ಬೆಳಗಾವಿ : ಇಲ್ಲಿಯ ನಾದಸುಧಾ ಸುಗಮ ಸಂಗೀತ ಶಾಲೆಯ 16 ನೇ ಸಂಸ್ಥಾಪನಾ ದಿನಾಚರಣೆ ರವಿವಾರ ನಗರದ ಟಿಳಕವಾಡಿ ಪಿಂಕ್ ವರಾಂಡ ಪಕ್ಕದ ನಾದಸುಧಾ ಸಂಗೀತ ಶಾಲೆಯಲ್ಲಿ ಸಂಭ್ರಮದಿಂದ ನೆರವೇರಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ಸಂಗೀತ ನಮ್ಮಲ್ಲಿ ನೋವು-ನಲಿವು ಮರೆಸುವ ಶಕ್ತಿ ಹೊಂದಿದೆ. ಬ್ಯಾಂಕ್ ನೌಕರಿಯಿಂದ ಸೇವಾ ನಿವೃತ್ತಿ ಹೊಂದಿದ ನಂತರ ಸತ್ಯನಾರಾಯಣ ಅವರು ಬೆಳಗಾವಿಯಲ್ಲೇ ನೆಲೆಸಿ ಸಂಗೀತ ಗರಡಿಯನ್ನೇ ಇಲ್ಲಿ ತೆರೆದಿದ್ದಾರೆ. ಸಂಗೀತ ಪರಂಪರೆಯನ್ನು ಉಜ್ವಲವಾಗಿ ಬೆಳೆಸುತ್ತಿದ್ದಾರೆ. ಸಂಗೀತ ನಮಗೆ ಏಕಾಗ್ರತೆ, ಶಿಸ್ತು ತಂದು ಕೊಡುತ್ತದೆ. ಭಕ್ತಿ, ಶ್ರದ್ದೆಯಿಂದ ಕಲಿತರೆ ಮಾತ್ರ ಸಂಗೀತ ಒಲಿಯುತ್ತದೆ. ನಾಡಿನ ಹೆಸರಾಂತ ವಾಹಿನಿಗಳಲ್ಲಿ ನಾದಸುಧಾ ಪ್ರತಿಭೆಗಳು ಅವಕಾಶ ಪಡೆದುಕೊಂಡಿರುವ ಹಿಂದೆ ಸತ್ಯನಾರಾಯಣ ಅವರ ಅಪಾರ ಪರಿಶ್ರಮ ಅಡಗಿರುವುದನ್ನು ಗುರುತಿಸಬಹುದು ಎಂದರು.
ಸಂಗೀತ ವಿದ್ವಾನ್ ಎಂ.ಜಿ.ರಾವ್ ಮಾತನಾಡಿ, ಸತ್ಯನಾರಾಯಣ ಅವರು ನಿಸ್ವಾರ್ಥವಾಗಿ ಸಂಗೀತ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ.
ಸಂಗೀತಕ್ಕೆ ಸಾವಿಲ್ಲ. ಅದು ಮಹಾನ್ ವಿದ್ಯೆ. ಸಂಗೀತ ಇದ್ದರೆ ಕಲಿಕೆಯಲ್ಲೂ ಮುಂದಿರುತ್ತಾರೆ. ವಿದ್ಯಾರ್ಥಿಗಳು ಓದಿನೊಂದಿಗೆ ಸಂಗೀತವನ್ನು ತಮ್ಮ ಜೀವನದ ಭಾಗವನ್ನಾಗಿಸಿಕೊಳ್ಳಬೇಕು ಎಂದರು.

ಪತ್ರಕರ್ತ ಎಲ್.ಎಸ್.ಶಾಸ್ತ್ರಿ ಮಾತನಾಡಿ,
ಒಂದು ಸಂಸ್ಥೆಯನ್ನು 15 ವರ್ಷಗಳ ಕಾಲ ಮುನ್ನೆಡೆಸಿ ಮಕ್ಕಳಲ್ಲಿ ಸಂಗೀತ ಪ್ರತಿಭೆ ಅರಳಿಸುವ ಕೆಲಸವನ್ನು ನಾದಸುಧಾ ಸುಗಮ ಸಂಗೀತ ಶಾಲೆಯ ಸಂಸ್ಥಾಪಕ ಡಾ. ಸತ್ಯನಾರಾಯಣ ಅವರು ಮಾಡಿದ್ದಾರೆ. ಕಲೆ ಬೆಳೆಯುವುದು ಕೇವಲ ಕಲಾವಿದರಿಂದ ಮಾತ್ರ ಅಲ್ಲ. ಇದರ ಹಿಂದೆ ಸಂಗೀತ ಗುರುಗಳ ಪಾತ್ರವೂ ಅಡಗಿರುತ್ತದೆ.
ಮೈಸೂರಿನಲ್ಲಿ ಹುಟ್ಟಿ ಬೆಳಗಾವಿಯಲ್ಲಿ ಸಂಗೀತ ಶಾಲೆ ನಡೆಸುವ ಮೂಲಕ ರಾಜ್ಯಮಟ್ಟದ ಪ್ರತಿಭೆಗಳನ್ನು ತಯಾರಿಸುತ್ತಿರುವುದು ನಿಜಕ್ಕೂ ಅಭಿನಂದನೀಯ ಎಂದು ಮೆಚ್ಚುಗೆ ಸೂಚಿಸಿದರು.
ಸಂಸ್ಥೆ ಕಟ್ಟುವುದು ಸುಲಭ. ಆದರೆ ಬೆಳೆಸುವುದು ಕಷ್ಟ. ಸಾಕಷ್ಟು ಅವಮಾನ, ನೋವು ಸಹಿಸಬೇಕು.
ಮಾನವನ ಆಡುಭಾಷೆಯೇ ಸಂಗೀತ. ಮಾನವ ಮಾತನಾಡುವ ಭಾಷೆ ಯಾವುದೇ ಇದ್ದರೂ ಎಲ್ಲಾ ಭಾಷೆಗಳ ಜನರು ಸಂಗೀತದ ನಾದ ಮಾಧುರ್ಯವನ್ನು ಭಾಷೆಯ ಹಂಗಿಲ್ಲದೇ ಅನುಭವಿಸುತ್ತಾರೆ. ಸಂಗೀತ, ಕಲೆಗಳ ಹವ್ಯಾಸ ಎಲ್ಲರಲ್ಲೂ ಸಾಮಾನ್ಯವಾಗಿ ಇರುತ್ತದೆ. ಸಾಹಿತ್ಯ, ಸಂಸ್ಕೃತಿಯ ಅರಿವು ಎಲ್ಲರಲ್ಲೂ ಇರಬೇಕು. ಸಂಗೀತ ಅವಸರವಾಗಿ ಕಲಿಯುವ ಕಲೆಯಲ್ಲ. ಅದೊಂದು ತಪಸ್ಸು. ಪಂಡಿತ್ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಮುಂತಾದ ಸಂಗೀತ ದಿಗ್ಗಜರು ಸಂಗೀತ ಕಲಿಕೆಯ ವೇಳೆ ಬಹುಕಾಲ ಗುರುಗಳ ಸೇವೆ ಮಾಡಿಯೇ ಬಹುದೊಡ್ಡ ಕಲಾವಿದರಾಗಿ ಹೊರಹೊಮ್ಮಿದ್ದರು. ಇಂದು ಸಂಗೀತ ಕಲಿತು ನಾಳೆ ಟಿವಿಯಲ್ಲಿ ಕಾಣಿಸಬೇಕು ಎಂಬ ತವಕ ಬೇಡ. ನಿರಂತರ ಕಲಿಕೆ ಬೇಕು ಎಂದು ಸಲಹೆ ನೀಡಿದರು.

ಬೆಳಗಾವಿಯಲ್ಲಿ ಅದ್ಭುತ ಕಲಾವಿದರು ಆಗಿ ಹೋಗಿದ್ದಾರೆ. ಕುಮಾರ ಗಂಧರ್ವ, ಪಂಡಿತ್ ರಾಮಬಾವು ವಿಜಾಪುರೆ ಮುಂತಾದವರು ಈ ನೆಲದವರು. ಸಂಗೀತ ಕಲೆಯ ಪರಂಪರೆ ಸದಾ ಮುಂದುವರಿಯಬೇಕು. ಸಂಗೀತ, ನೃತ್ಯ ಇವೆಲ್ಲವೂ ಜಾಗತಿಕ ಮನ್ನಣೆ ಪಡೆದುಕೊಂಡಿದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಸತ್ಯನಾರಾಯಣ ಅವರು ನಾದಸುಧಾವನ್ನು ಮುನ್ನೆಡೆಸಿಕೊಂಡು ಬರುತ್ತಿದ್ದಾರೆ. ಎಲ್ಲಾ ರೀತಿಯಲ್ಲಿ ಕಷ್ಟಪಟ್ಟು ಮಕ್ಕಳಿಗೆ ಸಂಗೀತ ಹೇಳಿಕೊಡುತ್ತಿದ್ದು, ನೀವು ಪಠ್ಯದೊಂದಿಗೆ ಸಂಗೀತ ಅಭಿರುಚಿಯನ್ನು ಬೆಳೆಸಿಕೊಳ್ಳಿ.
ಇಂತಹ ಉತ್ತಮ ಸಂಗೀತ ಗುರುಗಳನ್ನು ಎಂದೂ ಮರೆಯಬೇಡಿ. ಎಲ್ಲರೂ ಗುರುಗಳ ಮಾರ್ಗದರ್ಶನದಲ್ಲಿ ಮುನ್ನೆಡೆಯಿರಿ ಎಂದು ಕಿವಿಮಾತು ಹೇಳಿದರು.
ನೃತ್ಯ ನಿರ್ದೇಶಕಿ, ವಿದೂಷಿ ಪ್ರೇಮಾ ಉಪಾಧ್ಯೆ ಮಾತನಾಡಿ, ಸತ್ಯ ನಾರಾಯಣ ಅವರು ಅತ್ಯಂತ ಶಿಸ್ತಿನಿಂದ ಸಂಗೀತ ಕಲಿಸುವ ಜೊತೆಗೆ ಬಹುಮುಖಿ ವ್ಯಕ್ತಿತ್ವದವರು. ಇಂತಹ ಗುರುಗಳು ಸಿಕ್ಕಿರುವುದು ನಮ್ಮೆಲ್ಲರ ಭಾಗ್ಯ. ನಾದಸುಧಾ ಚಿರಂತನವಾಗಿ ಬೆಳೆಯುವಂತಾಗಲಿ ಎಂದು ಶುಭ ಹಾರೈಸಿದರು.
ನಾದಸುಧಾ ಸುಗಮ ಸಂಗೀತ ಶಾಲೆಯ ಸಂಸ್ಥಾಪಕ ಡಾ.ಸತ್ಯನಾರಾಯಣ ಅವರು ನಾದಸುಧಾ ಸಂಗೀತ ಶಾಲೆ ಬೆಳೆದುಬಂದ ಬಗ್ಗೆ ತಿಳಿಸಿದರು.
ನಿವೃತ್ತ ಸರಕಾರಿ ಅಧಿಕಾರಿ ಮದನ ಕಬ್ಬೂರ, ಸಾಹಿತಿ ಎಂ. ಎಸ್. ಪಾಟೀಲ, ಅನಂತ ಕುಮಾರ ಬ್ಯಾಕೂಡ ಅವರು ನಾದಸುಧಾ ಸಂಗೀತ ಶಾಲೆಯ ಮಕ್ಕಳಿಗೆ ಶುಭ ಕೋರಿದರು.
ಮಕ್ಕಳ ಪೋಷಕರು ಹಾಗೂ ಮಕ್ಕಳು ಸಂಗೀತ ಶಾಲೆಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಮಕ್ಕಳು ಸುಂದರ ಸಂಗೀತ ಕಾರ್ಯಕ್ರಮವನ್ನು ನೀಡುವ ಮೂಲಕ ಎಲ್ಲರ ಮನತಣಿಸಿದರು. ಮಹಾದೇವಿ ಬೆಳಕೂಡ ನಿರೂಪಿಸಿದರು.
