ಬೆಳಗಾವಿ :
ಶುಕ್ರವಾರ ಬೆಳಗಾವಿ ನಗರ ಪ್ರದೇಶದ ವಿವಿಧೆಡೆ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಕಾಯ್ದೆ ಅಡಿ ಬೆಳಗಾವಿಯ ಸಹಾಯಕ ಕಾರ್ಮಿಕ ಆಯುಕ್ತರು ತಪಾಸಣೆ ಕೈಗೊಂಡಿದ್ದು ಈ ಸಂದರ್ಭದಲ್ಲಿ ಒಟ್ಟು ಐವರು ಕಿಶೋರ ಕಾರ್ಮಿಕ ಮಕ್ಕಳು ಕಂಡು ಬಂದಿರುತ್ತಾರೆ ಎಂದು ಕಾರ್ಮಿಕ ಇಲಾಖೆ ಪ್ರಕಟಣೆ ನೀಡಿದ್ದು ಇದೀಗ ನಗೆ ಪಾಟಲಿಗೆ ಗುರಿಯಾಗಿದೆ !
ಈ ಮಕ್ಕಳ ಶಾಲೆಯ ದಾಖಲೆಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ತಪಾಸಣೆಯಲ್ಲಿ ಕಾರ್ಮಿಕ ಅಧಿಕಾರಿ ಎಂ.ಎಸ್. ಜೋಗುರು, ಹಿರಿಯ ಕಾರ್ಮಿಕ ನಿರೀಕ್ಷಕ ಸಂಜೀವ ಬೋಸಲೆ, ಮತ್ತು ರಾಜೇಶ್ ಅಸ್ನೋಟಕರ, ಯೋಜನಾ ನಿರ್ದೇಶಕಿ ಜ್ಯೋತಿ ಕಾಂತೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಹಾಜರಿದ್ದರು.
ಕಾರ್ಮಿಕ ಇಲಾಖೆ ಅಧಿಕಾರಿಗಳು ಕೈಗೊಳ್ಳುವ ಈ ತಪಾಸಣೆ ಮಾತ್ರ ಕೇವಲ ಪ್ರಚಾರಕ್ಕೆ ಸೀಮಿತ. ಬೆಳಗಾವಿ ನಗರದ ಎಲ್ಲೆಡೆ ಕಿಶೋರ ಕಾರ್ಮಿಕ ಮಕ್ಕಳ ಸಂಖ್ಯೆ ವ್ಯಾಪಕವಾಗಿ ಸಿಗುತ್ತದೆ. ಆದರೆ ಅಧಿಕಾರಿಗಳಿಗೆ ಕೇವಲ ಐವರು ಕಿಶೋರ ಕಾರ್ಮಿಕ ಮಕ್ಕಳು ಸಿಕ್ಕಿರುವುದು ಮಾತ್ರ ಸೋಜಿಗದ ಸಂಗತಿ. ಹೋಟೆಲ್ ಗಳು, ಅಂಗಡಿಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಮಕ್ಕಳನ್ನು ಹಗಲು ರಾತ್ರಿ ಅತ್ಯಂತ ಕಡಿಮೆ ಸಂಬಳದಿಂದ ದುಡಿಸಿಕೊಳ್ಳಲಾಗುತ್ತಿದೆ. ಆದರೆ ಅಧಿಕಾರಿಗಳು ಮೇಲ್ನೋಟಕ್ಕೆ ತಾವು ತಪಾಸಣೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿರುವುದು ಸಂಶಯಕ್ಕೆ ಕಾರಣವಾಗಿದೆ. ಯಾವಾಗಲಾದರೂ ಒಮ್ಮೆ ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಅಮಾಯಕ ಮಾಲಕರ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತ ದೊಡ್ಡ ದೊಡ್ಡ ಕೈಗಾರಿಕೆ ಹಾಗೂ ಇತರ ಉದ್ಯಮಗಳ ಮೇಲೆ ದಾಳಿ ನಡೆಸಿ ಅಲ್ಲಿರುವ ಕಿಶೋರ ಕಾರ್ಮಿಕ ಮಕ್ಕಳನ್ನು ಬಿಡಿಸುವಲ್ಲಿ ಕಾರ್ಮಿಕ ಇಲಾಖೆ ಮುಂದಾಗಬೇಕು. ಅಂತಹ ಮಾಲೀಕರ ವಿರುದ್ಧ ಕ್ರಮ ಜರುಗಿಸಲಿ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.