ಬೆಳಗಾವಿ: ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡ
ಮಾದರಿಯಲ್ಲೇ ರಾಮದುರ್ಗ ತಾಲೂಕಿನ ಶಬರಿಕೊಳ್ಳ ಅಭಿವೃದ್ಧಿಪಡಿಸುವ ಕುರಿತು 2025ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಚರ್ಚಿಸಿದ್ದೆ. ಈಗ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುವಂತೆ ಪ್ರಧಾನಿ ಕಚೇರಿಯಿಂದ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಗೆ ಪತ್ರದ ಮುಖಾಂತರ ಸೂಚನೆ ಬಂದಿದೆ ಎಂದು ಸಂಸದ ಜಗದೀಶ ಸಂತಸ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮನ ದೇವಾಲಯ ನಿರ್ಮಾಣವಾದ ನಂತರ, ಶಬರಿ ಕೊಳ್ಳ ಮಹತ್ವ ಪಡೆದುಕೊಂಡಿದೆ. ಸಾವಿರಾರು ಭಕ್ತರು ಭೇಟಿ ನೀಡುವುದರಿಂದ ಇದನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸುವಂತೆ ವಿನಂತಿಸಿದ್ದೆ. ಈಗ ಕೇಂದ್ರ ಪುರಸ್ಕೃತ ಯೋಜನೆಗಳಾದ ಸ್ವದೇಶಿ ದರ್ಶನ 2.0, ಎಸ್ಎಎಸ್ಸಿ ಯೋಜನೆಗಳಡಿ ರಾಜ್ಯದಲ್ಲಿನ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಹಾಗೂ ಅನುದಾನ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು, ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ. ಈ ಪುಣ್ಯ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ವಹಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.