ಬೆಳಗಾವಿ :
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಯ ಎಸಗಿರುವ ಸೈಟ್ ಹಂಚಿಕೆ ಹಗರಣ ಕೆಲವರಿಗೆ ಬಿಸಿ ಮುಟ್ಟಿಸುವ ಸಾಧ್ಯತೆ ಇದೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಹೋಗಿದೆ. ಈ ಹಗರಣದ ಸಂಪೂರ್ಣ ತನಿಖೆ ಮಾಡಿ ಸರಕಾರಕ್ಕೆ ವರದಿ ನೀಡುವಂತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಇಂದಿಲ್ಲಿ ಆದೇಶಿಸಿದ್ದಾರೆ.
ಬೆಳಗಾವಿಯಲ್ಲಿ ಗುರುವಾರ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಒಂದು ಸಲ ಆನ್ಲೈನ್ ಅಪ್ಲಿಕೇಶನ್ ಕರೆದು ಎರಡನೇ ಬಾರಿಗೆ ಮ್ಯಾನುವಲ್ ಆಗಿ ಸೈಟ್ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಎರಡು ಅಥವಾ ಮೂರು ದಿನದಲ್ಲಿ ಅದರ ಪೂರ್ಣ ತನಿಖೆ ನಡೆಸಿ ಅದರ ವರದಿಯನ್ನು ಸರಕಾರಕ್ಕೆ ಕಳುಹಿಸುವಂತೆ ಜಿಲ್ಲಾಧಿಕಾರಿಯವರಿಗೆ ಹೇಳಿದ್ದೇನೆ. ತನಿಖೆ ಆದಮೇಲೆ ನಾವು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು. ಮ್ಯಾನುಯಲ್ ಆಗಿ ಯಾಕೆ ಮಾಡಿದ್ದಾರೆ ಎನ್ನುವುದನ್ನು ನೋಡಬೇಕು. ಬುಡಾದವರು ಏನೇನು ತಪ್ಪು ಮಾಡಿದ್ದಾರೆ ನೋಡೋಣ. ತಪ್ಪು ಮಾಡಿರುವುದು ನಿಜವಾಗಿದ್ದರೆ ಮೇಲಧಿಕಾರಿಗಳು ತನಿಖೆ ಮಾಡಿ ವರದಿ ಕೊಡುತ್ತಾರೆ. ಈ ಬಗ್ಗೆ ಮುಂದೆ ವಿಚಾರಿಸೋಣ. ನಗರಭಿವೃದ್ಧಿ ಇಲಾಖೆ, ರಾಜ್ಯಮಟ್ಟದ ಅಧಿಕಾರಿಗಳಿಂದ ತನಿಖೆ ಮಾಡಿಸುತ್ತೇವೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಅವರು ಹೇಳಿದರು.