ಜನಜೀವಾಳ ಗೋವಾ ವಿಶೇಷ ಪ್ರತಿನಿಧಿ, ಗೋವಾ: ಕೋಲ್ವಾ ಕಡಲತೀರದಲ್ಲಿ ರಾಷ್ಟ್ರೀಯ ಪತ್ರಿಕೆಗಾರರ ಸಮಾವೇಶ ಶುಕ್ರವಾರ ಸಂಭ್ರಮದಿಂದ ನೆರವೇರಿತು. ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಪತ್ರಕರ್ತರ ಜೊತೆಗೆ ಕರ್ನಾಟಕದ ಸಾಕಷ್ಟು ಸಂಖ್ಯೆಯ ಪತ್ರಕರ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಉದ್ಘಾಟನೆ ನೆರವೇರಿಸಿದ ಕರ್ನಾಟಕ ಸರಕಾರದ ಸ್ಪೀಕರ್ ಯು.ಟಿ. ಖಾದರ್ ಅವರು ಮಾತನಾಡಿ, ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ. ಕಾರ್ಯಕ್ರಮ ಏರ್ಪಡಿಸಿರುವ ಎಲ್ಲರನ್ನು ನಾನು ಅಭಿನಂದಿಸುವೆ. ದೇಶದ ವಿವಿಧ ರಾಜ್ಯಗಳಿಂದ ಪತ್ರಕರ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ಮೂಲಕ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ಸ್ವತಂತ್ರ ಪೂರ್ವ ಕಾಲದಿಂದಲೇ ಪತ್ರಕರ್ತರಿಂದಲೇ ದೇಶದಲ್ಲಿ ಸ್ವಾತಂತ್ರ್ಯ ಚಳವಳಿ ಹೊಸರೂಪ ಪಡೆದುಕೊಂಡಿದೆ. ಅನೇಕ ಪತ್ರಕರ್ತರು ಸ್ವತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪತ್ರಕರ್ತರ ತ್ಯಾಗ ಹಾಗೂ ಅನುಪಮ ಸೇವೆಯನ್ನು ಈ ಸಮಾಜ ಎಂದಿಗೂ ಮರೆಯಲಾರದು ಎಂದು ಅವರು ಹೇಳಿದರು.

ಪತ್ರಕರ್ತರು ಅತ್ಯಂತ ಜವಾಬ್ದಾರಿಯುತ ಸ್ಥಾನವನ್ನು ಹೊಂದಿದ್ದಾರೆ. ಪತ್ರಕರ್ತರು ಹಾಗೂ ಪತ್ರಿಕಾ ಮಾಧ್ಯಮ ಇಂದು ದೇಶದ ಪ್ರಗತಿಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದೆ. ಸ್ವಾಸ್ಥ್ಯ ಸಮಾಜ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಪತ್ರಿಕೋದ್ಯಮ ಅತ್ಯಂತ ಮಹತ್ವ ಹಾಗೂ ಘನತೆ ಗೌರವದಿಂದ ಕೂಡಿದೆ. ಮುಂದಿನ ದಿನಗಳಲ್ಲಿ ತಮ್ಮ ಶ್ರೇಷ್ಠ ಸೇವೆಯನ್ನು ನೀಡುವ ಮೂಲಕ ದೇಶದ ಅಭಿವೃದ್ಧಿಗೆ ತಮ್ಮ ಇನ್ನಷ್ಟು ಕೊಡುಗೆ ನೀಡಬೇಕು ಎಂದು ಅವರು ತಿಳಿಸಿದರು.
ದೇಶದ ಪ್ರಜಾಪ್ರಭುತ್ವದ ಕಾವಲು ಆಗಿರುವ ಪತ್ರಕರ್ತರು ನಿರ್ಭೀತವಾಗಿ ನಿರ್ವಹಿಸಬೇಕು. ಪತ್ರಕರ್ತರ ಹಾಗೂ ರಾಜಕಾರಣಿಗಳು ಜೊತೆಜೊತೆಗೆ ಕಾರ್ಯನಿರ್ವಹಿಸುವ ಮೂಲಕ ಈ ದೇಶದ ಅಭಿವೃದ್ಧಿಗೆ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣಿಭೂತರಾಗಬೇಕು. ಈ ಮೂಲಕ ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಇನ್ನಷ್ಟು ಭದ್ರವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿಯನ್ನು ಮೆರೆಯಬೇಕು ಎಂದು ಹೇಳಿದರು.
ಸಮಸ್ಯೆ ಇಲ್ಲದ ವ್ಯಕ್ತಿ ಇಲ್ಲ. ಸಮಸ್ಯೆ ಇಲ್ಲದ ಸಮಾಜವಿಲ್ಲ. ಸಮಸ್ಯೆ ಇಲ್ಲದ ದೇಶ ಇಲ್ಲ. ಸಮಾಜಮುಖಿ ಹಾಗೂ ಸ್ವಾಸ್ಥ್ಯ ಸಮಾಜ ರೂಪಿಸುವ ನಿಟ್ಟಿನಲ್ಲಿ ಪತ್ರಕರ್ತರು ಕಾರ್ಯ ನಿರ್ವಹಿಸಬೇಕು. ನಮ್ಮ ದೇಶ ಜಗತ್ತಿನಲ್ಲಿ ಒಂದನೇ ಸ್ಥಾನಕ್ಕೆ ಬರಬೇಕು ಎನ್ನುವುದು ದೇಶದ ಎಲ್ಲಾ ಜನರ ಕನಸು. ಈ ನಿಟ್ಟಿನಲ್ಲಿ ಜನರಲ್ಲಿ ಪ್ರೀತಿ-ವಿಶ್ವಾಸ ಮೂಡಬೇಕು. ಈ ನಿಟ್ಟಿನಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದರು.
ಪತ್ರಕರ್ತರ ಶ್ರೇಯೋಭಿವೃದ್ದಿಗೆ ಕರ್ನಾಟಕ ಸರಕಾರ ಈಗಾಗಲೇ ಅನೇಕ ಪೂರಕ ಕ್ರಮಗಳನ್ನು ಕೈಗೊಂಡಿದೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೇರಿದಂತೆ ಇತರ ಹಲವು ಉಪಕ್ರಮಗಳನ್ನು ಜಾರಿಗೊಳಿಸಿದೆ ಎಂದು ಅವರು ಹೇಳಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತು:

ಒಂದು ಕಾಲದಲ್ಲಿ ಪತ್ರಿಕೆ ಬಂದರೆ ಬೆಳಗಾಗುವ ಕಾಲ ಇತ್ತು. ಆದರೆ, ಇಂದು ಸಾಮಾಜಿಕ ಜಾಲತಾಣಗಳು ನಾಗಾಲೋಟದಿಂದ ವೇಗವಾಗಿ ಮುನ್ನಡೆಯುತ್ತಿವೆ. ಈ ಜಾಲತಾಣಗಳ ಪ್ರಭಾವದಿಂದ ವೈಯಕ್ತಿಕ ಮಾಧ್ಯಮಗಳು ಸೃಷ್ಟಿಯಾಗಿವೆ. ಇದರಿಂದಾಗಿ ಇಂದು ಸ್ಪರ್ಧೆ ಏರ್ಪಟ್ಟಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಪ್ರಜಾಪ್ರಭುತ್ವದ ನಾಲ್ಕನೇ ಬಹುಮುಖ್ಯ ಅಂಗವಾಗಿರುವ ಪತ್ರಿಕಾ ಮಾಧ್ಯಮವನ್ನು ಉಳಿಸಿ ಬೆಳೆಸುವಲ್ಲಿ ಮುಂದಾಗಬೇಕು. ಒಟ್ಟಾರೆ ಸಮಾಜದ ಬೆಳವಣಿಗೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ನಾವು ಸಹ ಯೋಗ್ಯ ಚಿಂತನೆಯನ್ನು ಮಾಡಬೇಕಾಗಿದೆ. ಪತ್ರಕರ್ತರಿಗೆ ರಕ್ಷಣೆ, ವೈದ್ಯಕೀಯ ನೆರವು ಸೇರಿದಂತೆ ಇತರ ಪೂರಕ ಕ್ರಮಗಳತ್ತ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ ಎಂದರು.
ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಆಶೀರ್ವಚನ:

ಸಮಾಜದ ಆರೋಗ್ಯ ಕಾಪಾಡುವಲ್ಲಿ ಪತ್ರಕರ್ತರು ಬಹು ಅಮೂಲ್ಯ ಪಾತ್ರ ವಹಿಸುತ್ತಾರೆ. ಸಮಾಜದ ಪ್ರಗತಿಗೆ ಪತ್ರಕರ್ತರು ಶ್ರೇಷ್ಠ ಕೊಡುಗೆ ನೀಡುತ್ತಿದ್ದು, ಜೀವ ಭಯ ಬಿಟ್ಟು ಸಮಾಜಕ್ಕಾಗಿ ದುಡಿಯುತ್ತಿರುವ ತಮ್ಮ ಪಾತ್ರವನ್ನು ಎಂದಿಗೂ ಮರೆಯಲಾರದು ಎಂದು ಅವರು ಹೇಳಿದರು.
ದೆಹಲಿಯ ಇಂಡಿಯನ್ ಜರ್ನಲ್ ಲಿಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಮುರುಗೇಶ ಶಿವಪೂಜಿ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸುದೇಶ ಕುಮಾರ್ ಅವರು, ಪತ್ರಕರ್ತರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಯು.ಟಿ. ಖಾದರ್ ಅವರ ಗಮನಕ್ಕೆ ತಂದು ಈ ನಿಟ್ಟಿನಲ್ಲಿ ಸರಕಾರ ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.


ಕೋಲ್ವಾ ಕಡಲತಡಿಯಲ್ಲಿ ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಸಮಾವೇಶ ; ಪುಟ್ಟ ರಾಜ್ಯದಲ್ಲಿ ಮೊಳಗಿತು ಕನ್ನಡ ಕಹಳೆ
