ವಾಷಿಂಗ್ಟನ್: ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ (FBI) ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ್ ಪಟೇಲ್ ಅವರು ನೇಮಕಗೊಂಡಿದ್ದಾರೆ.
ಪಟೇಲ್ ಮೊದಲಿನಿಂದಲೂ ಟ್ರಂಪ್ ಅವರ ಜೊತೆ ಗುರುತಿಸಿಕೊಂಡಿದ್ದಾರೆ. ಸೆನೆಟ್ನಲ್ಲಿ ನಿರ್ದೇಶಕರ ಆಯ್ಕೆ ಪ್ರಕ್ರಿಯೆಯಲ್ಲಿ ಕಾಶ್ ಪಟೇಲ್ ಅವರ ನಾಮನಿರ್ದೇಶನದ ಪರವಾಗಿ 51 ಮತಗಳು ಬಂದರೆ, ವಿರೋಧವಾಗಿ 49 ಮತಗಳು ಚಲಾವಣೆಯಾಗಿವೆ. ಎಫ್ಬಿಐನ 9 ನೇ ನಿರ್ದೇಶಕರಾಗಿ ಕಾಶ್ ಪಟೇಲ್ (Kash Patel) ಅವರನ್ನು ನೇಮಕಗೊಳಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ ಎಂದು ಅಮೆರಿಕ ಸೆನೆಟ್ ತಿಳಿಸಿದೆ.
ಕಾಶ್ ಪಟೇಲ್ ಅಮೆರಿಕದ ಪ್ರತಿಷ್ಠಿತ ಎಫ್ಬಿಐನ ಮೊದಲ ಭಾರತೀಯ ಮೂಲದ ನಿರ್ದೇಶಕ ಎಂದೆನಿಸಿಕೊಳ್ಳಲಿದ್ದಾರೆ. ಟ್ರಂಪ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರು 2017 ರಲ್ಲಿ ಹೌಸ್ ಇಂಟೆಲಿಜೆನ್ಸ್ ಕಮಿಟಿಗೆ ಭಯೋತ್ಪಾದನಾ ನಿಗ್ರಹದ ಹಿರಿಯ ವಕೀಲರಾಗಿ ನೇಮಕಗೊಂಡಿದ್ದರು. 2016 ರ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪದ ಬಗ್ಗೆ ರಿಪಬ್ಲಿಕನ್ ನೇತೃತ್ವದ ತನಿಖೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕ್ರಿಸ್ಟೋಫರ್ ವ್ರೇ ನಂತರ ಕಾಶ್ ಪಟೇಲ್ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.
ಯಾರು ಈ ಕಾಶ್ ಪಟೇಲ್?
1980ರ ಫೆಬ್ರವರಿ 25ರಂದು ನ್ಯೂಯಾರ್ಕ್ಗೆ ಪೂರ್ವ ಆಫ್ರಿಕಾದಿಂದ ವಲಸೆ ಬಂದ ಗುಜರಾತಿನ ವಡೋದರ ಮೂಲದ ದಂಪತಿಯ ಮಗನಾದ ಕಾಶ್ ಪಟೇಲ್ ಅವರ ಮೂಲ ಹೆಸರು ಕಶ್ಯಪ್ ಪಟೇಲ್. ರಿಚ್ಮಂಡ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪೂರ್ವ ಅಧ್ಯಯನವನ್ನು ಪೂರ್ಣಗೊಳಿಸಿದ ಅವರು ಯೂನಿವರ್ಸಿಟಿ ಕಾಲೇಜ್ ಲಂಡನ್ ನಲ್ಲಿ ಕಾನೂನು ಪದವಿ ಪಡೆದರು.ಆರಂಭದಲ್ಲಿ ಉನ್ನತ ಕಾನೂನು ಸಂಸ್ಥೆಗಳಲ್ಲಿಕೆಲಸ ಮಾಡಿದ ಕಾಶ್ ಪಟೇಲ್, ಸುಮಾರು ಒಂಬತ್ತು ವರ್ಷಗಳ ಕಾಲ ಮಿಯಾಮಿ ನ್ಯಾಯಾಲಯಗಳಲ್ಲಿ ವಕೀಲರಾಗಿ ಕೆಲಸ ಮಾಡಿದ್ದಾರೆ.
ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ (FBI) ಎಂಬುದು ಅಮೆರಿಕದ ಗುಪ್ತಚರ-ಚಾಲಿತ ಕೇಂದ್ರಿತ ರಾಷ್ಟ್ರೀಯ ಭದ್ರತಾ ಸಂಸ್ಥೆಯಾಗಿದ್ದು, ಗುಪ್ತಚರ ಮತ್ತು ಕಾನೂನು ಜಾರಿ ಜವಾಬ್ದಾರಿಗಳನ್ನು ಹೊಂದಿದೆ. ಇದು ಅಮೆರಿಕ ನ್ಯಾಯ ಇಲಾಖೆಯ ಪ್ರಮುಖ ತನಿಖಾ ವಿಭಾಗವಾಗಿದೆ.