ಬೆಳಗಾವಿ : 1924 ರಲ್ಲಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಜರುಗಿದ್ದ 39 ನೇ ಕಾಂಗ್ರೆಸ್
ಅಧಿವೇಶನದಲ್ಲಿ ಕನ್ನಡವೇ ರಾರಾಜಿಸಿತ್ತು.ಅಧಿವೇಶನ ನಡೆದ ಪ್ರದೇಶ ವಿಜಯನಗರ, ಕುಡಿಯುವ ನೀರಿಗಾಗಿ ಅಗೆದಿದ್ದ ಬಾವಿಗೆ ಪಂಪಾ ಸರೋವರ, ಪ್ರವೇಶ ದ್ವಾರಕ್ಕೆ ವಿರೂಪಾಕ್ಷ ದ್ವಾರ, ಸ್ವಾಗತಗೀತೆಯಾಗಿ ” ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು”.ಇಷ್ಟೇ ಅಲ್ಲದೇ ಅಧಿವೇಶನ ಫಲಕಗಳಲ್ಲೂ ಕನ್ನಡಕ್ಕೇ ಮೊದಲ ಸ್ಥಾನ ಸಿಕ್ಕಿತ್ತು!
ಈಗ ಬೆಳಗಾವಿಯಲ್ಲಿ ನಡೆದ
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ
ಸಂದರ್ಭದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಇಂಗ್ಲೀಷ್ ಮತ್ತು ಹಿಂದಿಗೆ ಮಾತ್ರ ಸ್ಥಾನ ಲಭಿಸಿದೆ. ಕನ್ನಡವನ್ನು ಸಂಪೂರ್ಣವಾಗಿ
ನಿರ್ಲಕ್ಷಿಸಲಾಗಿದೆ.
1924 ರಲ್ಲಿ ಇನ್ನೂ ಕರ್ನಾಟಕವೇ
ಅಸ್ತಿತ್ವಕ್ಕೆ ಬಂದಿರಲಿಲ್ಲ. ಗಾಂಧೀಜಿ ಅಧ್ಯಕ್ಷತೆಯ ಅಧಿವೇಶನದಲ್ಲಿಯೇ ಏಕೀಕರಣದ ಬೀಜಾಂಕುರವಾಯಿತು.
ಆಗ ನಡೆದ ಅಧಿವೇಶನದ ಎರಡೂ ದಿನಗಳಂದು ಹುಯಿಲಗೋಳ
ನಾರಾಯಣರಾಯರ ವಿರಚಿತ
“ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಹಾಡನ್ನು ಧಾರವಾಡದ
ಗಾಯಕರ ತಂಡವೊಂದು ಹಾಡಿತ್ತು.ಆ ತಂಡದಲ್ಲಿ ಗಂಗೂಬಾಯಿ ಹಾನಗಲ್ಲ
ಅವರೂ ಇದ್ದರು.
ಪ್ರಸಕ್ತ ಅಧಿವೇಶನದಲ್ಲಿ ಅದೇ
ಹಾಡನ್ನು ಹಾಡಿಸಲು ಮುಖ್ಯಮಂತ್ರಿಗಳ
ಅಧ್ಯಕ್ಷತೆಯ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.ಆದರೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಡಿಸೆಂಬರ್ 27 ರ ಕಾರ್ಯಕ್ರಮಗಳು ರದ್ದಾದವು.
ಡಿಸೆಂಬರ್ 26 ರ ಕಾರ್ಯಕ್ರಮದಲ್ಲಿ
ಕನ್ನಡವನ್ನು ನಿರ್ಲಕ್ಷಿಸಿದ್ದು ಬೆಳಗಾವಿ ಕನ್ನಡಿಗರಲ್ಲಿ ಮತ್ತು ಕನ್ನಡ ಸಂಘಟನೆಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.