- ಟೆಹ್ರಾನ್: ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (63), ವಿದೇಶಾಂಗ ವ್ಯವಹಾರಗಳ ಸಚಿವ ಅಮೀರ್ ಅಬ್ಬೊಲ್ಲಾಹಿಯಾನ್ ಹಾಗೂ ಕೆಲ ಹಿರಿಯ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಭಾನುವಾರ ಅಜೆರ್ ಬೈಜಾನ್ ಪ್ರಾಂತ್ಯದ ಗಡಿಯ ಗುಡ್ಡಪ್ರದೇಶಗಳ ವ್ಯಾಪ್ತಿಯಲ್ಲಿ ಅಪಘಾತಕ್ಕೀಡಾಗಿತ್ತು.
ಅಪಘಾತಕ್ಕೂ ಮುನ್ನ ಹೆಲಿಕಾಪ್ಟರ್ ನಿಯಂತ್ರಣ ಘಟಕದ ಸಂಪರ್ಕ ಕಡಿದುಕೊಂಡಿದೆ.
ಹೆಲಿಕಾಪ್ಟರ್ ನಾಪತ್ತೆಯಾಗಿರುವ ಗುಡ್ಡ ಪ್ರದೇಶಗಳಲ್ಲಿ ದಟ್ಟನೆಯ ಮಂಜು ಮಸುಕಿದ್ದು, ಶೋಧ ಹಾಗೂ ರಕ್ಷಣಾ ತಂಡಗಳು ಕಾರ್ಯಾಚರಣೆ ಚುರುಕುಗೊಳಿಸಿದ್ದವು.
ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಜೋಲ್ಫಾ ವಲಯದಲ್ಲಿ ಅಪಘಾತಕ್ಕೀಡಾಗಿದೆ ಎಂದು ಇರಾನ್ ರಾಷ್ಟ್ರೀಯ ಟಿ.ವಿ.ವಾಹಿನಿ ವರದಿ ಮಾಡಿದೆ. ಇದು, ಅಪಘಾತ ಎಂದು ಕೆಲ ಅಧಿಕಾರಿಗಳು ಹೇಳಿದ್ದಾರೆ.
ಅಜೆರ್ಬೈಜಾನ್ನಲ್ಲಿ ಅರಾಸ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟು ಉದ್ಘಾಟನೆಗಾಗಿ ರೈಸಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಅಜೆರ್ಬೈಜಾನ್ ಅಧ್ಯಕ್ಷ ಇಲ್ಲಮ್ ಅಲಿಯೆವ್ ಅವರು ಇದ್ದರು.
ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ನ ಜೊತೆಗೆ ಬೆಂಗಾವಲಿನ ಎರಡು ಹೆಲಿಕಾಪ್ಟರ್ಗಳು ಹಾರಾಟ ಆರಂಭಿಸಿದ್ದವು. ಅವು ಸುರಕ್ಷಿತವಾಗಿ ನಿಗದಿತ ತಾಣ ತಲುಪಿವೆ ಎಂದು ತಾನಿಂ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.