ಬೆಳಗಾವಿ :ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸಂಸದ ಜಗದೀಶ ಶೆಟ್ಟರ ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅಹ್ವಾನಿಸಿದ್ದಾರೆ.
ಬೆಳಗಾವಿ ಬಾರ್ ಅಸೋಸಿಯೇಷನ್ , ಬೆಳಗಾವಿ ತನ್ನ ಅಸ್ತಿತ್ವದ 150 ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ 150 ( ನೂರ ಐವತ್ತು ವರ್ಷ) ನೇ ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಮಾರಂಭಕ್ಕೆ ಅಧ್ಯಕ್ಷರು ಬೆಳಗಾವಿ ಬಾರ್ ಅಸೋಸಿಯೇಷನ್ ಇವರ ಮನವಿಯಂತೆ “ಮುಖ್ಯ ಅತಿಥಿ” ಗಳಾಗಿ ಆಗಮಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ಜಗದೀಶ ಶೆಟ್ಟರ ಅವರು ನವ ದೆಹಲಿಯ ಸಂಸದ ಭವನದ ಕಚೇರಿಯಲ್ಲಿ ಇಂದು ಭೇಟಿ ಮಾಡಿ, ವಿನಂತಿಸಿದರು.
150 ( ನೂರ ಐವತ್ತು ವರ್ಷ) ನೇ ವಾರ್ಷಿಕೋತ್ಸವ ಸಮಾರಂಭವು ತಾತ್ಕಾಲಿಕವಾಗಿ ದಿನಾಂಕ: 4ನೇ ಅಕ್ಟೋಬರ 2025 ರಂದು ಆಯೋಜಿತಗೊಂಡಿರುತ್ತದೆ. ರಾಜ್ಯಾದ್ಯಂತ ಸುಮಾರು 20 ಸಾವಿರಕ್ಕೂ ಅಧೀಕ ಸಂಖ್ಯೆಯಲ್ಲಿ ವಕೀಲರ ಸಮೂಹ ಭಾಗವಹಿಸಲಿದ್ದು, ಅದರಂತೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಸಹ ಇದರಲ್ಲಿ ಭಾಗವಹಿಸಲಿರುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಬಗ್ಗೆ ಒಪ್ಪಿಗೆ ಸೂಚಿಸುವಂತೆ ವಿನಂತಿಸಿದರು.
ಮನವಿಯನ್ನು ಅವಲೋಕಿಸಿದ ಪ್ರಧಾನ ಮಂತ್ರಿಗಳು, ಈ ಪ್ರಸ್ತಾಪಿತ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಇದರಲ್ಲಿ ಭಾಗವಹಿಸುವ ಬಗ್ಗೆ ತಮ್ಮ ಭರವಸೆಯನ್ನು ನೀಡಿದರು ಜಗದೀಶ ಶೆಟ್ಟರ ತಿಳಿಸಿದ್ದಾರೆ.
ಬೆಳಗಾವಿ – ಬೆಂಗಳೂರು – ಬೆಳಗಾವಿ ನಡುವೆ “ವಂದೇ ಭಾರತ” ಎಕ್ಸಪ್ರೆಸ್ ರೈಲು ಸಂಚಾರಕ್ಕೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಅದರಂತೆ ರೈಲು ಶೀಘ್ರ ಪ್ರಸ್ತಾಪಿತ ಮಾರ್ಗದಲ್ಲಿ ಸಂಚರಿಸುವ ಬಗ್ಗೆ ಹಸಿರು ನಿಶಾನೆ ತೋರಿಸಲು ಪ್ರಧಾನ ಮಂತ್ರಿಗಳಲ್ಲಿ ಇದೇ ಸಂದರ್ಭದಲ್ಲಿ ವಿನಂತಿಸಲಾಯಿತು. ಈ ಬಗ್ಗೆ ಅಗತ್ಯ ಸೂಚನೆಯನ್ನು ಕೇಂದ್ರ ರೇಲ್ವೆ ಸಚಿವರಿಗೆ ನೀಡುವುದಾಗಿ ಸಹ ಅವರು ತಿಳಿಸಿರುವುದಾಗಿ ಜಗದೀಶ ಶೆಟ್ಟರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.