ಬೆಳಗಾವಿ :
ಮುಚ್ಚಂಡಿ ಗ್ರಾಮದಲ್ಲಿ ಸುಮಾರು 5 ವರ್ಷಗಳಿಂದ ಪಶು ಚಿಕಿತ್ಸಾಲಯದ ಅಗತ್ಯವಿದ್ದು, ಜನರ ಬೇಡಿಕೆಯಂತೆ ಜಾನುವಾರುಗಳ ಚಿಕಿತ್ಸೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಪಶು ಚಿಕಿತ್ಸಾಲಯ ಪ್ರಾರಂಭಿಸಲಾಗಿದೆ. ಇದರ ಜೊತೆಗೆ ಸಾರ್ವಜನಿಕರು ಪಶು ಸಂಗೋಪನಾ ಇಲಾಖೆಯ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ (ಡಿ.09) ನಡೆದ ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮಕ್ಕೆ ಸ್ಥಳಾಂತರಗೊಂಡ ಹೊಸ ಪಶು ಚಿಕಿತ್ಸಾಲಯ ಉದ್ಘಾಟನೆ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರದಿಂದ ಮುಚ್ಚಂಡಿ ಗ್ರಾಮಕ್ಕೆ ಪಶು ಚಿಕಿತ್ಸಾಲಯ
ಸುತ್ತಮುತ್ತಲಿನ ಜನರಿಗೆ ಅನುಕೂಲವಾಗಲಿದೆ.
ಬೆಳಗಾವಿಯ ತಾಲೂಕಿನ ಕಲಕಾಂಬ, ಮುಚ್ಚಂಡಿ, ಅಷ್ಟೆ ಸೇರಿದಂತೆ ಮೂರು ಗ್ರಾಮಗಳಿಗೆ ಹಾಗೂ ನಗರ ಪ್ರದೇಶದ ಮೂರು ವಾರ್ಡ್ ಗಳ ಒಟ್ಟು 5200 ಜಾನುವಾರುಗಳಿಗೆ ಮಹಾಂತೇಶ ನಗರದಲ್ಲಿರುವ ಪಶು ಚಿಕಿತ್ಸಾಲಯವು ಹಾಗೂ ರೈತರಿಗೆ ಸೇವೆ ಸಲ್ಲಿಸುತ್ತಾ ಬಂದಿದೆ.
ಸುಸಜ್ಜಿತ ಸ್ಪೆಷಾಲಿಟಿ ಪಶುವೈದ್ಯಕೀಯ ಆಸ್ಪತ್ರೆ ಈಗಾಗಲೇ ಕಾರ್ಯಾರಂಭಗೊಂಡಿದ್ದು, ಒಂದೇ ಸ್ಥಳದಲ್ಲಿ ಎರಡು ಪಶು ವೈದ್ಯಕೀಯ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿದ್ದರಿಂದ ಹಾಗೂ ಸುತ್ತಮುತ್ತಲಿನ 5 ಗ್ರಾಮಗಳ ರೈತಾಪಿ ಜನರ ಬೇಡಿಕೆಯಂತೆ ನಗರದ ಪಶು ಚಿಕಿತ್ಸಾಲಯವನ್ನು ಮುಚ್ಚಂಡಿ ಗ್ರಾಮಕ್ಕೆ ಹುದ್ದೆಗಳ ಸಮೇತ ಸ್ಥಳಾಂತರ ಗೊಳಿಸಲಾಗಿರುತ್ತದೆ ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಚರ್ಮಗಂಟು ರೋಗ ಪರಿಹಾರ ಧನ ವಿತರಣೆ:
2022-23ನೇ ಸಾಲಿನಲ್ಲಿ “ಚರ್ಮಗಂಟು ರೋಗ” ದಿಂದ ಮರಣ ಹೊಂದಿದ ರಾಸುಗಳಲ್ಲಿ ಪರಿಹಾರ ಧನ ವಿತರಿಸದೇ ಬಾಕಿ ಉಳಿದ 1372 ರಾಸುಗಳಿಗೆ ಸುಮಾರು 3 ಕೋಟಿ 6 ಲಕ್ಷ ಪರಿಹಾರ ಧನವನ್ನು ವಿತರಿಸಲಾಗಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ರಾಜೀವ ಕೂಲೇರ್ ಹೇಳಿದರು.
ಮುಖ್ಯಮಂತ್ರಿಗಳ ಆಯವ್ಯಯದಲ್ಲಿ ಸೆಪ್ಟಂಬರ್ ತಿಂಗಳಿನಲ್ಲಿ ಘೋಷಣೆಯಾದಂತೆ 2022-23ನೇ ಸಾಲಿನಲ್ಲಿ ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರ ಸಂಕಷ್ಟ ನಿವಾರಣೆಗೆ “ಅನುಗ್ರಹ ಯೋಜನೆಯಡಿಯಲ್ಲಿ” ಮರಣ ಹೊಂದಿದ ಪ್ರತಿ ರಾಸುವಿಗೆ 10 ಸಾವಿರದಂತೆ 559 ರಾಸುಗಳ ಮಾಲೀಕರಿಗೆ 55 ಲಕ್ಷ 90 ಸಾವಿರ ಪರಿಹಾರ ಧನ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ವಿವರಿಸಿದರು.
ವಿವಿಧ ಯೋಜನೆಗಳಡಿ ಸಹಾಯಧನ ಬಿಡುಗಡೆ:
ಮುಖ್ಯಮಂತ್ರಿ ಅಮೃತ್ ಜೀವನ್ ಯೋಜನೆಯಡಿ ಹೈನುಗಾರಿಕೆ ಘಟಕ ಅನುಷ್ಠಾನಗೊಳಿಸಲು ಜಿಲ್ಲೆಯ 245 ಫಲಾನುಭವಿಗಳಿಗೆ ಸುಮಾರು 31 ಲಕ್ಷ 93 ಸಾವಿರ ಸಹಾಯಧನವನ್ನು ಪ್ರಸಕ್ತ ಸಾಲಿನಲ್ಲಿ ಬಿಡುಗಡೆ ಮಾಡಲಾಗಿದೆ.
ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಜಿಲ್ಲೆಯ 49 ಫಲಾನುಭವಿಗಳಿಗೆ 28 ಲಕ್ಷ 67 ಸಾವಿರ ಸಹಾಯಧನ ಹಾಗೂ ಗಿರಿಜನ ಉಪಯೋಜನೆಯಡಿ ಜಿಲ್ಲೆಯ ಸುಮಾರು 61 ಫಲಾನುಭವಿಗಳಿಗೆ 35 ಲಕ್ಷ 68 ಸಾವಿರ ಸಹಾಯಧನವನ್ನು ಪ್ರಸಕ್ತ ಸಾಲಿನಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.
ಹೈನುಗಾರಿಕೆಯಲ್ಲಿ ಆದಾಯ ಹೆಚ್ಚಿಸಲು ವೈಜ್ಞಾನಿಕ ಪದ್ಧತಿ ಅಳವಡಿಕೆ:
ಪಶು ಸಂಗೋಪನೆಯಲ್ಲಿ ವೈಜ್ಞಾನಿಕ ತಾಂತ್ರಿಕತೆಯ ಪರಿಚಯಿಸುವ ನಿಟ್ಟಿನಲ್ಲಿ ಹೈನುಗಾರಿಕೆಯನ್ನು ಹೆಚ್ಚಿನ ಲಾಭದಾಯಕವಾಗಿಸಲು ಹಾಗೂ ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಆದಾಯವನ್ನು ದ್ವಿಗುಣಗೊಳಿಸಲು ವಿದ್ಯುತ್ ಚಾಲಿತ ಮೇವು ಕತ್ತರಿಸುವ ಯಂತ್ರ, ಜಾನುವಾರುಗಳಿಗೆ ಗೊಬ್ಬರ ನೆಲಹಾಸು, ರಸ ಮೇವು ಬ್ಯಾಗ್, ಡಿಜಿಟಲ್ ಕೃತಕ ಗರ್ಭಧಾರಣೆ ಯಂತ್ರ, ಜಾನುವಾರುಗಳ ತೂಕ ಅಳತೆ ಮಾಡುವ ಪಟ್ಟಿ ಸೇರಿದಂತೆ ವಿವಿಧ ವೈಜ್ಞಾನಿಕ ತಾಂತ್ರಿಕತೆಯನ್ನು ಪಶು ಸಂಗೋಪನಾ ಇಲಾಖೆ ಪರಿಚಯಿಸಿದೆ ಎಂದು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ರಾಜೀವ ಕೂಲೇರ್ ಅವರು ವಿವರಿಸಿದರು.
ಅನುಗ್ರಹ ಯೋಜನೆಯಡಿ ಫಲಾನುಭವಿಗಳಿಗೆ ಚೆಕ್ ವಿತರಣೆ:
ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ವಿವಿಧ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಚೆಕ್ ವಿತರಣೆ ಮಾಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮಣ ಕೆಂಚಪ್ಪ ಬುಡ್ರಿ , ಸದಸ್ಯ ಸಂದೀಪ ಜಕಾನೆ, ಮನೋಹರ ಹುಕ್ಕೆರಿಕರ, ಪಶು ಸಂಗೋಪನಾ ಇಲಾಖೆಯ ಬೆಳಗಾವಿ ತಾಲೂಕು ಸಹಾಯಕ ನಿರ್ದೇಶಕ ಡಾ. ಆನಂದ ಪಾಟೀಲ, ಪಶು ವೈದ್ಯರಾದ ಡಾ. ರೆಹಮದುಲ್ಲ, ಡಾ. ಹನ್ನುರಕರ, ಡಾ. ವಿಠ್ಠಲ ಸಂಗನಟ್ಟಿ, ಡಾ. ಪ್ರಕಾಶಮಣಿ, ಡಾ. ಪ್ರಶಾಂತ ಕಾಂಬಳೆ, ಡಾ. ಗ್ಯಾಂಗ್ರೆಡ್ಡಿ, ಡಾ. ಪಟ್ಟಣ, ಅಸೋದೆ, ಮಾಳಗಿ, ಸಂಗೀತ, ಯಲ್ಲಪ್ಪ, ಸುರೇಶ, ರಾಘವೇಂದ್ರ, ತೌಶಿಫ್ ಉಪಸ್ಥಿತರಿದ್ದರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.