ಬೆಳಗಾವಿ :
107 ವರ್ಷಗಳ ಹಿರಿಮೆ ಗರಿಮೆಗಳನ್ನು ಹೊಂದಿರುವ ಕೆಎಲ್ಇ ಸಂಸ್ಥೆಯು ಮತ್ತೊಂದು ಮೈಲುಗಲ್ಲಕ್ಕೆ ಸಾಕ್ಷಿಯಾಗುತ್ತಿದೆ. ಗುರುವಾರ 29 ಡಿಸೆಂಬರ್ ಸಂಜೆ 5 ಗಂಟೆಗೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಯಡ್ರಾಂವದಲ್ಲಿ ಕೆಎಲ್ಇ ಸಂಸ್ಥೆಯ ಕನ್ನಡ ಮಾಧ್ಯಮ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಸಮಾರಂಭ ಜರುಗಲಿದೆ.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ ನೇತೃತ್ವದಲ್ಲಿ ಜರುಗಲಿರುವ ಸಮಾರಂಭಕ್ಕೆ ಕರ್ನಾಟಕ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಆಗಮಿಸಲಿದ್ದಾರೆ. ರಾಯಬಾಗ ಶಾಸಕ ಡಿ.ಎಂ.ಐಹೊಳೆ ಅವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎಲ್.ಇ. ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೆ.ಎಲ್.ಇ. ಸಂಸ್ಥೆಯ ಕನ್ನಡ ಮಾಧ್ಯಮ ಶಾಲೆ, ಯಡ್ರಾಂವ:
ಬೆಳಗಾವಿ ಜಿಲ್ಲೆಯ ಗಡಿಭಾಗ ರಾಯಬಾಗ ತಾಲೂಕಿನ ಪುಟ್ಟ ಗ್ರಾಮ ಯಡ್ರಾಂವ. ಈ ಗ್ರಾಮದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸುತ್ತಮುತ್ತಲಿನ ಸಾವಿರಾರು ರೈತರ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಗುಣಾತ್ಮಕ ಶಿಕ್ಷಣ ಕೊಡುವ ಉದ್ದೇಶದಿಂದ ಸ್ಥಾಪಿತವಾದ ‘ಕೆ.ಎಲ್.ಇ ಸಂಸ್ಥೆಯ ಕನ್ನಡ ಮಾಧ್ಯಮ ಶಾಲೆ’ಯು 2013-14 ರಲ್ಲಿ ಪ್ರಾರಂಭಗೊಂಡಿತು. ಸದ್ಯ ಶಿಶುವಿಹಾರದಿಂದ 10 ನೇ ತರಗತಿವರೆಗೆ 880 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಕೆಎಲ್ಇ ಸಂಸ್ಥೆಯು ಗ್ರಾಮೀಣಭಾಗದ ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ಯಾವ ನಗರ ಪ್ರದೇಶಗಳ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಗಡಿಭಾಗದಲ್ಲಿ ಅತ್ಯುನ್ನತವಾದ ಅಂತರಾಷ್ಟ್ರೀಯ ಸ್ಥಾನಮಾನದ ಕನ್ನಡ ಶಾಲೆಯನ್ನು ರೂಪಿಸಿ ತನ್ನ ಕನ್ನಡ ಕೈಂಕರ್ಯ ಕಾಳಜಿಯನ್ನು ಮೆರೆದಿದೆ. ಕೆಎಲ್ಇ ಸಂಸ್ಥೆಯ ಬಹುಸಂಖ್ಯಾತ ಶಾಲೆ ಕಾಲೇಜುಗಳು ಗಡಿಭಾಗದಲ್ಲಿಯೇ ಇದ್ದದ್ದು ವಿಶೇಷ. ಅಂತೆಯೇ ಸದ್ಯ ಯಡ್ರಾಂವದಲ್ಲಿಯೂ ಗಡಿಭಾಗದ ಕನ್ನಡ ಮಕ್ಕಳು ಪ್ರಾಥಮಿಕ ಹಂತದಲ್ಲಿಯೇ ಗುಣಾತ್ಮಕವಾದ ಶಿಕ್ಷಣವನ್ನು ಪಡೆಯ ಬೇಕೆಂಬ ಮಹದಾಸೆ ಹಾಗೂ ಇಲ್ಲಿಯ ಮಕ್ಕಳು ಭವಿಷ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಭಾಷ್ಯ ಬರೆಯಲೆಂಬ ಧ್ಯೇಯದೊಂದಿಗೆ ಕೆಎಲ್ಇ ಸಂಸ್ಥೆಯು ಕನ್ನಡ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದೆ. ಅಂತೆಯೆ ತನ್ನ ಕನ್ನಡ ಪ್ರೀತಿ, ಸೇವೆಯನ್ನು ತನುಮನಧನದಿಂದ ಅರ್ಪಿಸಿ ಮಾದರಿ ಸಂಸ್ಥೆಯೆಂಬ ಅಭಿದಾನಕ್ಕೆ ಪಾತ್ರವಾಗಿದೆ.
ನೂತನ ಕಟ್ಟಡದ ವೈಶಿಷ್ಟ್ಯಗಳು: ಪ್ರಸ್ತುತ ನೂತನ ಶಾಲೆಯು 2 ಎಕರೆ 9 ಗುಂಟೆ ವಿಸ್ತೀರ್ಣದ ಭೂಮಿಯಲ್ಲಿ 23242 ಚದರ ಅಡಿಯಲ್ಲಿ ವ್ಯಾಪಿಸಿಕೊಂಡಿದೆ. ಸುಮಾರು 3.5 ಕೋಟಿ ರೂಪಾಯಿ ವೆಚ್ಚ ತಗುಲಿದೆ. ಶಾಲೆಯಲ್ಲಿ ಸುಸಜ್ಜಿತವಾದ ವರ್ಗಕೋಣೆಗಳು, ಸ್ವತಂತ್ರವಾದ ಗಣಕಯಂತ್ರ ಪ್ರಯೋಗಾಲಯಗಳು, ಅತ್ಯಾಧುನಿಕ ಗ್ರಂಥಾಲಯ, ಆಟದ ಮೈದಾನ, ಶಿಕ್ಷಕರ ಕೊಠಡಿ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಕ್ಕಳಿಗೆ ಸದಾ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಿ ಕೊಡಲಾಗಿದೆ. ಶಾಲಾ ಆವರಣದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ನಾನಾ ವಿಧದ ಮರಗಳಿಂದ ಶೋಭಾಯಮಾನವಾಗಿ ಕಂಗೊಳಿಸುತ್ತಿದೆ. ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿಯವರ ಇಚ್ಛಾಶಕ್ತಿಯಿಂದ ನಿರ್ಮಾಣಗೊಂಡಿರುವ ಪ್ರಸ್ತುತ ಶಾಲೆಯು ಸುಸಜ್ಜಿತ ಭವ್ಯ ಕಟ್ಟಡದ ಮೂಲಕ ಗಡಿಭಾಗದ ಸಾವಿರಾರು ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿದೆ.