ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲೀಗ ಚಾಂಪಿಯನ್. ಆದರೆ ಚಾಂಪಿಯನ್ನರ ಕಪ್ ಗೆಲುವಿನ ಹಾದಿ ಸುಲಭದ್ದೇನೂ ಆಗಿರಲಿಲ್ಲ. ವಿವರಿಸಿದರೆ ಅದೊಂದು ಅಧ್ಯಾಯ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಪ್ರಮುಖ ಆಟಗಾರರು ಕಟು ಟೀಕೆಗಳನ್ನು ಎದುರಿಸುತ್ತಲೇ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಆದರೆ ಟೀಕಾಕಾರರೇ ಈಗ ಕ್ಲೀನ್ಬೌಲ್ಡ್ ಆಗಿದ್ದಾರೆ. ತಂಡದ ಬಹುತೇಕ ಎಲ್ಲಾ ಆಟಗಾರರೂ ಟೀಕೆಗಳಿಂದ ನೊಂದು ಬೆಂದಿದ್ದರು. ತಮ್ಮ ಸಾಮರ್ಥ್ಯ, ಪ್ರತಿಭೆಯನ್ನು ಅನುಮಾನಿಸಿದವರ ಮುಂದೆ ಉತ್ತರವಿಲ್ಲದೆ ಕೊರಗಿದ್ದರು. ಹೀಗಾಗಿಯೇ ಚಾಂಪಿಯನ್ಸ್ ಟ್ರೋಫಿ ಗೆಲುವು ಪ್ರತಿ ಆಟಗಾರರಿಗೂ ಬೇರೆ ಬೇರೆ ಕಾಣಕ್ಕೆ ವಿಶೇಷ ಮತ್ತು ಅಷ್ಟೇ ಮಹತ್ವದ್ದು.
ರೋಹಿತ್ಗೆ ಕ್ರಿಕೆಟ್ನ ‘ಮರುಜನ್ಮ’
ರೋಹಿತ್ ಪಾಲಿಗೆ ಈ ಚಾಂಪಿಯನ್ಸ್ ಟ್ರೋಫಿ ಗೆಲುವು ಒಂದರ್ಥದಲ್ಲಿ ಕ್ರಿಕೆಟ್ ವೃತ್ತಿ ಬದುಕಿನ ಮರುಜನ್ಮ. ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಅತಿ ಮಹತ್ವದ ಟೆಸ್ಟ್ ಸರಣಿಗಳಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದ್ದ ರೋಹಿತ್ ಇನ್ನೇನು ನಿವೃತ್ತಿಯಾಗುತ್ತಾರೆ ಎಂದೇ ವಿಶ್ಲೇಷಿಸಲಾಗುತ್ತಿತ್ತು. ಸ್ವತಃ ನಾಯಕರಾಗಿದ್ದರೂ, ಸಿಡ್ನಿ ಟೆಸ್ಟ್ಗೆ ತಂಡದಿಂದಲೇ ಹೊರಬಿದ್ದಿದ್ದರು. ಮಾಧ್ಯಮಗಳಂತೂ ನಿವೃತ್ತಿ ಘೋಷಣೆ ಸುದ್ದಿಗಾಗಿಯೇ ಅವರ ಬೆನ್ನು ಬಿದ್ದಿತ್ತು. ಹೀಗಾಗಿ ತಮ್ಮ ಆಟದಲ್ಲಿ ಲಯ ಕಂಡುಕೊಳ್ಳಲು ದೇಸಿ ಕ್ರಿಕೆಟ್ಗೆ ಮರಳಬೇಕಾಯಿತು. ಅಲ್ಲೂ ವೈಫಲ್ಯ. ಇವರು ಚಾಂಪಿಯನ್ಸ್ ಟ್ರೋಫಿಗೂ ಅನ್ಫಿಟ್ ಎಂದು ಹಲವರು ಆಕ್ರೋಶ ಹೊರಹಾಕಿದ್ದರು. ಆದರೆ ರೋಹಿತ್ ಎದೆಗುಂದಲಿಲ್ಲ. ತಾವೇನು, ತಮ್ಮ ಆಟವೇನು ಎಂದು ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೆ ಸಾಬೀತುಪಡಿಸಿದರು. ಅತಿ ಮಹತ್ವದ ಫೈನಲ್ನಲ್ಲಿ ತಮ್ಮ ಆಕ್ರಮಣಕಾರಿ ಆಟದ ಮೂಲಕ ಭಾರತಕ್ಕೆ ಕಪ್ ಗೆಲ್ಲಿಸಿಕೊಟ್ಟರು.
ರೋಹಿತ್ ಬಗ್ಗೆ ಟೀಕೆ ವ್ಯಕ್ತವಾಗುವಾಗಲೆಲ್ಲಾ ಅವರ ಜೊತೆಗೇ ಟೀಕಾಕಾರರ ಬಾಯಿಗೆ ಆಹಾರವಾಗುವುದು ವಿರಾಟ್ ಕೊಹ್ಲಿ. ಅದಕ್ಕೆ ಕಾರಣ ಇಲ್ಲವೆಂದೇನಲ್ಲ. ಟೆಸ್ಟ್ ಸರಣಿಗಳಲ್ಲಿ ಕಳಪೆ ಆಟವಾಡಿದ್ದ ಕೊಹ್ಲಿ ಬಗ್ಗೆಯೂ ನಿವೃತ್ತಿ ಸುದ್ದಿಗಳು ಹರಿದಾಡುತ್ತಿದ್ದವು. ಕೊಹ್ಲಿ ಆಟ ಮುಗಿಯಿತು ಎಂದೇ ವಿಶ್ಲೇಷಿಸಲಾಗುತ್ತಿತ್ತು. ಆದರೆ ಕೊಹ್ಲಿ ಮುಗಿಯಲಿಲ್ಲ, ಬದಲಾಗಿ ತಮ್ಮ ವಿರುದ್ಧ ಕೇಳಿ ಬರುತ್ತಿದ್ದ ಟೀಕೆಗಳನ್ನು ಮುಗಿಸಿದರು. ಈ ಸಲ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊಹ್ಲಿಯ ಆಟ, ಅವರ ವೃತ್ತಿ ಬದುಕಿನ ಶ್ರೇಷ್ಠ ಆಟದಂತಿದ್ದವು. ಆಡಿದ 5 ಪಂದ್ಯಗಳಲ್ಲಿ 54.50ರ ಸರಾಸರಿಯಲ್ಲಿ 218 ರನ್ ಹೊಡೆದರು. ಪಾಕಿಸ್ತಾನ ವಿರುದ್ಧ ಒತ್ತಡದ ಪಂದ್ಯದಲ್ಲಿ ಹೊಡೆದ ಶತಕವಂತೂ ಕೊಹ್ಲಿ ಏಕೆ ಕಿಂಗ್ ಎಂಬುದನ್ನು ಸಾರಿ ಸಾರಿ ಹೇಳುತ್ತಿತ್ತು. ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 84 ರನ್ ಬಾರಿಸಿ ಮೆರೆದಾಡಿದರು. ಫೀಲ್ಡಿಂಗ್ನಲ್ಲೂ ಕೊಹ್ಲಿಯದ್ದು ಶ್ರೇಷ್ಠ ಪ್ರದರ್ಶನ. ಯುವ ಕ್ರಿಕೆಟಿಗರು ನಾಚುವಂತೆ ಓಡಾಡಿದರು. ಕ್ಯಾಚ್ನಲ್ಲೂ ದಾಖಲೆ ಮೇಲೆ ದಾಖಲೆ ಬರೆದರು. ಒಂದಂಥೂ ಸ್ಪಷ್ಟ. ಕೊಹ್ಲಿ ಇನ್ನೊಂದಿಷ್ಟು ವರ್ಷ ಕ್ರಿಕೆಟ್ ಅಂಗಳದಲ್ಲಿ ತಮ್ಮ ಹವಾ ಸೃಷ್ಟಿಸಲಿದ್ದಾರೆ.
ಸಾಮಾನ್ಯವಾಗಿ ಕಳಪೆ ಆಟವಾಡಿದರೆ ಆಟಗಾರರು ಟೀಕೆಗೆ ಗುರಿಯಾಗುವುದಿದೆ. ಆದರೆ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿ, ತಂಡವನ್ನು ಅಪಾಯದಿಂದ ಪಾರು ಮಾಡಿದಾಗಲೂ ಟೀಕಾಕಾರರಿಗೆ ಆಹಾರವಾಗುವ ಏಕೈಕ ಆಟಗಾರ ಕೆ.ಎಲ್.ರಾಹುಲ್. 2023ರ ಏಕದಿನ ವಿಶ್ವಕಪ್ ಯಾರು ಮರೆತಿರಲು ಸಾಧ್ಯ? ಭಾರತ ಅಂದು ಸೋತಿತ್ತು. ಆದರೆ ಒಂದಿಡೀ ತಂಡದ ಸೋಲನ್ನು ರಾಹುಲ್ ಮೇಲೆ ಕಟ್ಟಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸಿದರು. ತಂಡದಲ್ಲಿ ರಾಹುಲ್ರ ಆಯ್ಕೆಯನ್ನೇ ಪ್ರಶ್ನಿಸಿದರು. ರಾಹುಲ್ ಆಟ ಫಿನಿಶ್ ಎಂದರು. ಆದರೆ ರಾಹುಲ್ ಎದೆಗುಂದಲಿಲ್ಲ. ತಂಡಕ್ಕೆ ಆರಂಭಿಕ ಬೇಕಾದಾಗ ಆರಂಭಿಕನಾಗಿ, ಮಧ್ಯಮ ಕ್ರಮಾಂಕಕ್ಕೆ ಅಗತ್ಯವಿದ್ದಾಗ ಮಧ್ಯಮ ಕ್ರಮಾಂಕದಲ್ಲಿ, ಫಿನಿಶರ್ ಬೇಕಾದಾಗ ಫಿನಿಶಿಂಗ್ಗೆ, ವಿಕೆಟ್ ಕೀಪರ್ ಬೇಕಾದಾಗ ಅದಕ್ಕೂ ಸೈ ಎಂದು ಎಲ್ಲವನ್ನೂ ತಂಡಕ್ಕಾಗಿ ಮುಡಿಪಾಗಿಡುವ ರಾಹುಲ್ ಕಂಡರೆ ಬಹುತೇಕರಿಗೆ ಅಲರ್ಜಿ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರ ಆಟ ಎಂಥಾ ಶ್ರೇಷ್ಠ ಆಟಗಾರರಿಗೂ ಕಮ್ಮಿಯಿರಲಿಲ್ಲ. ಸೆಮಿಫೈನಲ್, ಫೈನಲ್ನಲ್ಲಿ ಒಂದರ ಹಿಂದೆ ಒಂದರಂತೆ ವಿಕೆಟ್ ಉರುಳುತ್ತಿದ್ದಾಗ, ಗಟ್ಟಿಯಾಗಿ ನಿಂತು ತಂಡವನ್ನು ಗೆಲ್ಲಿಸಿದ್ದು ರಾಹುಲ್. ಅವರ ಆಟ ಇಲ್ಲದಿದ್ದರೆ ಭಾರತಕ್ಕೆ ಕಪ್ ಸಿಗುವುದೇ ಅನುಮಾನವಿತ್ತು.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಗರಿಷ್ಠ ರನ್ ಹೊಡೆದ ಆಟಗಾರ ಶ್ರೇಯಸ್. ಆದರೆ ಶ್ರೇಯಸ್ ಕಳೆದೆರಡು ವರ್ಷದ ಹಿನ್ನೆಲೆ ನೋಡಿದರೆ ಅವರು ತಂಡದಲ್ಲಿ ಸ್ಥಾನ ಪಡೆದಿದ್ದೇ ಅಚ್ಚರಿ. ದೇಸಿ ಕ್ರಿಕೆಟ್ ಆಡಲು ಆಸಕ್ತಿ ತೋರದ್ದಕ್ಕೆ ಅವರನ್ನು ಬಿಸಿಸಿಐ ವಾರ್ಷಿಕ ಗುತ್ತಿಗೆಯಿಂದ ಹೊರಗಿಟ್ಟಿತ್ತು. ತಂಡದಿಂದಲೂ ಹೊರಬಿದ್ದಿದ್ದರು. ಇನ್ನು ತಂಡಕ್ಕೆ ಆಯ್ಕೆಯಾಗುವುದೇ ಅನುಮಾನ ಎಂಬಂತಿತ್ತು. ಆದರೆ ದೇಸಿ ಕ್ರಿಕೆಟ್, ಐಪಿಎಲ್ನಲ್ಲಿ ಮಿಂಚಿದ ಶ್ರೇಯಸ್, ಈಗ ಭಾರತದ ಕಪ್ ಗೆಲುವಿನ ರೂವಾರಿ.
ಪಾದದ ಗಾಯಕ್ಕೆ ತುತ್ತಾಗಿ ಸುದೀರ್ಘ 14 ತಿಂಗಳು ಭಾರತ ತಂಡದಿಂದ ಹೊರಗುಳಿದಿದ್ದ ವೇಗಿ ಮೊಹಮದ್ ಶಮಿ, ಗಾಯದ ಬಳಿಕ ಭಾರತ ಪರ ಆಡುವ ನಂಬಿಕೆಯೇ ಕಳೆದುಕೊಂಡಿದ್ದರು. ಇದನ್ನು ಹೇಳಿದ್ದು ಸ್ವತಃ ಶಮಿ. ನಾನು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತೇನೋ ಎಂಬ ಅನುಮಾನ ಎದುರಾಗಿತ್ತು. ವೈದ್ಯರ ಬಳಿಯೂ ಇದನ್ನೇ ಕೇಳುತ್ತಿದ್ದೆ ಎಂದಿದ್ದ ಶಮಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಸಾಧಕ. ಜಸ್ಪ್ರೀತ್ ಬೂಮ್ರಾ ಅನುಪಸ್ಥಿತಿಯಲ್ಲೂ ತಂಡಕ್ಕೆ ವೇಗಿಯ ಕೊರತೆಯಾಗದಂತೆ ನೋಡಿಕೊಂಡ ಶಮಿ, ತಂಡಕ್ಕೆ ಕಪ್ ಗೆಲ್ಲಿಸಿಕೊಟ್ಟಿದ್ದಾರೆ.
ಟೂರ್ನಿಯಲ್ಲಿ ವರುಣ್ ಚಕ್ರವರ್ತಿ ಭಾರತದ ಟ್ರಂಪ್ಕಾರ್ಡ್. ತಂಡದ ಗೆಲುವಿನ ರೂವಾರಿ. ಆದರೆ ಕೆಲ ವರ್ಷಗಳ ಹಿಂದೆ ಅವರ ಪರಿಸ್ಥಿತಿ ಭಿನ್ನವಾಗಿತ್ತು. ವರುಣ್ 2021ರ ಟಿ20 ವಿಶ್ವಕಪ್ಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಟೂರ್ನಿ ದುಬೈ ಸೇರಿ ಯುಎಇಯ ಕೆಲ ನಗರಗಳಲ್ಲಿ ನಡೆದಿತ್ತು. ಆದರೆ ವರುಣ್ಗೆ ಟೂರ್ನಿಯಲ್ಲಿ ಒಂದೂ ವಿಕೆಟ್ ಸಿಕ್ಕಿರಲಿಲ್ಲ. ಇದರಿಂದ ಕಣ್ಣೀರಿಟ್ಟಿದ್ದ ಅವರು, ಇಂದು ದುಬೈ ಕ್ರೀಡಾಂಗಣದಲ್ಲೇ ಎಲ್ಲರ ಕಣ್ಣಲ್ಲೂ ಹೀರೋ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ.
ಭಾರತೀಯ ಆಟಗಾರರಿಗಿಂತ ಹೆಚ್ಚಾಗಿ ಟೀಕೆಗಳನ್ನೇ ಎದುರಿಸುತ್ತಿದ್ದವರು ಕೋಚ್ ಗೌತಮ್ ಗಂಭೀರ್. ತವರಿನಲ್ಲೇ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ವೈಟ್ವಾಶ್ ಮುಖಭಂಗ, ಆಸ್ಟ್ರೇಲಿಯಾದಲ್ಲಿ ನಿರ್ಣಾಯಕ ಟೆಸ್ಟ್ ಸರಣಿ ಸೋಲಿನಿಂದ ಕುಗ್ಗಿ ಹೋಗಿದ್ದ ಗಂಭೀರ್, ಸದ್ಯ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಮೂಲಕ ನಿರಾಳರಾಗಿದ್ದಾರೆ. ಇದರೊಂದಿಗೆ ಅವರ ತಲೆಮೇಲೆ ತೂಗುತ್ತಿತ್ತ ಕತ್ತಿಯಿಂದ ಸದ್ಯಕ್ಕೆ ಪಾರಾಗಿದ್ದಾರೆ.
ಐವರು ಸ್ಪಿನ್ನರ್ಸ್ ಆಯ್ಕೆ ಪ್ರಶ್ನಿಸಿವರೆಲ್ಲಾ ಸೈಲೆಂಟ್
ಭಾರತ ತಂಡ ಈ ಬಾರಿ 5 ಸ್ಪಿನ್ ಬೌಲರ್ಗಳನ್ನು ಕಟ್ಟಿಕೊಂಡು ದುಬೈ ವಿಮಾನವೇರಿತ್ತು. ಆದರೆ ಇದಕ್ಕೆ ಟೀಕೆ ವ್ಯಕ್ತವಾಗಿದ್ದೇ ಜಾಸ್ತಿ. ವೇಗಿಗಳಿಗಿಂದ ಜಾಸ್ತಿ ಸ್ಪಿನ್ನರ್ ಆಯ್ಕೆ ಯಾಕೆ ಎಂದು ಹಲವರು ಪ್ರಶ್ನಿಸಿದ್ದರು. ಇದು ತಂಡಕ್ಕೆ ಹಿನ್ನಡೆ ಎಂದು ಕ್ರೀಡಾ ತಜ್ಞರು ಷರಾ ಬರೆದಿದ್ದರು. ಆದರೆ ಭಾರತ ಟ್ರೋಫಿ ಗೆದ್ದಿದ್ದಕ್ಕೆ ಪ್ರಮುಖ ಕಾರಣವೇ ಸ್ಪಿನ್ನರ್ಸ್. 5 ಪಂದ್ಯಗಳಲ್ಲಿ ಭಾರತದ ಸ್ಪಿನ್ನರ್ಸ್ ಒಟ್ಟು 26 ವಿಕೆಟ್ ಕಬಳಿಸಿ ಎಲ್ಲರ ಹುಬ್ಬೇರಿಸಿದರು.