ಬೆಂಗಳೂರು: ಮುಂದಿನ ಐದಾರು ದಿನಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದ ಮೇಲಿನ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದಲ್ಲಿ ಮುಂದಿನ ಎರಡ್ಮೂರು ದಿನಗಳು ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕರ್ನಾಟಕದ ಕರಾವಳಿ ಹಾಗೂ ಒಳನಾಡು ಭಾಗಗಳಲ್ಲಿ ಮಳೆ ಹೆಚ್ಚಾಗಲಿದ್ದು, ಒಟ್ಟು 7 ಜಿಲ್ಲೆಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿಶೇಷವಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಮುಂದಿನ 7 ದಿನಗಳ #ಮಳೆ #ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD)
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಸಾಧ್ಯತೆಯಿದ್ದು, ಅಲ್ಲಲ್ಲಿ ಭಾರಿ ಇಂದ ಅತಿ ಭಾರಿ ಮಳೆ ನಿರೀಕ್ಷಿಸಲಾಗಿದೆ. ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ pic.twitter.com/Cl9sTDd1FK
— Karnataka State Natural Disaster Monitoring Centre (@KarnatakaSNDMC) July 16, 2025
ಮುಂದಿನ ಐದಾರು ದಿನಗಳ ಕಾಲ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮಳೆಯೊಂದಿಗೆ ಬಲವಾದ ಗಾಳಿಯೂ ಇರಲಿದ್ದು, ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಜುಲೈ 19ರ ನಡುವೆ ಗಾಳಿಯ ವೇಗ ಗಂಟೆಗೆ 40-50 ಕಿ.ಮೀ.ವೇಗದಲ್ಲಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಿದೆ.
ಜುಲೈ 21 ರವರೆಗೆ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಜುಲೈ 20 ಮತ್ತು 21 ರಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಬೆಂಗಳೂರು (ಗ್ರಾಮೀಣ ಮತ್ತು ನಗರ), ಮೈಸೂರು ಮತ್ತು ಮಂಡ್ಯ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ.
ಭಾರಿ ಮಳೆ ಮುನ್ಸೂಚನೆ ; ಮೂರು ಜಿಲ್ಲೆಗಳ ಶಾಲೆಗಳಿಗೆ ಇಂದು ರಜೆ ಘೋಷಣೆ
ಮಂಗಳೂರು/ಉಡುಪಿ/ಮಡಿಕೇರಿ: ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಶಾಲೆಗಳಿಗೆ ಜುಲೈ 17ರಂದು ರಜೆ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜುಲೈ 17ರಂದು ದ.ಕ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಹಾಗು ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನಾಳೆ (ಜು.17 ರಂದು) ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಜಿಲ್ಲಾಧಿಕಾರಿ ಸ್ಪರೂಪ ಟಿ.ಕೆ ರಜೆ ಘೋಷಿಸಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಹೀಗಾಗಿ ಹವಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜು.17ರಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿರುತ್ತದೆ. ಉಳಿದಂತೆ ಎಲ್ಲಾ ಪದವಿ ಪೂರ್ವ, ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್, ಐಟಿಐ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿರುವುದಿಲ್ಲ.
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಜುಲೈ 17 ರಂದು ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ನೀಡಲು ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ.