ಮೂಡಲಗಿ: ಭಾರತದ ನೆಲದಲ್ಲೇ ನಿಂತು ವೈರಿ ರಾಷ್ಟ್ರ ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ನೆಲೆಗಳನ್ನು ಪತ್ತೆ ಹಚ್ಚಿ ನಿಖರವಾಗಿ ಅವುಗಳನ್ನೇ ಧ್ವಂಸ ಮಾಡಿದ ʼಆಪರೇಶನ್ ಸಿಂಧೂರ -1 ಮತ್ತು 2 ಯಶಸ್ವಿ ಮಾಡಿದ ಸೈನಿಕರಿಗೆ ಶ್ರೀರಾಮನ ಬಂಟ ಹನುಮನೇ ಪ್ರೇರಣೆಯಾಗಿದ್ದಾನೆ. ರೆಫೆಲ್ ಪೂಜೆ ಮಾಡಿದನ್ನೇ ಒಂದು ಟೀಕಾಸ್ತ್ರವನ್ನಾಗಿ ಮಾಡಿಕೊಂಡ ವಿರೋಧಿಗಳು ಭಾರತದ ದೈವಿ ಶಕ್ತಿಯನ್ನು ಅರ್ಥ ಮಾಡಿಕೊಳ್ಳದೇ ಮಾತನಾಡಿರುವುದು ನಾಚಿಕೆಗೇಡು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ರಾಜಾಪೂರ ಗ್ರಾಮದ ಚುನಿಮಟ್ಟಿಯ ಶಕ್ತಿದೇವತೆಯಾದ ಚೂನಮ್ಮಾದೇವಿ ಹಾಗೂ ದ್ಯಾಮವ್ವದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ಜಾತ್ರಾ ನಿಮಿತ್ಯದ ಹಿನ್ನಲೆಯಲ್ಲಿ ಏರ್ಪಡಿಸಿದ ನಗೆ ಹಬ್ಬ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಾಕಿಸ್ತಾನ ಪ್ರೇರಿತ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕೈಗೊಂಡಿರುವ ಕಾರ್ಯಾಚರಣೆ ಕುರಿತು ಹೇಳಿದರು.
ಭಾರತದ ಸಂಯಮತೆಯನ್ನು ವೈರಿ ರಾಷ್ಟ್ರ ಪಾಕಿಸ್ತಾನ ದುರಪಯೋಗ ಪಡಿಸಿಕೊಂಡಾಗ ಇಡಿ ಜಗತ್ತೇ ನಿಬ್ಬೆರಗಾಗುವಂತೆ ದಾಳಿ ಮಾಡಿರುವ ಭಾರತದ ಸೈನಿಕರ ಬಲ ಜಗಜ್ಜಾಹೀರಾಗಿದೆ. ಹೀಗಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಗಡಿಯಲ್ಲಿ ರಕ್ಷೆಣೆ ಮಾಡುತ್ತಿರುವ ಸೈನಿಕರ ನೈತಿಕ ಬಲ ಕುಗ್ಗುವಂತಹ ಯಾವುದೇ ಹೇಳಿಕೆಗಳನ್ನು ನೀಡಬಾರದೆಂದು ವಿರೋಧಿಗಳಿಗೆ ಆಗ್ರಹಿಸಿದರು.
ಗ್ರಾಮದ ಜಾತ್ರೆ ತಾಲೂಕಿನಲ್ಲಿ ಒಂದು ಮಾದರಿ ಜಾತ್ರೆಯಾಗಿದೆ. ದಾಖಲೆಯ ಪ್ರಮಾಣದಲ್ಲಿ ಜನ ಸೇರುವ ಮೂಲಕ ಈ ಜಾತ್ರೆಯ ವೈಭವ ಇನ್ನಷ್ಟು ಹೆಚ್ಚಾಗಿದೆ ಮತ್ತು ಜಾತ್ರೆಯಲ್ಲಿ ಕೈಗೊಂಡಿರುವ ಅಚ್ಚುಕಟ್ಟಾದ ಕ್ರಮಗಳು, ಊಟೋಪಚಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಮಹೋತ್ಸವಗಳು ಉಲ್ಲೇಖನೀಯವಾಗಿದ್ದು ಬರುವ ದಿನಗಳಲ್ಲಿ ನಾವೆಲ್ಲ ರೈತರಾಗಿದ್ದು ರೈತರಿಗೆ ಸಂಬಂಧಪಟ್ಟಂತಹ ಕೃಷಿ ಮೇಳಗಳನ್ನು ಆಯೋಜಿಸುವುದು ಅಗತ್ಯವಾಗಿದೆ ಎಂದು ವ್ಯವಸ್ಥಾಪಕರಿಗೆ ಸಲಹೆ ನೀಡಿದರು ಮತ್ತು ಎಲ್ಲಾ ವ್ಯವಸ್ಥೆಗಳನ್ನು ಏರ್ಪಡಿಸಿದ ಗ್ರಾಮದ ಹಿರಿಯರು ಮತ್ತು ಯುವ ಮುಖಂಡರಿಗೆ ಧನ್ಯವಾದಗಳನ್ನು ಹೇಳಿದರು.
ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆ ಅನುದಾನದಲ್ಲಿ ಚುನಮ್ಮಾದೇವಿ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ.ಗಳು ಹಾಗೂ ಮುಜರಾಯಿ ಇಲಾಖೆಯಿಂದ 5 ಲಕ್ಷ ರೂ.ಗಳ ಮಂಜೂರಾತಿಯಾಗಿದೆ ಎಂದರು. ಕಲ್ಲೋಳಿ ರಾಜಾಪೂರ ಕೊರೆವ್ವನ ಹಳ್ಳದ ಹತ್ತಿರ ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ಬ್ರೀಡ್ಜ್ ಕಂ ಬ್ಯಾರೆಜ್ ನಿರ್ಮಿಸಲಾಗಿದೆ. ಗ್ರಾಮದ ಅಭಿವೃದ್ದಿಗಾಗಿ ರಸ್ತೆ, ಕುಡಿಯುವ ನೀರು ಸೌಲಭ್ಯ ಹಾಗೂ ಜಿ.ಪಂ ಅಧ್ಯಕ್ಷನ ಅವಧಿಯಲ್ಲಿ ಕನಕ ಭವನ ನಿರ್ಮಾಣ ಮಾಡಿರುವುದನ್ನು ಸ್ಮರಿಸಿದರು ಹಾಗೂ ಮುಂಬರುವ ದಿನಗಳಲ್ಲಿ ಗ್ರಾಮದ ಅಭಿವೃದ್ದಿ ಕಾರ್ಯಗಳಿಗೆ ನನ್ನ ಸಹಕಾರ ಇದ್ದೇ ಇರುತ್ತದೆ ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ವಿಠ್ಠಲ ಪಾಟೀಲ, ಬೈರು ಯಕ್ಕುಂಡಿ, ರಾಜು ಬೈರುಗೋಳ, ರಾಮಚಂದ್ರ ಪಾಟೀಲ, ಬಸವರಾಜ ಪಂಡ್ರೋಳಿ, ಶಿವಾನಂದ ಕಮತಿ, ರಾಜು ಪವಾರ, ಕೆಂಪಣ್ಣ ಗಡಹಿಂಗ್ಲೆಜ್, ಸಿದ್ದಪ್ಪ ಜೆಟ್ಟೆನ್ನವರ ಗ್ರಾ.ಪಂ ಅಧ್ಯಕ್ಷೆ ರೇಣುಕಾ ಕಮತಿ, ರಾಮಚಂದ್ರ ಕೊಡ್ಲಿ, ಬಸವರಾಜ ಹೊಸುರ, ಶಿವಪುತ್ರ ಗುಂಡಪ್ಪಗೋಳ, ಶ್ರೀನಾಥ ಬೈರುಗೋಳ, ವಿಠ್ಠಲ ಸಿಂಗಾರಿ, ಸಿದ್ದು ಯಕ್ಕುಂಡಿ, ಸುಭಾಸ ಎಣ್ಣಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.