ಬೆಳಗಾವಿ : ಅಗಸಗಿ ಗ್ರಾಮದ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶಾಲಾ ಸಂಸತ್ತು, ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಜರುಗಿತು.
ಡಾ. ಅಲ್ಲಮ ಪ್ರಭು ಸ್ವಾಮೀಜಿ ಉದ್ಘಾಟಿಸಿದರು.ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಡೀನ್ ಡಾ. ಎಂ. ಸಿ. ಯರ್ರಿಸ್ವಾಮಿ ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿ, ಆಡಳಿತ ಮಂಡಳಿಯ ಯೋಜನೆಗಳನ್ನು ಕೊಂಡಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ಸತತವಾಗಿ ತಮ್ಮ ಬಲದಿಂದಲೇ ಕಷ್ಟಪಟ್ಟು ಓದಿ, ಉತ್ತಮ ಮಾರ್ಗವನ್ನು ಕಂಡುಕೊಳ್ಳಬೇಕು. ತಾವೆಲ್ಲರೂ ಇಂತಹ ಮಠದ ಸಂಸ್ಥೆಯಲ್ಲಿ ಕಲಿಯುತ್ತಿರುವುದು ತಮ್ಮ ಪುಣ್ಯ ಎಂದರು. ತಮ್ಮನ್ನು ಪೋಷಿಸಿದ ಪಾಲಕರಿಗೆ ಕಲಿತಿರುವ ಸಂಸ್ಥೆಗೆ ಕೀರ್ತಿ ತರಬೇಕೆಂದು ಉದಾಹರಣೆಯ ಮೂಲಕ ವಿವರಿಸಿದರು.
ಸಿದ್ದರಾಮೇಶ್ವರ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಕೆ.ಬಿ.ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳು ಕಲಿತು ಸಂಸ್ಕಾರಯುತ ಮಕ್ಕಳಾಗಿ ಸಮಾಜಕ್ಕೆ ನಿಮ್ಮದೇ ಆದ ಕೊಡುಗೆಯನ್ನು ನೀಡಬೇಕು. ನಮ್ಮಲ್ಲಿರುವ ಎಲ್ಲ ಸಂಪನ್ಮೂಲಗಳನ್ನು ಸರಿಯಾಗಿ ವಿನಯೋಗಿಸಿಕೊಳ್ಳಿ ಎಂದು ಹೇಳಿದರು.
ಶಾಲಾ ಸಂಸತ್ತಿನ ಸಭಾಪತಿ ಅಕ್ಷತಾ ಪಾಟೀಲ ಶಾಲಾ ಸಂಸತ್ತಿನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ನಂತರ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗ್ರಂಥ ಲೇಖನಿಯನ್ನು ನೀಡುವುದರ ಮೂಲಕ ಅವರನ್ನು ಸ್ವಾಗತಿಸಲಾಯಿತು. ಸಾಂಸ್ಕೃತಿಕ ಚಟುವಟಿಕೆ ಆಯೋಜಿಸಲ್ಪಟ್ಟಿತ್ತು.
ಸ್ಥಾನಿಕ ಸಂಸ್ಥೆ ಅಧ್ಯಕ್ಷರಾದ ಅಮೃತ ಮುದ್ದಣ್ಣವರ, ನಿರ್ದೇಶಕರಾದ ಅಪ್ಪಯ್ಯಗೌಡ ಪಾಟೀಲ, ಸುಭಾಷ್ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಿಮ್ರನ್ ಕೋಲಕಾರ ವಚನ ಪ್ರಾರ್ಥನೆಗೈದರು. ಪಿಯುಸಿ ವಿದ್ಯಾರ್ಥಿನಿಯರಾದ ಪವಿತ್ರಾ ನಾವಿ ಹಾಗೂ ಸಂಗಡಿಗರು ಸ್ವಾಗತ ಗೀತೆಯನ್ನು ಹಾಡಿದರು. ಅರ್.ಎ. ಪರ್ವತೆ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ನಾಗನಗೌಡ ಪಾಟೀಲ ಸ್ವಾಗತಿಸಿ ಅತಿಥಿಗಳ ಪರಿಚಯ ಮಾಡಿಕೊಟ್ಟರು.