ಬೆಳಗಾವಿ :
ಜಿಲ್ಲೆಯ ಬೆಳಗಾವಿ ಹಾಗೂ ಖಾನಾಪುರ ತಾಲೂಕುಗಳನ್ನು ಹೊರತುಪಡಿಸಿ ಇಡೀ ಜಿಲ್ಲೆಯಲ್ಲಿ ಈ ಬಾರಿ ಮಳೆಯ ತೀವ್ರ ಅಭಾವ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಎರಡು ತಾಲೂಕುಗಳನ್ನು ಹೊರತುಪಡಿಸಿ ಉಳಿದ ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಮಳೆಯ ತೀವ್ರ ಅಭಾವ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ಚಿಂತನೆ ನಡೆಸಲಾಗಿದೆ.
ಬೆಂಗಳೂರಿನ ಕ್ಯಾತಿ ಕ್ಲೈಮೇಟ್ ಮೋಡಿಫಿಕೇಶನ್ ಕನ್ಸಲ್ಟನ್ಸಿ ಮತ್ತು ಬೆಳಗಾವಿ ಶುಗರ್ಸ್ ಜಂಟಿಯಾಗಿ ಮೋಡ ಬಿತ್ತನೆಗೆ ಮುಂದಾಗಿವೆ.
ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕ ಪ್ರಕಾಶ್ ಕೋಳಿವಾಡ ಅವರು ಮೋಡ ಬಿತ್ತನೆಗೆ ಮುಂದಾಗಿದ್ದಾರೆ. ಇದನ್ನು ಗಮನಿಸಿರುವ ಲೋಕೋಪಯೋಗಿ ಖಾತೆ ಖಾತೆ ಸಚಿವ ಸತೀಶ ಜಾರಕಿಹೊಳಿಯವರು ಕ್ಯಾತಿ ಕ್ಲೈಮೇಟ್ ಮೋಡಿಫಿಕೇಶನ್ ಕನ್ಸಲ್ಟನ್ಸಿ ಜತೆ ಮಾತುಕತೆ ನಡೆಸಿ ಆ ಮೂಲಕ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದರು.
ಇದಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ ಕೊನೆಗೂ ಬೆಳಗಾವಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ಅನುಮತಿ ನೀಡಿದ್ದು ಜಿಲ್ಲಾಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಜಿಲ್ಲೆಯಲ್ಲಿ ಮೋಡ ಬಿತ್ತನೆ ನಡೆಯಲಿದೆ. ನಂತರ ಜಿಲ್ಲಾಧಿಕಾರಿಗಳು ರಾಜ್ಯ ಸರಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸಬೇಕಾಗಿದೆ.
ಜಿಲ್ಲೆಯ ಯಾವ ಭಾಗದಲ್ಲಿ, ಯಾವ ಸಮಯದಲ್ಲಿ ಮೋಡ ಬಿತ್ತನೆ ಮಾಡಬೇಕು ಎಂಬ ಬಗ್ಗೆ ಅವಲಂಬಿಸಿ ಮೋಡ ಬಿತ್ತನೆಗೆ ಮುಂದಾಗಲಿದೆ. ಮೋಡಗಳ ಅವಲಂಬನೆ ಆಧರಿಸಿ ಮೋಡ ಬಿತ್ತನೆ ತಾಂತ್ರಿಕ ಕಾರ್ಯ ಕೈಗೊಂಡು ಮೋಡ ಬಿತ್ತನೆ ಮಾಡಲಾಗುತ್ತದೆ.
ಈ ಹಿಂದೆ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಸೃಷ್ಟಿಯಾಗಿತ್ತು. ಆಗ ರಾಜ್ಯದಲ್ಲಿ ಮೋಡ ಬಿತ್ತನೆ ಕಾರ್ಯ ನಡೆಸಲಾಗಿತ್ತು. ಅಂದು ಮೋಡ ಬಿತ್ತನೆಗೆ ಕೋಟ್ಯಂತರ ರೂ.ವೆಚ್ಚ ಮಾಡಲಾಗಿತ್ತು. ಮೋಡಗಳನ್ನು ಆಧರಿಸಿ ಮೋಡ ಬಿತ್ತನೆ ಮಾಡುವ ಈ ವೈಜ್ಞಾನಿಕ ಕಾರ್ಯಕ್ಕೆ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತದೆ.