ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮುಂಬೈ ನಿವಾಸದ ಒಳನುಗ್ಗಿ ಅವರನ್ನು ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಬಾಂಗ್ಲಾದೇಶದ ಪ್ರಜೆಯನ್ನು ಬಂಧಿಸಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ ಎಂಬ ವ್ಯಕ್ತಿಗೆ ತಾನು ಸೈಫ್ ಅಲಿ ಖಾನ್ ಅವರ ಮನೆ ಒಳಹೊಕ್ಕಿರುವುದು ತಿಳಿದಿರಲಿಲ್ಲ ಮತ್ತು ಆತನ ಉದ್ದೇಶ ಕಳ್ಳತನವಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬಂಧನದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಗುರುವಾರ ಮುಂಜಾನೆ ಐಷಾರಾಮಿ ಬಾಂದ್ರಾ ವೆಸ್ಟ್ ಪಕ್ಕದಲ್ಲಿರುವ ಅಪಾರ್ಟ್ಮೆಂಟಿನಲ್ಲಿ ನಟ ಸೈಫ್ ಅಲಿ ಖಾನ್ ಅವರ ಕುತ್ತಿಗೆ ಸೇರಿದಂತೆ ಆರು ಕಡೆ ಈತ ಇರಿದಿದ್ದಾನೆ.
30 ವರ್ಷದ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ನನ್ನು ಥಾಣೆ ಜಿಲ್ಲೆಯ ಘೋಡಬಂದರ್ ರಸ್ತೆಯಲ್ಲಿರುವ ಹಿರಾನಂದನಿ ಎಸ್ಟೇಟ್ನಲ್ಲಿ ಬಂಧಿಸಲಾಗಿದೆ. ಆತ ಅಕ್ರಮವಾಗಿ ಭಾರತ ಪ್ರವೇಶಿಸಿದ್ದು, ಕಳೆದ ನಾಲ್ಕು ತಿಂಗಳಿಂದ ಮುಂಬೈನಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತಕ್ಕೆ ಪ್ರವೇಶಿಸಿದ ನಂತರ ಆತ ತನ್ನ ಹೆಸರನ್ನು ಬಿಜೋಯ ದಾಸ್ ಎಂದು ಬದಲಾಯಿಸಿಕೊಂಡಿದ್ದ. ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಬ್ಯಾಚುಲರ್ ಆಗಿದ್ದು, ಹೌಸ್ ಕೀಪಿಂಗ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ. ಆದಾಗ್ಯೂ, ಅವರು ಕೆಲವು ತಿಂಗಳುಗಳಿಂದ ಆತ ನಿರುದ್ಯೋಗಿಯಾಗಿದ್ದ. ಹಾಗೂ ಮುಂಬೈನ ವರ್ಲಿಯಲ್ಲಿ ಕೆಲ ಸ್ನೇಹಿತರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಫ್ ಅಲಿ ಖಾನ್ ಅವರ ಮೇಲೆ ದಾಳಿ ಮಾಡಿದ ಆರೋಪಿ ನಟನ ಮನೆಗೆ ಈ ಮೊದಲು ಭೇಟಿ ನೀಡಿದ್ದ ಮತ್ತು ಹೌಸ್ ಕೀಪಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಈ ಹಿಂದೆ ಬಾಲಿವುಡ್ ನಟನ ಮನೆಗೆ ಸ್ವಚ್ಛತಾ ಕೆಲಸದ ನಿಮಿತ್ತ ಭೇಟಿ ನೀಡಿದ್ದ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ವಿಜಯ್ ದಾಸ್, ಬಿಜೋಯ್ ದಾಸ್, ಮೊಹಮ್ಮದ್ ಇಲ್ಯಾಸ್ ಮತ್ತು ಬಿ.ಜೆ. ಎಂಬ ಹೆಸರರುಗಳನ್ನು ಹೊಂದಿದ್ದ ಆರೋಪಿಯನ್ನು ಭಾನುವಾರ ಬೆಳಿಗ್ಗೆ ಥಾಣೆಯ ಹಿರನಂದಾನಿ ಎಸ್ಟೇಟ್ನ ಮೆಟ್ರೋ ನಿರ್ಮಾಣ ಸ್ಥಳದ ಬಳಿಯ ಕಾರ್ಮಿಕ ಶಿಬಿರದಲ್ಲಿ ಬಂಧಿಸಲಾಗಿದೆ.
ಜನವರಿ 16ರಂದು ಭದ್ರತಾ ಸಿಬ್ಬಂದಿ ಮಲಗಿದ್ದನ್ನು ಗಮನಿಸಿದ ಆರೋಪಿ 11ನೇ ಮಹಡಿಗೆ ಹತ್ತಿದ್ದ. 11 ನೇ ಮಹಡಿಯನ್ನು ತಲುಪಿದ ಆತ ಡಕ್ಟ್ ಶಾಫ್ಟ್ ಅನ್ನು ಪ್ರವೇಶಿಸಿ ಅದರ ಮೂಲಕ ಸೈಫ್ ಅಲಿ ಖಾನ್ ಮನೆ ಪ್ರವೇಶಿಸಿದ್ದ, ಡಕ್ಟ್ ಶಾಫ್ಟ್ ಮೂಲಕ ಮಕ್ಕಳ ಕೋಣೆಗೆ ಹತ್ತಿರ ಬಂದಿದ್ದ, ನಂತರ ಅಲ್ಲಿ ಬಾತ್ ರೂಂನಲ್ಲಿ ಅಡಗಿಕೊಂಡ. ಈ ಹಿಂದೆ ಶೆಹಜಾದ್ ವರ್ಲಿಯಲ್ಲಿ ವಾಸವಾಗಿದ್ದ. ಘಟನೆ ನಡೆದ ದಿನ ಥಾಣೆಗೆ ರೈಲಿನಲ್ಲಿ ತೆರಳಿದ್ದ ಎಂದು ವರದಿ ತಿಳಿಸಿದೆ.
ವರದಿ ಪ್ರಕಾರ, ಠಾಣೆಯಲ್ಲಿ ಆತನನ್ನು ಕರೆದುಕೊಂಡು ಹೋಗಲು ಬೈಕ್ನಲ್ಲಿ ವ್ಯಕ್ತಿಯೊಬ್ಬ ಬಂದಿದ್ದಾನೆ. ಬೈಕ್ನ ನೋಂದಣಿ ಸಂಖ್ಯೆಯ ಸಹಾಯದಿಂದ ಪೊಲೀಸರು ಜನವರಿ 18 ರಂದು ಘೋಡ್ಬಂದರ್ನಲ್ಲಿ ಈತನನ್ನು ಪತ್ತೆಹಚ್ಚಿದರು, ಅಲ್ಲಿ ಆತನನ್ನು ಬಂಧಿಸಲಾಯಿತು.
ಸೈಫ್ ಅಲಿಖಾನ್ಗೆ ಈತ ಹಲವು ಬಾರಿ ಚಾಕುವಿನಿಂದ ಇರಿದಿದ್ದು, ಅವರನ್ನು ಆಟೊರಿಕ್ಷಾದಲ್ಲಿ ನಗರದ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
54 ವರ್ಷ ವಯಸ್ಸಿನ ಸೈಫ್ ಅಲಿ ಖಾನ್ ತಮ್ಮ ಪತ್ನಿ ಕರೀನಾ ಕಪೂರ್ ಮತ್ತು ಅವರ ಇಬ್ಬರು ಪುತ್ರರೊಂದಿಗೆ ನಿವಾಸದಲ್ಲಿದ್ದಾಗ ಈತನನ್ನು ತಡೆಯಲು ಮುಂದಾದಾಗ ಮೇಲೆ ಈತ ದಾಳಿ ನಡೆಸಿದ್ದ. ಐದು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ನಂತರ ಸೈಫ್ ಅಲಿ ಖಾನ್ ಅವರ ಬೆನ್ನುಮೂಳೆಯಿಂದ 2.5-ಇಂಚಿನ ಬ್ಲೇಡ್ ಅನ್ನು ತೆಗೆದುಹಾಕಲಾಯಿತು. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಲು ಮುಂಬೈ ಪೊಲೀಸರು ಸುಮಾರು 30 ತಂಡಗಳನ್ನು ರಚಿಸಿದ್ದು, ಕಟ್ಟಡದಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈತ ಹೋಗುತ್ತಿರುವುದು ಸೆರೆಯಾಗಿತ್ತು.