್ತವಾಗುತ್ತಿದೆ. ಈ ಹಿಂದೆ ಸಚಿವರಾಗಿದ್ದ ಮುರುಗೇಶ್ ನಿರಾಣಿ ಅವರು ಬೆಳಗಾವಿ ಮತ್ತು ಹುಬ್ಬಳ್ಳಿಗೆ ಮಧ್ಯವರ್ತಿ ಸ್ಥಳದಲ್ಲಿರುವ ಕಿತ್ತೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದರು. ಆದರೆ ಅವರ ಸರಕಾರ ಅಧಿಕಾರದಿಂದ ಕೆಳಗಿಳಿದ ನಂತರ ಆ ಕನಸು ಭಗ್ನವಾಗಿದೆ. ಇದೀಗ ನೆರೆಯ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ ರಾಜ್ಯದ ಅತ್ಯಂತ ಹಳೆಯ ವಿಮಾನ ನಿಲ್ದಾಣವಾಗಿ ಗುರುತಿಸಲ್ಪಟ್ಟಿರುವ ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸಬೇಕು ಎನ್ನುವುದು ಈ ಭಾಗದ ಜನರ ಒತ್ತಾಸೆಯಾಗಿದೆ. ಒಂದು ಕಾಲದಲ್ಲಿ ವಿಭಾಗೀಯ ಕೇಂದ್ರವಾಗಿ ಹಾಗೂ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಕೇಂದ್ರಬಿಂದುವಾಗಿ ಈ ಭಾಗದ ಪ್ರಯಾಣಿಕರ ನೆಚ್ಚಿನ ವಿಮಾನ ನಿಲ್ದಾಣವನ್ನಾಗಿ ಗುರುತಿಸಲ್ಪಟ್ಟ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರೆತರೆ ಒಟ್ಟಾರೆ ಈ ಭಾಗದ ಸಮಗ್ರ ಅಭಿವೃದ್ಧಿ ಸಾಧ್ಯವಿದೆ.
ಮಹತ್ವದ ಸಭೆ : ಸುಮಾರು 82 ವರ್ಷಗಳಷ್ಟು ಹಳೆಯದಾಗಿರುವ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ವಿಮಾನ ನಿಲ್ದಾಣಕ್ಕೆ ಪೂರಕವಾಗಿ ಬೇಕಾಗುವ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಕುರಿತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಭಾರತೀಯ ವಾಯುಪಡೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಅವರು ಪತ್ರಕರ್ತರ ಜೊತೆ ಮಾತನಾಡಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡದ ಕಾಮಗಾರಿ ಶೇಕಡ 30ರಷ್ಟು ಮುಗಿದಿದ್ದು ಇಲ್ಲಿ ಕಾರ್ಗೋ ಸೇವೆಗಳಿಗೆ ಬೇಡಿಕೆ ಇದೆ. ಮುಂದಿನ ವರ್ಷದ ವೇಳೆಗೆ ಈ ಕಾಮಗಾರಿ ಪೂರ್ಣಗೊಂಡ ನಂತರ ಅಸ್ತಿತ್ವದಲ್ಲಿರುವ ಟರ್ಮಿನಲ್ ಅನ್ನು ಕಾರ್ಗೋ ಸೇವೆಗಳಿಗೆ ಬಳಸಿಕೊಂಡು ಇಲ್ಲಿಯ ಕೈಗಾರಿಕೆಗಳ ಬೇಡಿಕೆಗೆ ಅನುಕೂಲತೆ ಒದಗಿಸಿಕೊಡಲಾಗುವುದು ಎಂದು ತಿಳಿಸಿದರು. ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೇರಿರುವ 14 ಎಕರೆ ಜಮೀನು ಸದ್ಯ ಭಾರತೀಯ ವಾಯುಪಡೆಯ ನಿಯಂತ್ರಣದಲ್ಲಿದೆ. ಆದರೆ ಅದರ ಹಸ್ತಾಂತರದ ಬಳಿಕ ಅಗತ್ಯ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಪೂರಕವಾಗಲಿದೆ. ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿ ಪರಿಶೀಲನೆಯನ್ನು ನಿರಂತರವಾಗಿ ಮಾಡುತ್ತಿದ್ದು ಮಾಸಿಕವಾಗಿ ಸಭೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಳಗಾವಿಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪುನರುಚ್ಚರಿಸಿದರು. ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ಮಾರ್ಗ ನಿರ್ಮಾಣದ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಂಡಿದ್ದು ಇದಕ್ಕೆ ಕಂಡುಬಂದಿದ್ದ ಹಲವು ಸಮಸ್ಯೆ ಈಗಾಗಲೇ ಪರಿಹಾರ ಗೊಂಡಿದೆ. ಬೆಳಗಾವಿಯ ಅತ್ಯಂತ ಮಹತ್ವದ ರಿಂಗ್ ರಸ್ತೆ ಹಾಗೂ ಹಲಗಾ-ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಮುಂದಿನ 15 ದಿನಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಬೆಳಗಾವಿ-ಪುಣೆ ನಡುವಿನ ವಂದೇ ಭಾರತ್ ರೈಲು ಓಡಾಟದ ಕನಸು ಈಡೇರಿದೆ. ಹುಬ್ಬಳ್ಳಿವರೆಗೆ ಅದನ್ನು ವಿಸ್ತರಿಸಲಾಗಿದ್ದು ವಾರದಲ್ಲಿ ಆರು ದಿನ ಓಡಿಸಲು ನಿರ್ಧರಿಸಲಾಗಿತ್ತು. ಆದರೆ, ಸದ್ಯಕ್ಕೆ ಮೂರು ದಿನಕ್ಕೆ ಇಳಿಸಲಾಗಿದೆ. ಈ ಬಗ್ಗೆ ಮುಂದಿನ ವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಆರು ದಿನಗಳೂ ಓಡಿಸುವ ಬಗ್ಗೆ ಮನವರಿಕೆ ಮಾಡಲಾಗುವುದು. ಬೆಂಗಳೂರು ಹಾಗೂ ಧಾರವಾಡ ನಡುವೆ ಓಡಾಡುತ್ತಿರುವ ವಂದೇ ಭಾರತ್ ರೈಲನ್ನು ಬೆಳಗಾವಿ ವರೆಗೂ ವಿಸ್ತರಿಸಬೇಕು ಎಂದು ಅವರಿಗೆ ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.