ಬೆಳಗಾವಿ : ಮಾಧ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನ ಬೆಳೆದ ಕ್ರಾಂತಿಯ ಯುಗದಲ್ಲಿಯೂ ಮುದ್ರಣ ಮಾಧ್ಯಮ ತನ್ನ ಮೌಲ್ಯವನ್ನು ಕಳೆದುಕೊಳ್ಳದೆ ಸತ್ಯ ಮತ್ತು ವಸ್ತುನಿಷ್ಠ ವರದಿಗಳ ಮೂಲಕ ಓದುಗರ ನಂಬಿಕೆ ಉಳಿಸಿಕೊಂಡಿವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿಯ ಎಸ್.ಎಸ್.ಎಂ.ಎಸ್ ಮಹಾವಿದ್ಯಾಲಯದ ಖೋತ ಸಭಾಂಗಣದಲ್ಲಿ ಅಥಣಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ಸಾಧಕರ ಸನ್ಮಾನ ಹಾಗೂ ಮುಕ್ತ ರಸಪ್ರಶ್ನೆ ಸ್ಪರ್ಧೆಯ ವಿಜೇತರ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೃಶ್ಯ ಮಾಧ್ಯಮಗಳ ವೈಭವೀಕರಣದ ಸುದ್ದಿ ಪ್ರಚಾರ, ಸೋಶಿಯಲ್ ಮೀಡಿಯಾ ಮತ್ತು ಯೂಟ್ಯೂಬ್ ಹಾವಳಿಯ ಮಧ್ಯೆ ನಾಡಿನ ಬಹಳಷ್ಟು ಪತ್ರಿಕೆಗಳು ತಮ್ಮ ಪತ್ರಿಕಾ ಧರ್ಮವನ್ನು ಪಾಲಿಸುವುದರ ಜೊತೆಗೆ ಓದುಗರಿಗೆ ಸತ್ಯ, ವಸ್ತುನಿಷ್ಠ ವರದಿ ಮತ್ತು ಲೇಖನಗಳನ್ನು ನೀಡುವ ಮೂಲಕ ನಂಬಿಕೆ ವಿಶ್ವಾಸ ಉಳಿಸಿಕೊಂಡಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪತ್ರಕರ್ತರು ಸಮಾಜದ ಪ್ರತಿಬಿಂಬ, ಸರ್ಕಾರ ಮತ್ತು ಸಾರ್ವಜನಿಕರ ಮಧ್ಯದ ಸೇತುವೆ ಇದ್ದಂತೆ. ಯಾವುದೇ ಪಕ್ಷಪಾತವಿಲ್ಲದೆ ನಿರ್ಭೀತಿಯಿಂದ ಸತ್ಯವನ್ನ ಬರೆಯಬೇಕು. ಪತ್ರಕರ್ತರು ಸಾಮಾಜಿಕ ಕಳಕಳಿ, ಪ್ರಚಲಿತ ಮಾಹಿತಿ, ಕಾನೂನಿನ ಅರಿವು, ಸತ್ಯ, ನಿಷ್ಠೆ ಮತ್ತು ನೈತಿಕತೆ ಗುಣಗಳನ್ನು ಅಳವಡಿಸಿಕೊಂಡಿರಬೇಕು ಎಂದರು.
ಜಮಖಂಡಿಯ ಪ್ರಾಧ್ಯಾಪಕ ಯಶವಂತ ವೈ. ಕೊಕ್ಕನವರ ಅವರು ಪತ್ರಿಕೋದ್ಯಮದ ವರ್ತಮಾನದ ಸಮಸ್ಯೆ ಹಾಗೂ ಸವಾಲುಗಳ ಕುರಿತು ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕರಾದ ಮಹೇಶ ಕುಮಠಳ್ಳಿ, ಶಹಜಹಾನ ಡೊಂಗರಗಾಂವ ಮಾತನಾಡಿ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗ ಒಂದು ವಾಹನದ ನಾಲ್ಕು ಚಕ್ರಗಳಿದ್ದಂತೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುಭದ್ರ ಆಡಳಿತ ನಡೆಯಬೇಕಾದರೆ ಈ ನಾಲ್ಕು ಅಂಗಗಳು ತಮ್ಮ ಕಾರ್ಯವನ್ನು ನಿಷ್ಠೆಯಿಂದ ಮಾಡುವುದು ಅಗತ್ಯವಾಗಿದೆ ಎಂದರು.