ನವದೆಹಲಿ : 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ದಿನದ ಮೆಗಾ ಹರಾಜಿನಲ್ಲಿ 13ರ ವಯಸ್ಸಿನ ಹುಡುಗ ವೈಭವ ಸೂರ್ಯವಂಶಿ ದಾಖಲೆ ಬರೆದಿದ್ದು, ಸೋಮವಾರ ನಡೆದಿದ್ದ ಮೆಗಾ ಹರಾಜಿನಲ್ಲಿ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ 1.10 ಕೋಟಿ ರೂ.ಗಳಿಗೆ ಖರೀದಿಸಿದೆ. ಆ ಮೂಲಕ 13 ವರ್ಷದ ಕ್ರಿಕೆಟಿಗ ವೈಭವ ಸೂರ್ಯವಂಶಿ ಅವರು ಐಪಿಎಲ್ ಹರಾಜಿನಲ್ಲಿ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎಂಬ ಇತಿಹಾಸ ನಿರ್ಮಿಸಿದರು.
ಹರಾಜು ಕಣದಲ್ಲಿ ಅವರ ಹೆಸರು ಕಾಣಿಸಿಕೊಂಡ ತಕ್ಷಣ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಎಡಗೈ ಬ್ಯಾಟರ್ ಹಿಂದೆ ಬಿದ್ದವು. ಅವರ ಬೆಲೆಯನ್ನು 30 ಲಕ್ಷಕ್ಕೆ ನಿಗದಿಪಡಿಸಲಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ಸ್ ನಡುವೆ ವೈಭವ ಸೂರ್ಯವಂಶಿ ಖರೀದಿಗೆ ಪೈಪೋಟಿ ನಡೆಯಿತು.ಅಂತಿಮವಾಗಿ ರಾಜಸ್ಥಾನ ರಾಯಲ್ಸ್ ತಂಡವು ಈ ಆಟಗಾರನನ್ನು 1.10 ಕೋಟಿ ರೂ.ಖರೀದಿಸಿತು.
ಜೆಡ್ಡಾದಲ್ಲಿ ನಡೆದ ಬಿಡ್ಡಿಂಗ್ ವಾರ್ಗಾಗಿ 577 ಆಟಗಾರರ ಪಟ್ಟಿಯಲ್ಲಿ ಸೂರ್ಯವಂಶಿ ಹೆಸರನ್ನು ಸೇರಿಸಿದಾಗ ಐಪಿಎಲ್ ಹರಾಜಿಗೆ ಶಾರ್ಟ್ಲಿಸ್ಟ್ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಸೂರ್ಯವಂಶಿ ಪಾತ್ರರಾಗಿದ್ದರು.
ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ U19 ವಿರುದ್ಧದ ಅನಧಿಕೃತ ಟೆಸ್ಟ್ನಲ್ಲಿ ಭಾರತ ಪರ ಶತಕ ಸಿಡಿಸಿದ ನಂತರ ಸೂರ್ಯವಂಶಿ ಸುದ್ದಿ ಮಾಡಿದರು. 13 ವರ್ಷ ವಯಸ್ಸಿನ ಸೂರ್ಯವಂಶಿ ಕೇವಲ 58 ಎಸೆತಗಳಲ್ಲಿ ಶತಕ ಸಿಡಿಸಿದರು, ಕೆಂಪು-ಬಾಲ್ ಕ್ರಿಕೆಟ್ನಲ್ಲಿ ಭಾರತ U19 ತಂಡದ ಪರ ಅತ್ಯಂತ ವೇಗದ ಶತಕವನ್ನು ದಾಖಲಿಸಿದರು.
ಅವರು 13 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಶತಕವನ್ನು ದಾಖಲಿಸಿದ ಅತ್ಯಂತ ಕಿರಿಯ ಬ್ಯಾಟರ್ ಆಗಿದ್ದಾರೆ. ಅವರು 62 ಎಸೆತಗಳಲ್ಲಿ 104 ರನ್ ಗಳಿಸಿದರು.
ಮಾರ್ಚ್ 27, 2011 ರಂದು ಬಿಹಾರದ ತಾಜಪುರ ಗ್ರಾಮದಲ್ಲಿ ಜನಿಸಿದ ಸೂರ್ಯವಂಶಿ ಕ್ರಿಕೆಟ್ ಪ್ರಯಾಣವು ಚಿಕ್ಕ ವಯಸ್ಸಿನಲ್ಲಿಯೇ ಪ್ರಾರಂಭವಾಯಿತು.ವೈಭವ ಬಿಹಾರ ಪರ ಐದು ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು ಒಂದು ಟಿ20 ಪಂದ್ಯವನ್ನು ಆಡಿದ್ದಾರೆ. ಅವರು 5 ಎಫ್ಸಿ ಪಂದ್ಯಗಳಲ್ಲಿ 100 ರನ್ ಗಳಿಸಿದ್ದಾರೆ 41 ಗರಿಷ್ಠ. ರಾಜಸ್ಥಾನ ವಿರುದ್ಧ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಏಕೈಕ ಟಿ20ಯಲ್ಲಿ ಕೇವಲ 13 ರನ್ ಗಳಿಸಿದ್ದಾರೆ. ಜನವರಿ 2024 ರಲ್ಲಿ ಮುಂಬೈ ವಿರುದ್ಧದ ರಣಜಿ ಟ್ರೋಫಿ ಎಲೈಟ್ ಪಂದ್ಯದಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು.