ಅಥಣಿ:
ತಾಲೂಕಿನ ಜನವಾಡ ಗ್ರಾಮದಲ್ಲಿ ಈಗ ಲಕ್ಷ್ಮಣ ಸವದಿ ಸಾಹುಕಾರರದ್ದೇ ಗುಣಗಾನ.. ದೀಪಾವಳಿ ಸಂದರ್ಭದಲ್ಲಿ ಗ್ರಾಮದ ಗ್ರಾಮದೇವತೆ ಶ್ರೀ ರೇಣುಕಾದೇವಿ ಜಾತ್ರಾ ಮಹೋತ್ಸವ ಹಾಗೂ ಜಾತ್ರೆ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮಗಳು, ದೇಶಿ ಜಾನಪದ ಕಲೆ, ರಾಜ್ಯಮಟ್ಟದ ಕಬಡ್ಡಿ ಸೇರಿದಂತೆ ವಿವಿಧ ಕ್ರೀಡೆಗಳು ಸಂಭ್ರಮದೊಂದಿಗೆ ಯಶಸ್ವಿಯಾಗಿ ಜರುಗಿದವು. ಜನವಾಡ ಗ್ರಾಮದ ಕಬಡ್ಡಿ ವೈಭವಕ್ಕೆ ಶತಮಾನದ ಇತಿಹಾಸವಿದೆ. ಕಳೆದ ನೂರು ವರ್ಷದಿಂದಲೂ ಕಬಡ್ಡಿಯನ್ನು ಪ್ರತಿ ವರ್ಷ ತಪ್ಪದೇ ಆಯೋಜಿಸುತ್ತ ಬರಲಾಗಿದೆ. ಇದರೊಂದಿಗೆ ಸಂಗ್ರಾಮ ಕಲ್ಲು ಎತ್ತುವುದು, ದೇಶಿ ಜಾನಪದ ಕಲೆಗಳಾದ ಗೀಗಿ ಪದ, ಚೌಡಕಿ ಪದ, ಭಜನೆ, ಬಯಲಾಟ ಸೇರಿದಂತೆ ಇತರ ನಮ್ಮ ಪರಂಪರೆಯ ಕಲೆ, ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರಲಾಗಿದೆ. ಈ ಮೂಲಕ ನಮ್ಮ ನಾಡಿನ ಸೊಗಡಿನ ಸಂಸ್ಕೃತಿ, ಪರಂಪರೆಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಧಾರ್ಮಿಕ, ಸಮಾಜಮುಖಿ ಕಾರ್ಯಕ್ರಮಗಳಿಗೆ ಗ್ರಾಮಸ್ಥರು ತಮ್ಮ ಕೈಲಾದಷ್ಟು ತನು, ಮನ, ಧನದ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಈ ಬಾರಿಯೂ (2022) ದೀಪಾವಳಿ ಜಾತ್ರೆ ಸಂದರ್ಭದಲ್ಲಿ ಗ್ರಾಮದಲ್ಲಿನ ಶ್ರೀ ರೇಣುಕಾದೇವಿ ಹಾಗೂ ಶ್ರೀ ಆಂಜನೇಯನ ದೇವಸ್ಥಾನಕ್ಕೆ ಸಂಪೂರ್ಣ ಬಣ್ಣ ಮಾಡಿ, ಅವುಗಳನ್ನು ಅಲಂಕಾರಗೊಳಿಸಲು ಒಂದಿಷ್ಟು ನೆರವಿನ ಅಗತ್ಯವಿದೆ ಎಂಬ ಕೋರಿಕೆ ಮುಂದಿಟ್ಟಾಗ, ಅಥಣಿ ಕ್ಷೇತ್ರದ ಜನಮನದ ಜನಪ್ರಿಯ ನಾಯಕರು, ದಾನ, ಧರ್ಮ, ಪರೋಪಕಾರದಿಂದಲೇ ಹೆಸರಾಗಿರುವ, ರಾಷ್ಟ್ರಮಟ್ಟದಲ್ಲೂ ಬಿಜೆಪಿ ಪ್ರಭಾವಿ ನಾಯಕರಾಗಿ ಬೆಳೆದಿರುವ ಮಾಜಿ ಡಿಸಿಎಂ, ವಿ.ಪ. ಸದಸ್ಯ ಲಕ್ಷ್ಮಣ ಸವದಿಯವರು ಎರಡೂ ದೇವಸ್ಥಾನಗಳಿಗಾಗುವಷ್ಟು ಸಂಪೂರ್ಣ ಬಣ್ಣದ ವೆಚ್ಚವನ್ನು ವೈಯಕ್ತಿಕವಾಗಿ ನೀಡುವ ಮೂಲಕ ಗ್ರಾಮಸ್ಥರ ಮನೆ ಮಾತಾಗಿದ್ದಾರೆ. ಅವರ ಹೃದಯ ವೈಶಾಲ್ಯತೆಯನ್ನು ಗ್ರಾಮಸ್ಥರು ಗುಣಗಾನ ಮಾಡುವುದರೊಂದಿಗೆ ಜಾತ್ರಾ ಮಹೋತ್ಸವಕ್ಕೆ ಆಹ್ವಾನಿಸಿ ಲಕ್ಷ್ಮಣ ಸವದಿಯವರನ್ನು ಹಾಗೂ ಸಮಾಜ ಸೇವಕ, ಬಿಜೆಪಿ ಯುವ ನಾಯಕ ಚಿದಾನಂದ ಸವದಿಯವರನ್ನು ತುಂಬು ಅಭಿಮಾನದಿಂದ ಸನ್ಮಾನಿಸಿ ಗೌರವಿಸಿದ್ದಾರೆ. ಅವರ ಅಭಿಮಾನಿ ಬಳಗದವರು ತಮ್ಮ ನೆಚ್ಚಿನ ಈ ನಾಯಕರನ್ನು ಸ್ವಾಗತಿಸುವ ಬೃಹತ್ ಬ್ಯಾನರ್ ಹಾಗೂ ಕಟೌಟ್ಗಳನ್ನು ಜಾತ್ರಾ ಮಹೋತ್ಸವದಲ್ಲಿ ಹಾಕುವ ಮೂಲಕ ತಮ್ಮ ಅಭಿಮಾನ ಪ್ರದರ್ಶಿಸಿದ್ದರು. ಗ್ರಾಮಸ್ಥರು ತಮ್ಮ ಮೇಲಿಟ್ಟಿರುವ ವಿಶ್ವಾಸ, ಪ್ರೀತಿ, ಅಭಿಮಾನಕ್ಕೆ ಧನ್ಯವಾದಗಳನ್ನು ತಿಳಿಸುವುದರೊಂದಿಗೆ, ಈ ಗ್ರಾಮದ ಬಗ್ಗೆ ಹೆಮ್ಮೆ ಎನಿಸುತ್ತದೆ. ಗ್ರಾಮಸ್ಥರ ಎಲ್ಲ ಕಾರ್ಯಗಳಿಗೆ ನಮ್ಮ ಸಹಕಾರ ಯಾವತ್ತೂ ಇದ್ದೇ ಇದೆ. ಕೃಷ್ಣಾ ತೀರದ ಗ್ರಾಮಸ್ಥರ ಯಾವುದೇ ಸಮಸ್ಯೆಗಳಿಗೆ, ಜನರ ಸೇವೆಗೆ ನಾವು ಯಾವತ್ತೂ ಸ್ಪಂದಿಸುವುದಾಗಿ ಗ್ರಾಮದ ಬಗ್ಗೆ ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು. ಜಾತ್ರಾಮಹೋತ್ಸವಕ್ಕೆ ಸಹಕಾರ ನೀಡಿ, ಗ್ರಾಮಸ್ಥರ ಕುರಿತು ಒಂದೆರಡು ಮೆಚ್ಚುಗೆ ಮಾತುಗಳನ್ನು ತಮ್ಮ ನೆಚ್ಚಿನ ನಾಯಕರು ಆಡಿದ್ದರಿಂದ ಇಂತಹ ಕಾರ್ಯಕ್ರಮಗಳನ್ನು ಮತ್ತಷ್ಟು ಸಂಘಟಿಸಲು ಪ್ರೋತ್ಸಾಹಿಸಿದಂತಾಗಿದೆ. ಆದ್ದರಿಂದ ಅವರಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನು ಸಲ್ಲಿಸುವುದಾಗಿ ಗ್ರಾಮಸ್ಥರು ಹಾಗೂ ಗ್ರಾಮದ ಹಿರಿಯರು ತಿಳಿಸಿದ್ದಾರೆ.