ಕೊಪ್ಪಳ:ಅಯೋಧ್ಯೆಯಲ್ಲಿ ಶ್ರೀರಾಮ ನೆಲೆಸಿದ್ದರೆ, ರಾಮನ ಬಂಟ ಹನುಮಂತ ನೆಲಸಿರುವುದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ. ಸೀತೆಯನ್ನು ಹುಡಕುತ್ತಾ ಹೊರಟಿದ್ದ ರಾಮ, ಲಕ್ಷ್ಮಣರಿಗೆ, ನೆರವಾಗಿದ್ದು ಇದೇ ಕಿಷ್ಕಿಂಧೆಯ ಹನುಮಂತ ಮತ್ತು ವಾನರ ಸೇನೆ. ಇನ್ನು ಕಿಷ್ಕಿಂಧೆ ಅಂತ ಕರೆಯುವ ಅಂಜನಾದ್ರಿ ಮತ್ತು ಸುತ್ತಮುತ್ತಲಿನ ಅನೇಕ ಸ್ಥಳಗಳಲ್ಲಿ ರಾಮನ ಅನೇಕ ಹೆಜ್ಜೆ ಗುರುತುಗಳಿವೆ. ಕಿಷ್ಕಿಂಧೆಯಲ್ಲಿ ರಾಮ ಅನೇಕ ತಿಂಗಳ ಕಾಲವಿದ್ದು, ಚಾತುರ್ಮಾಸ ಆಚರಿಸಿದ, ಲಂಕಾಧಿಪತಿ ರಾವಣನ ವಿರುದ್ದ ಹೋರಾಟಕ್ಕೆ ಶಸ್ತಾಸ್ತ್ರಗಳು ಸಿದ್ಧವಾಗಿದ್ದು ಕೂಡಾ ಇದೇ ಕಿಷ್ಕಿಂಧೆ ಭಾಗದಲ್ಲಿ ಎಂಬ ಪ್ರತೀತಿ ಇದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂಬ ಅನೇದ ದಶಕಗಳ ಕನಸು ನನಸಾಗಿದ್ದು, ಕಳೆದ ವರ್ಷ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಆದರೆ ಆಡಳಿತಕ್ಕೆ ಬಂದ ಸರ್ಕಾರಗಳು, ರಾಮನಿಗೆ ನೀಡಿದ ಪ್ರಾಧಾನ್ಯತೆಯನ್ನು ರಾಮನ ಬಂಟ ಹನುಮನ ಜನ್ಮಸ್ಥಳ ಅಭಿವೃದ್ದಿಗೆ ನೀಡುತ್ತಿಲ್ಲ ಅನ್ನೋ ಆರೋಪವೂ ಕೇಳಿಬಂದಿದೆ. ಈ ಮಧ್ಯೆ ಇದೀಗ ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಸಂಪರ್ಕ ಕಲ್ಪಿಸಬೇಕು ಎಂಬ ಆಗ್ರಹ ಮತ್ತೆ ಮುನ್ನೆಲೆಗೆ ಬಂದಿದೆ. ಖುದ್ದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಯೋಧ್ಯೆಯ ರಾಮಮಂದಿರ ನೋಡಿದವರು ರಾಮನ ಬಂಟ, ಹನುಮನ ಜನ್ಮಸ್ಥಳ ಅಂಜನಾದ್ರಿ ನೋಡಲು ಬರುತ್ತಿದ್ದಾರೆ. ಅಂಜನಾದ್ರಿ ನೋಡಿದವರು ಅಯೋಧ್ಯೆಗೆ ಹೆಚ್ಚಿನ ಜನರು ಹೋಗುದ್ದಾರೆ. ಆದರೆ ನೇರವಾದ ರೈಲು ಸಂಪರ್ಕ ಇಲ್ಲದೇ ಇರುವುದರಿಂದ ಹೆಚ್ಚಿನ ಜನರಿಗೆ ಅನಾನುಕೂಲವಾಗುತ್ತಿದೆ. ಹೀಗಾಗಿ ಪ್ರತಿದಿನ ನೇರ ರೈಲು ಓಡಿಸಬೇಕು ಎಂಬುದು ರಾಮ ಮತ್ತು ಹನುಮ ಭಕ್ತರ ಆಗ್ರಹವಾಗಿದೆ.