ಬೆಳಗಾವಿ:
ಬೆಳಗಾವಿ ಗ್ರಾಮೀಣ ಕ್ಷೇತ್ರದ ತುಮ್ಮರಗುದ್ದಿ ಗ್ರಾಮದ ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಅನುದಾನ ಮಂಜೂರು ಮಾಡಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಇಂದು (ಡಿ.17) ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಭೂಮಿ ಪೂಜೆ ಕೈಗೊಂಡು ಚಾಲನೆ ನೀಡಿದರು.
ಇದೇ ಸಮಯದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನೂತನ ಜಿಮ್ ಉದ್ಘಾಟಿಸಿದರು. ಸದೃಢ ಯುವಜನ ಮಾತ್ರ ಸದೃಢ ದೇಶ ನಿರ್ಮಿಸಬಲ್ಲರು. ಹೀಗಾಗಿ ಯುವ ಜನತೆ ಈ ಸೌಲಭ್ಯದ ಪ್ರಯೋಜನ ಪಡೆದು ಸದೃಢರಾಗಲು ಪ್ರಯತ್ನಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಅರಿಷಿಣ- ಕುಂಕುಮ:
ಇದೇ ವೇಳೆ ತುಮ್ಮರಗುದ್ದಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅರಿಷಿಣ ಕುಂಕುಮ ಕಾರ್ಯಕ್ರಮಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿ ತಾವು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿಯ ಕೆಲಸಗಳನ್ನು ‘ಅರಿಷಿಣ ಕುಂಕುಮ’ ಕಾರ್ಯಕ್ರಮಗಳ ಮೂಲಕ ಮೆಲುಕು ಹಾಕಲಾಗುತ್ತಿದ್ದು, ಜತೆಗೆ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಕ್ಷೇತ್ರದ ಜನತೆಯ ಪ್ರೀತಿ, ಪ್ರೋತ್ಸಾಹ, ಆಶೀರ್ವಾದಗಳ ಮೂಲಕ ಶಾಸಕಿಯಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಶಿಸ್ತಿನ ಸಿಪಾಯಿಯಂತೆ ಮುನ್ನೆಡೆಸುತ್ತಿದ್ದು ನೆರೆಹಾವಳಿ ಹಾಗೂ ಮಹಾಮಾರಿ ಕೊರೊನಾದಂಥ ಜಟಿಲ ಸಂದರ್ಭಗಳಲ್ಲಿ ಎಲ್ಲರ ಕಷ್ಟಗಳಿಗೆ ತ್ವರಿತವಾಗಿ ಸ್ಪಂದಿಸಲಾಗಿದೆ ಎಂದು ಅವರು ಸ್ಮರಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿದರು. ಗ್ರಾಮದ ಹಿರಿಯರು, ಪರಶುರಾಮ ಪೂಜೇರಿ, ಪ್ರಕಾಶ ಶಿನಗಿ, ಸತ್ಯವ್ವ ಶಿನಗಿ, ಕಮಲಮ್ಮ ಮಹಾರ, ಸುರೇಶ ನಾಯಿಕ್, ಶೇಖರ್ ಹೊಸೂರಿ, ಬಸನಗೌಡ ಪಾಟೀಲ, ಬಾಳಪ್ಪ ಶಿನಗಿ, ಸತ್ಯಪ್ಪ ನಂದ್ಯಾಗೋಳ, ಲಕ್ಷ್ಮಣ ಕೆಂಪದಿನ್ನಿ, ಶಿವಾಜಿ ತಳವಾರ, ಶಿವಶಂಕರ ಪಾಟೀಲ, ಶೇಖರ ಶಿನಗಿ, ಮಂಜುನಾಥ್ ತೋಟಗಿ, ಗ್ರಾಮದ ಮಹಿಳೆಯರು, ಆಪ್ತ ಸಹಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.