ಬೆಂಗಳೂರು :
ಬೆಳಗಾವಿ ಜಿಲ್ಲೆಯ ಪವಿತ್ರ ಪುಣ್ಯ ಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನದ ಬಳಿ ಇರುವ ಕಿರು ಪ್ರಾಣಿ ಸಂಗ್ರಹಾಲಯ ಜಿಂಕೆವನಕ್ಕೆ ಪುನಶ್ಚೇತನ ನೀಡುವ ಇಲ್ಲವೇ ಅದೇ ಜಾಗದಲ್ಲಿ ಪಕ್ಷಿಧಾಮ ನಿರ್ಮಿಸುವ ಕುರಿತಂತೆ ಪರಿಶೀಲಿಸುವ ಭರವಸೆಯನ್ನು ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ನೀಡಿದ್ದಾರೆ.
ಬೆಂಗಳೂರಿನ ತಮ್ಮ ಕಚೇರಿಯಲ್ಲಿಂದು ಭೇಟಿಯಾಗಿದ್ದ ಬೈಲಹೊಂಗಲ ಶಾಸಕ ಮಹಾಂತೇಶ ಶಿವಾನಂದ ಕೌಜಲಗಿ ನೇತೃತ್ವದ ನಿಯೋಗದೊಂದಿಗೆ ಸಮಾಲೋಚಿಸಿದ ಸಚಿವರು, ಕೇಂದ್ರ ಮೃಗಾಲಯ ಪ್ರಾಧಿಕಾರದ ಆದೇಶದಂತೆ ಈ ಜಿಂಕೆ ವನವನ್ನು ಮುಚ್ಚಲಾಗುತ್ತಿದೆ ಎಂಬ ಮಾಹಿತಿ ಇದೆ. ಜಿಂಕೆ ವನ ಪುನಶ್ಚೇತನ ಮಾಡುವ ಇಲ್ಲವೇ ಅದೇ ಜಾಗದಲ್ಲಿ ಪಕ್ಷಿಧಾಮ ನಿರ್ಮಿಸಿ, ಕ್ಷೇತ್ರಕ್ಕೆ ಬರುವ ಪ್ರವಾಸಿಗರಿಗೆ ಹೆಚ್ಚಿನ ಆಕರ್ಷಣೆ ಕಲ್ಪಿಸುವ ಬಗ್ಗೆ ಚಿಂತಿಸಲಾಗುವುದು ಎಂದು ತಿಳಿಸಿದರು.
ಕ್ಷೇತ್ರಕ್ಕೆ ಬರುವ ಜನರಿಗೆ ವಿವಿಧ ಪ್ರಭೇದದ ಪಕ್ಷಿಗಳ ಪರಿಚಯ ಆಗುವ ರೀತಿಯಲ್ಲಿ ಇಲ್ಲಿ ಪಕ್ಷಿಧಾಮ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ರಾಜೀವ್ ರಂಜನ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಪ್ರಧಾನ ಕಾರ್ಯದರ್ಶಿ (ಅರಣ್ಯ) ಸಂಜಯ ಎಸ್. ಬಿಜ್ಜೂರ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ ಪುಷ್ಕರ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಪ್ರಧಾನ ಕಾರ್ಯದರ್ಶಿಗಳು (ಪರಿಸರ) ವಿಜಯ ಮೋಹನ ರಾಜ್, ಬೆಳಗಾವಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಆರ್. ಚವ್ಹಾಣ ಮತ್ತಿತರರು ಭಾಗಿಯಾಗಿದ್ದರು.
ಇದೇ ಸಂದರ್ಭದಲ್ಲಿ ಮೂಲದಲ್ಲೇ ವಿಂಗಡಣೆಯಾಗದ ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಘಟಕ ಕುರಿತಂತೆಯೂ ಚರ್ಚಿಸಲಾಯಿತು.