ಬೈಲಹೊಂಗಲ: ಚರ್ಚೆ ಎಂದರೆ ಗೆಲುವು–ಸೋಲು ಅಲ್ಲ; ಚಿಂತನೆಗೆ ಆಳ, ಮಾತುಕತೆಗೆ ಸಂಸ್ಕೃತಿ ನೀಡುವ ವೇದಿಕೆ,” ಎಂದು ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಹೇಳಿದರು.
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಎಚ್.ವಿ. ಕೌಜಲಗಿ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಅಂತರ ಕಾಲೇಜು ಮಟ್ಟದ ಚರ್ಚಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ವಾಗ್ಮಿತೆ, ವಿಚಾರಶಕ್ತಿ ಹಾಗೂ ಸಮಾಜದ ಪ್ರಶ್ನೆಗಳ ಬಗ್ಗೆ ಅವರ ಸಂವೇದನಾಶೀಲತೆಯಿಂದ ಗಮನ ಸೆಳೆದಿತು. “ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯ ಅವಶ್ಯಕತೆ ಇದೆಯೇ?” ಎಂಬ ಸಮಕಾಲೀನ ವಿಷಯದ ಮೇರೆಗೆ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಯ 15ಕ್ಕೂ ಹೆಚ್ಚು ಕಾಲೇಜುಗಳ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.
ವಿದ್ಯಾರ್ಥಿಗಳು ಪರ–ವಿರೋಧ ತಂಡಗಳಾಗಿ ಭಾಗವಹಿಸಿ ತರ್ಕ–ಪ್ರತಿ ತರ್ಕಗಳ ಮೂಲಕ ವಿಷಯವನ್ನು ವಿಶ್ಲೇಷಿಸಿದರು. ತಾಂತ್ರಿಕತೆ, ನ್ಯಾಯಾಂಗ ವ್ಯವಸ್ಥೆ, ಸಮಾಜ, ಪರಿಸರ, ಶಿಕ್ಷಣ ಹಾಗೂ ಯುವಜನರ ಪಾತ್ರ ಮುಂತಾದ ಹಲವು ಆಯಾಮಗಳು ಚರ್ಚೆಯಲ್ಲಿ ಪ್ರತಿಧ್ವನಿಸಿತು. ನೈಜ ಘಟನೆಗಳು, ಐತಿಹಾಸಿಕ ಉದಾಹರಣೆಗಳು, ಸಂಶೋಧನಾ ಮಾಹಿತಿಗಳು ವಿದ್ಯಾರ್ಥಿಗಳ ಮಾತುಗಳಿಗೆ ತೂಕ ನೀಡಿದವು.
ಸ್ಪರ್ಧೆಯನ್ನು ಎಸ್.ಎ. ದೇಶಮುಖ್, ಕೆ.ಜಿ. ಜವಳಿ ಮತ್ತು ಡಿ.ಬಿ. ನರಗುಂದ ಅವರು ನಿರ್ಣಯಿಸಿ, ಭಾಷಣ ಶೈಲಿ, ತಾರ್ಕಿಕತೆ, ವೇದಿಕೆ ಅಭಿನಯ, ಸಮಯ ಪಾಲನೆ ಹಾಗೂ ಪ್ರಶ್ನೋತ್ತರ ಆಧರಿಸಿ ಅಂಕಗಳನ್ನು ನೀಡಿದರು.
ಫಲಿತಾಂಶದಲ್ಲಿ ಮೊದಲ ಸ್ಥಾನ: ಡಾ. ಜಿ.ಎಂ. ಪಾಟೀಲ ಕಾಲೇಜು, ಎರಡನೇ ಸ್ಥಾನ: ಕೆಎಲ್ಇ ಕಾನೂನು ಕಾಲೇಜು, ಚಿಕ್ಕೋಡಿ,ಮೂರನೇ ಸ್ಥಾನ: ಆರ್.ಎಲ್. ಲಾ ಕಾಲೇಜು ಪಡೆದವು.
ಸುರೇಖಾ ರೇಣಕಿಗೌಡ್ರ ಮತ್ತು ಲಕ್ಷ್ಮಣ ಲಮಾಣಿ ನಿರೂಪಿಸಿದರು. ಕಿರಣ ದೊಡ್ಡಸಾವಳಗಿ ಮತ್ತು ಸಂತೋಷ ಮೆಟಗುಪ್ಪಿ ಸ್ವಾಗತಿಸಿದರು. ಪವಿತ್ರಾ ಪಚ್ಚೇದಾರ ಮತ್ತು ಮಂಜು ಕಟ್ಟಿಮಣಿ ವಂದಿಸಿದರು.
ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಎಚ್.ವಿ. ಕೌಜಲಗಿ ಕಾನೂನು ಮಹಾವಿದ್ಯಾಲಯದ ಸಿಬ್ಬಂದಿಗಳು ಮತ್ತು ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


