ಲಂಡನ್: ಬಾಂಗ್ಲಾದೇಶದಲ್ಲಿ ನಡೆದಿರುವ ರಾಜಕೀಯ ಆರಾಜಕತೆ ಇದೀಗ ಜಗತ್ತಿನ ಗಮನ ಸೆಳೆದಿದೆ. ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಕ್ ಹಸೀನಾ ಅವರು ಸದ್ಯ ಭಾರತದಲ್ಲಿದ್ದು ಮುಂದೆ ಅವರು ಬ್ರಿಟನ್ ಗೆ ತೆರಳುವ ಸಾಧ್ಯತೆ ಹೆಚ್ಚಿದೆ. ರಾಜಾಶ್ರಯ ಎಂದರೆ ಥಟ್ಟನೆ ನೆನಪಾ ಗುವುದು ಬ್ರಿಟನ್. ಇಲ್ಲಿ ದೇಶಭ್ರಷ್ಟರು, ಒಂದು ದೇಶದಲ್ಲಿ ಪದಚ್ಯುತಿಗೊಂಡ ರಾಜಕಾರಣಿಗಳು, ಇತರ ಗಣ್ಯರು ರಾಜಾಶ್ರಯ ಪಡೆವುದು ಮಾಮೂಲಿ. ಈಗ ಬಾಂಗ್ಲಾದೇಶದ ನಿರ್ಗಮಿತ ಪ್ರಧಾನಿ ಶೇಖ್ ಹಸೀನಾ ಬ್ರಿಟನ್ನಲ್ಲಿ ರಾಜಾಶ್ರಯ ಬಯಸಿದ್ದಾರೆ.
ತಮ್ಮ ತಾಯ್ನಾಡಿನಲ್ಲಿ ಶೋಷಣೆಯ ಭೀತಿಯಿಂದ ಭಯ ಪಡುವ ಜನರನ್ನು ರಕ್ಷಿಸಲು ನೀಡುವುದೇ ರಾಜಾಶ್ರಯವಾಗಿದೆ. ಹೀಗೆ ಆಶ್ರಯ ಪಡೆದವರನ್ನು ತಾಯ್ಕಾಡಿಗೆ ಗಡಿಪಾರು ಮಾಡುವುದು ಸುಲಭವಲ್ಲ. ಗಡಿಪಾರು ಮಾಡಬೇಕು ಎಂದರೆ ಸಾಕಷ್ಟು ಕೋರ್ಟು-ಕಚೇರಿ
ಪ್ರಕ್ರಿಯೆ ನಡೆಯಬೇಕು. ಇದು ವರ್ಷಾನುಗಟ್ಟಲೇ ನಡೆಯುವ ಪ್ರಕ್ರಿಯೆ. ಇಂಥ ಕಠಿಣ ನಿಯಮ ಬ್ರಿಟನ್ನಲ್ಲಿದೆ. ಬಹುತೇಕರು ಬ್ರಿಟನ್ ಮೊರೆ ಹೋಗುತ್ತಾರೆ.
ಈಗಾಗಲೇ ಭಾರತದ ಉದ್ಯಮಿ ವಿಜಯ ಮಲ್ಯ, ನೀರವ್ ಮೋದಿ ಬ್ರಿಟನ್ನಲ್ಲಿದ್ದಾರೆ. ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್, ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್, ಜೂಲಿಯನ್ ಅಸಾಂಜ್ ಬ್ರಿಟನ್ನಲ್ಲೇ ಇದ್ದರು.
ಬ್ರಿಟನ್ ಸರ್ಕಾರವು ಕಳೆದ ವರ್ಷ ಆಶ್ರಯಕ್ಕಾಗಿ 1.12 ಲಕ್ಷ ಜನರ ಅರ್ಜಿ ವಿಲೇವಾರಿ ಮಾಡಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.