ಬೆಳಗಾವಿ: ಆಯ್ಕೆಯಾದ ನಂತರ 5 ವರ್ಷ ಜನರತ್ತ ಮುಖವನ್ನೇ ಹಾಕದ ಜನಪ್ರತಿನಿಧಿಗಳೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರಂತಹ ನಿರಂತರವಾಗಿ ಜನರ ಜೊತೆ ಇರುವ ಶಾಸಕರು ಸಿಗುವುದು ಅಪರೂಪ ಎಂದು ಸೊಲ್ಲಾಪುರ ಶಾಸಕಿ ಪ್ರಣತಿ ಶಿಂಧೆ ಹೇಳಿದ್ದಾರೆ.
ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ದೇಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ಅವರ ಪರ ಚುನಾವಣೆ ಪ್ರಚಾರ ನಡೆಸುತ್ತಿದ್ದರು. ಲಕ್ಷ್ಮೀ ಹೆಬ್ಬಾಳಕರ್ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿದರೆ ಎಲ್ಲ ಜನಪ್ರತಿನಿಧಿಗಳಿಗೆ ಅವರು ಆದರ್ಶರಾಗುತ್ತಾರೆ. ಜೊತೆಗೆ ಅವರು ನಿರಂತರವಾಗಿ ಜನರೊಂದಿಗೆ ಸಂಪರ್ಕದಲ್ಲಿರುವುದು ಕೂಡ ವಿಶೇಷವಾಗಿದೆ. ಅಂತಹ ಶಾಸಕರನ್ನು ಗ್ರಾಮೀಣ ಕ್ಷೇತ್ರದ ಜನರು ಯಾವುದೇ ಕಾರಣದಿಂದ ಕಳೆದುಕೊಳ್ಳಲು ಇಚ್ಚಿಸುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷ ಬಡವರ ಪರವಾಗಿರುವ ಪಕ್ಷ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಡವರ ಪರವಾಗಿ ಹಲವಾರು ಗ್ಯಾರಂಟಿಗಳನ್ನು ಘೋಷಿಸಿದೆ. 200 ಯುನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ ಪ್ರತಿ ತಿಂಗಳ 2 ಸಾವಿರ ರೂ., ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಭತ್ಯೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮೊದಲಾದವುಗಳನ್ನು ಘೋಷಿಸಿದೆ. ರಾಜ್ಯದಲ್ಲಿ ಈ ಬಾರಿ ಬದಲಾವಣೆಯಾಗಲಿದ್ದು, ನಿಜವಾದ ಪ್ರಗತಿಯನ್ನು ಕಾಣಲಿದ್ದೀರಿ. ಹಾಗಾಗಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಮತ ನೀಡುವ ಮೂಲಕ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಪ್ರಣತಿ ಶಿಂಧೆ ಮನವಿ ಮಾಡಿದರು.
ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಅವರು ಕಳೆದ 5 ವರ್ಷ ಮಾಡಿರುವ ಕೆಲಸವನ್ನು ನೀವೆಲ್ಲ ಹತ್ತಿರದಿಂದ ನೋಡಿದ್ದೀರಿ. ನಿಮ್ಮ ಮನೆ ಮಗಳಂತೆ ಜವಾಬ್ದಾರಿ ನಿರ್ವಹಿಸಿದ್ದಾರೆ. ನಿಮ್ಮ ಕಷ್ಟ ಕಾಲದಲ್ಲಿ ನಿಮ್ಮೊಂದಿಗೆ ನಿಂತಿದ್ದಾರೆ. ಕ್ಷೇತ್ರದಲ್ಲಿ ಹಿಂದೆಂದೂ ಕಾಣದಂತಹ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಬ್ಯಾಲೆಟ್ ಯುನಿಟ್ ನಲ್ಲಿ 4ನೇ ನಂಬರ್ ನಲ್ಲಿರುವ ಹಸ್ತದ ಗುರುತಿಗೆ ಮತ ನೀಡುವ ಮೂಲಕ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ, ಮಹಿಳೆಯರು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಜನರು ಮೆರವಣಿಗೆ ನಡೆಸಿ ಲಕ್ಷ್ಮೀ ಹೆಬ್ಬಾಳಕರ್ ಪರವಾಗಿ ಮತ ಯಾಚಿಸಿದರು. ಸ್ಥಳೀಯ ಹಲವಾರು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.