ಮಿರ್ಜಾ: ಅಸ್ಸಾಂ-ಮೇಘಾಲಯ ಗಡಿಯಲ್ಲಿರುವ ದೂರದ ಬಾರ್ಬಕಾರ ಎಂಬ ಹಳ್ಳಿಯಲ್ಲಿ ಪ್ರತಿದಿನ ಬೆಳಿಗ್ಗೆ ಗೊರಸುಗಳ ಶಬ್ದಗಳು ಕೇಳುತ್ತವೆ. ಬೆನ್ನಿನ ಮೇಲೆ ಶಾಲಾ ಚೀಲ ಹೊತ್ತ ಪುಟ್ಟ ಹುಡುಗನೊಬ್ಬ ತನ್ನ ಪ್ರೀತಿಯ ಕುದುರೆಯ ಮೇಲೆ ಪ್ರತಿದಿನ ಶಾಲೆಗೆ ಹೋಗುತ್ತಾನೆ…!
ದಕ್ಷಿಣ ಪಂತನ್ ಬುಡಕಟ್ಟು ಮಧ್ಯಮ ಇಂಗ್ಲಿಷ್ ಶಾಲೆಯ 3ನೇ ತರಗತಿಯ ವಿದ್ಯಾರ್ಥಿ ಯುವರಾಜ ರಭಾ ಎಂಬ ವಿದ್ಯಾರ್ಥಿ ಬಸ್ ಹಾಗೂ ಇತರ ಸಾರಿಗೆ ಸೌಲಭ್ಯ ಇಲ್ಲದ ಕಾರಣ ಪ್ರತಿದಿನ ಬೆಳಿಗ್ಗೆ ಶಾಲೆಗೆ ಬರಲು ಮತ್ತು ಮನೆಗೆ ಹೋಗಲು ಕುದುರೆಯ ಮೇಲೆ ಸವಾರಿ ಮಾಡುತ್ತಾನೆ. ಯುವರಾಜ ಮತ್ತು ಅವನ ಕುದುರೆ, ‘ಪಖಿರಾಜ್ ಘೋರಾ’ (ಹಾರುವ ಕುದುರೆ) ಪ್ರತಿಕೂಲ ಪರಿಸ್ಥಿತಿಗಳಿಗೆ ಶರಣಾಗದೆ ಜನರ ಹೃದಯಗಳನ್ನು ಗೆಲ್ಲುತ್ತಿದೆ ಮತ್ತು ಪ್ರೇರೇಪಿಸುತ್ತಿದೆ.
‘ಯುವ ರಾಜಕುಮಾರ’ ಎಂಬ ಅರ್ಥವನ್ನು ಹೊಂದಿರುವ ಅವನ ಹೆಸರಿನಂತೆ ಈ ಪುಟ್ಟ ಬಾಲಕ ರಾಜಕುಮಾರನಂತೆ ಕುದುರೆಯ ಮೇಲೆ ವಿಶಿಷ್ಟವಾಗಿ ಪ್ರತಿದಿನ ಶಾಲೆಗೆ ಪ್ರಯಾಣಿಸುತ್ತಾನೆ. ಕುದರೆ ಪ್ರಯಾಣಕ್ಕೆ ಅವನಿಗೆ ಸಂಪೂರ್ಣವಾಗಿ ಹೊಂದಿಕೆಯಾಗಿದೆ. ಆತನೊಬ್ಬನೇ ಕುದುರೆ ಸವಾರಿ ಮಾಡಿಕೊಂಡು ಶಾಲೆಗೆ ಬರುತ್ತಾನೆ…!
ಯುವರಾಜ ತನ್ನ ಹೆತ್ತವರು ಮತ್ತು ಸಹೋದರರೊಂದಿಗೆ ದಕ್ಷಿಣ ಕಾಮರೂಪದ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಾನೆ, ಅಲ್ಲಿ ಯಾವುದೇ ಬಸ್ಸುಗಳು, ವ್ಯಾನ್ಗಳು ಅಥವಾ ಇತರ ಸಾರ್ವಜನಿಕ ಸಾರಿಗೆ ಸೌಲಭ್ಯವಿಲ್ಲ. “ಈ ಪ್ರದೇಶದಲ್ಲಿ ಸಂಪರ್ಕಕ್ಕೆ ಸರಿಯಾದ ರಸ್ತೆಗಳಿಲ್ಲ. ಅವನ ಶಾಲೆ ನಾಲ್ಕು ಕಿಲೋಮೀಟರ್ ದೂರದಲ್ಲಿದೆ. ಅಲ್ಲಿಗೆ ಹೋಗಲು ಕಚ್ಛಾ ಅರಣ್ಯ ಹಾದಿಗಳಿವೆ. ಆದರೂ ಆತ ಒಂದೇ ಒಂದು ದಿನ ತರಗತಿಯನ್ನು ತಪ್ಪಿಸಲಿಲ್ಲ” ಎಂದು ಆತನ ಶಿಕ್ಷಕರೊಬ್ಬರು ಹೇಳಿದ್ದಾರೆ.
ಯುವರಾಜನ ತಂದೆ 2024 ರಲ್ಲಿ ೀ ಬಾಲಕನಿಗೆ ಶಾಲೆಗೆ ಹೋಗಲು ‘ಪಖಿರಾಜ್’ ಎಂಬ ಕುದುರೆಯನ್ನು ವ್ಯವಸ್ಥೆ ಮಾಡಿದ್ದಾನೆ. ಇದರಿಂದ ಬಾಲಕ ನಿಯಮಿತವಾಗಿ ಶಾಲೆಗೆ ಹೋಗಬಹುದು. ಅಂದಿನಿಂದ, ಆತ ಪ್ರತಿದಿನ ಶಾಲೆಗೆ ಕುದುರೆ ಮೇಲೆಯೇ ತೆರಳುತ್ತಿದ್ದಾನೆ. ಆತ ಒಬ್ಬನೇ ಸವಾರಿ ಮಾಡುವುದರಿಂದ ಅನೇಕರಿಗೆ ಆಕರ್ಷಣೆ ಮತ್ತು ಸ್ಫೂರ್ತಿಯ ಮೂಲವಾಗಿದ್ದಾನೆ.
ಮೊದಲಿಗೆ, ಶಿಕ್ಷಕರು ಈ ಬಾಲಕನ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದರು, ಆದರೆ ಆತ ಕುದುರೆಯನ್ನು ತಾನೇ ನಿರ್ವಹಿಸುವುದನ್ನು ನೋಡಿದ ನಂತರ ಅವರ ಭಯ ದೂರವಾಗಿದೆ. “ಯುವರಾಜ ಮತ್ತು ಪ್ರದೇಶದ ಇತರ ಹಳ್ಳಿಗಳ ಅನೇಕ ಮಕ್ಕಳು ಸಾರಿಗೆ ಕೊರತೆಯಿಂದಾಗಿ ಶಾಲೆಯನ್ನು ತಪ್ಪಿಸಿಕೊಳ್ಳುತ್ತಾರೆ. ಆದರೆ ಅವರ ತಂದೆಯ ಕಲ್ಪನೆಗೆ ಧನ್ಯವಾದಗಳು, ಯುವರಾಜ ಪ್ರತಿದಿನ ಬರುತ್ತಾರೆ” ಎಂದು ಶಿಕ್ಷಕರು ಹೇಳಿದರು.
ಯುವರಾಜ ಕುಟುಂಬದ ಧೈರ್ಯಶಾಲಿ ಮತ್ತು ವಿಶಿಷ್ಟ ಹೆಜ್ಜೆಯ ಹೊರತಾಗಿಯೂ, ಯುವರಾಜನಂತಹ ಇತರ ಮಕ್ಕಳಿಗೆ ಉತ್ತಮ ಸಾರಿಗೆ ಮತ್ತು ಆ ಪ್ರದೇಶದಲ್ಲಿ ಹೊಸ ಶಾಲೆಯನ್ನು ಸ್ಥಾಪಿಸಲು ಶಾಲೆಯು ಸರ್ಕಾರವನ್ನು ಒತ್ತಾಯಿಸಿದೆ.
ಯುವರಾಜಗೆ, ಕುದುರೆ ಕೇವಲ ಶಾಲೆಗೆ ಹೋಗುವ ಸವಾರಿಯಲ್ಲ; ಅದು ಅವನ ಕನಸುಗಳಿಗೆ ಸೇತುವೆ. “ನಾನು ಚೆನ್ನಾಗಿ ಓದಬೇಕು ಮತ್ತು ಪೊಲೀಸ್ ಅಧಿಕಾರಿಯಾಗಬೇಕು, ಏಕೆಂದರೆ ನಾನು ಪಡೆಗಳನ್ನು ಪ್ರೀತಿಸುತ್ತೇನೆ” ಎಂದು ಆತ ಹೇಳಿದ್ದಾನೆ.