ಬೆಳಗಾವಿ: instagram ಪ್ರೀತಿಗೆ ಕಟ್ಟುಬಿದ್ದು 24 ವರ್ಷ ವಯಸ್ಸಿನ ವಿವಾಹಿತೆ ಇತ್ತ ಪ್ರಿಯಕರನೂ ಇಲ್ಲ ಅತ್ತ ಗಂಡನು ಸಹ ಇಲ್ಲದೆ ಕೊನೆಗೂ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ.
ಶ್ವೇತಾ ಗುಡದಾಪುರ (24) ಧಾರವಾಡದಲ್ಲಿ ಆತ್ಮಹತ್ಯೆಗೆ ಶರಣಾದವಳು. ಗಜೇಂದ್ರಗಡ ಮೂಲದವಳಾದ ಈಕೆಯನ್ನು ರಾಮದುರ್ಗ ಮೂಲದ ವಿಶ್ವನಾಥನಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಈ ದಂಪತಿ ನಡುವೆ ಬಿರುಕು ತಂದಿಟ್ಟಿದ್ದೆ instagram. ಮದುವೆ ನಂತರವೂ ಶ್ವೇತಾ instagram ಪ್ರೀತಿಗೆ ಮರುಳಾಗಿದ್ದಳು. ಧಾರವಾಡ ಮೂಲದ ಯುವಕನ ಜೊತೆ ಇನ್ಸ್ಟಾಗ್ರಾಮ್ ನಲ್ಲೆ ಪ್ರೀತಿ ಕುದುರಿಸಿದ್ದ ಈಕೆ ಈಗ ನೇಣಿಗೆ ಶರಣಾಗಿದ್ದಾಳೆ.
ಧಾರವಾಡದ ಪ್ರಿಯಕರನನ್ನು ನಂಬಿ ಗಂಡನಿಗೂ ಗೊತ್ತಾಗದಂತೆ ಮನೆ ಬಿಟ್ಟು ಧಾರವಾಡಕ್ಕೆ ಬಂದಿದ್ದ ಶ್ವೇತಾ ಕಳೆದ ಒಂದೂವರೆ ವರ್ಷದಿಂದ ಪ್ರಿಯಕರನ ಜೊತೆ ಧಾರವಾಡದಲ್ಲಿ ವಾಸವಾಗಿದ್ದಳು. ಧಾರವಾಡದಲ್ಲಿದ್ದು ಗಂಡನಿಗೆ ವಿಚ್ಛೇದನ ನೋಟಿಸ್ ಕಳುಹಿಸಿದ್ದಳು. ಧಾರವಾಡ ತಾಲೂಕು ಶಿವಳ್ಳಿ ಗ್ರಾಮದ ಯುವಕ ಶ್ವೇತಾಳನ್ನು ಪ್ರೀತಿ- ಪ್ರೇಮ ಎಂದು ತಲೆ ತುಂಬಿಸಿ ಗಂಡನಿಂದ ದೂರ ಮಾಡಿದ್ದ. ಆಕೆಯನ್ನು ಕರೆದುಕೊಂಡು ಬಂದು ಧಾರವಾಡ ಶ್ರೀನಗರ ಬಡಾವಣೆಯ ಬಾಡಿಗೆ ಮನೆಯಲ್ಲಿ ಇಟ್ಟಿದ್ದ. ಮದುವೆಯಾಗುವುದಾಗಿ ಹೇಳಿದ್ದರೂ ಮದುವೆ ಮಾಡಿಕೊಂಡಿರಲಿಲ್ಲ.
ಈ ನಡುವೆ ತನ್ನ ಪತ್ನಿಯನ್ನು ಕರೆದುಕೊಂಡು ಹೋಗಲು ಮೊದಲ ಪತಿ ವಿಶ್ವನಾಥ ಮತ್ತು ಶ್ವೇತಾಳ ಪಾಲಕರು ಬಂದಾಗ ಅವರಿಗೆ ಬೆದರಿಕೆ ಹಾಕಿ ವಾಪಸ್ ಕಳಿಸಿದ್ದಾರೆ ಎಂದು ಶ್ವೇತಾಳ ತಾಯಿ ಶಶಿ ಸಾವಂತ್ ದೂರಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಶ್ವೇತಾ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದು ವಿಪರ್ಯಾಸ. ನೇಣಿಗೆ ಶರಣಾಗಿದ್ದ ಪತ್ನಿಯನ್ನು ಕಂಡು ವಿಶ್ವನಾಥ ಮರುಗಿದ್ದಾರೆ. ಶ್ವೇತಾಳ ಪ್ರಿಯಕರ ಆಕೆಯನ್ನು ಧಾರವಾಡದ ಬಾಡಿಗೆ ಮನೆಯಲ್ಲಿಟ್ಟು ಆಕೆಯ ಖರ್ಚು ವೆಚ್ಚ ನೋಡಿಕೊಂಡಿದ್ದ. ಇಬ್ಬರ ನಡುವೆ ಏನಾಗಿದೆಯೋ ಗೊತ್ತಿಲ್ಲ, ತನ್ನ ಮಗಳು instagram ಪ್ರೀತಿಗೆ ಬಲಿಯಾಗಿ ಮದುವೆಯಾದ ಗಂಡನು ಇಲ್ಲದೆ ಅತ್ತ ಪ್ರಿಯಕರನೂ ಇಲ್ಲದೆ ಪ್ರೀತಿಗೆ ಬಲಿಯಾಗಿದ್ದಾಳೆ ಎಂದು ತಾಯಿ ದೂರಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಶಿವಳ್ಳಿ ಮೂಲದ ಯುವಕನ ವಿರುದ್ಧ ದಾಖಲಾಗಿದೆ.