ಜನ ಜೀವಾಳ ಸರ್ಚಲೈಟ್ : ಬೆಳಗಾವಿ
ಪ್ರತಿಷ್ಠಿತ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಮತ ಎಣಿಕೆ ಮಂಗಳವಾರ ನಡೆಯಲಿದೆ. ಪ್ರತಿಷ್ಠಿತ ನಾಯಕರ ಸ್ಪರ್ಧೆಯಿಂದ ಈ ಬಾರಿ ಇವೆರಡೂ ಕ್ಷೇತ್ರಗಳು ರಾಜ್ಯದ ಗಮನ ಸೆಳೆದಿದೆ. ಹೀಗಾಗಿ
ಇವೆರಡೂ ಕ್ಷೇತ್ರಗಳತ್ತ ಇಡೀ ರಾಜ್ಯದ ಚಿತ್ತ ಇತ್ತ ಹರಿದಿರುವುದು ವಿಶೇಷ.
ಸ್ವತಃ ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಸ್ಪರ್ಧೆ ಕಂಡು ಬಂದಿದೆ. ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು. ಆದರೆ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸಲಿದೆ ಎಂದಿರುವುದು ಇದೀಗ ಕಾದು ನೋಡುವಂತೆ ಮಾಡಿದೆ. ಒಟ್ಟಾರೆ ಗಮನಿಸಿದರೆ ಬಿಜೆಪಿ ಕೈಯಲ್ಲಿರುವ ಈ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್ ಈ ಬಾರಿ ಕಸಿದುಕೊಳ್ಳುವುದೋ ಕಾದುನೋಡಬೇಕಿದೆ. ಅಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳಿಗೆ ಸಿಂಹಸ್ವಪ್ನ ಎನಿಸಿದೆ.
ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಹಿಂದೆಂದಿಗಿಂತ ಈ ಬಾರಿ ಚುನಾವಣಾ ಕಣ ಕಾವೇರಿದೆ. ಬಿಜೆಪಿ ಕೈಯಲ್ಲಿರುವ ಎರಡು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಭಾರಿ ಪೈಪೋಟಿ ನೀಡಿರುವುದು ಈ ಸಲದ ಚುನಾವಣೆಯ ವಿಶೇಷವಾಗಿದೆ. ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಜೆಪಿ ಅಭ್ಯರ್ಥಿಯಾಗಿದ್ದು ಅವರಿಗೆ ರಾಜ್ಯದ ಪ್ರಭಾವಿ ಕಾಂಗ್ರೆಸ್ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಸುಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಕಣಕ್ಕಿಳಿಸುವ ಮೂಲಕ ಪ್ರಬಲ ಪೈಪೋಟಿ ನೀಡಿದ್ದಾರೆ. ಚುನಾವಣೆ ಯುದ್ಧಕ್ಕೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜಗದೀಶ್ ಶೆಟ್ಟರ್ ಅವರನ್ನು ಕೆಣಕಿ ಚುನಾವಣಾ ಕಣದ ದಿಕ್ಕನ್ನೇ ಬದಲಾಯಿಸಿದ್ದು ಇತಿಹಾಸ. ಮಾತ್ರವಲ್ಲ ಜಗದೀಶ್ ಶೆಟ್ಟರ್ ಅವರಿಂದ ಬೆಳಗಾವಿ ಜಿಲ್ಲೆಗೆ ಏನು ಉಪಯೋಗ ಆಗಿಲ್ಲ ಎಂದು ನೇರವಾಗಿ ಆರೋಪ ಮಾಡಿದ್ದರು. ಇದು ಮತದಾರರ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಿದೆ ಎಂದು ಕಾದುನೋಡಬೇಕಾಗಿದೆ.
ನೆರೆಯ ಚಿಕ್ಕೋಡಿಯಲ್ಲಿ ಸಹ ಈ ಬಾರಿ ಬಿಜೆಪಿ ಗೆಲುವು ಸುಲಭವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಲಗೈ ಬಂಟ ಎಂದೇ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಅವರ ಸುಪುತ್ರಿಯನ್ನು ಇಲ್ಲಿ ಕಣಕ್ಕಿಳಿಸುವ ಮೂಲಕ ಬಿಜೆಪಿಗೆ ನೀರು ಕುಡಿಸುವ ಕೆಲಸ ಮಾಡಲಾಗಿದೆ.
ಚಿಕ್ಕೋಡಿಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಮರು ಆಯ್ಕೆ ಬಯಸಿದ್ದು ರಾಜ್ಯದ ಇನ್ನೊಬ್ಬ ಪ್ರಭಾವಿ ಸಚಿವ ಸತೀಶ ಜಾರಕಿಹೊಳಿ ತಮ್ಮ ಸುಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿಯನ್ನು ಪರಾಭವಗೊಳಿಸಲು ಪಣತೊಟ್ಟಿದ್ದಾರೆ. ಸತೀಶ ಜಾರಕಿಹೊಳಿ ಅವರು ತಮ್ಮ ರಾಜಕೀಯ ಅನುಭವವನ್ನು ಧಾರೆಯೆರೆದು ಪುತ್ರಿಯ ಗೆಲುವಿಗೆ ಪಣ ತೊಟ್ಟಿದ್ದರು.
ಹೀಗಾಗಿ ಈ ಬಾರಿ ಚಿಕ್ಕೋಡಿಯಲ್ಲಿ ಬಿಜೆಪಿ ಪಾಲಿಗೆ ಗೆಲುವು ಎನ್ನುವುದು ಗಂಟಲಲ್ಲಿ ಇಳಿಯದ ಕಡಬಿನಂತಾಗಿದೆ.
ತಿಣುಕಾಡಿ ಗೆದ್ದಿದ್ದ ಮಂಗಲಾ ಅಂಗಡಿ :
ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಇನ್ನೇನು ಬೆಳಗಾವಿ ಲೋಕಸಭಾ ಮತಕ್ಷೇತ್ರ ಬಿಜೆಪಿಯ ಕೈ ಬಿಟ್ಟು ಹೋಗಿತ್ತು ಎಂಬ ಸನ್ನಿವೇಶ ಸೃಷ್ಟಿಯಾಗಿತ್ತು. ಅಷ್ಟೊಂದು ದೊಡ್ಡ ಮಟ್ಟದಲ್ಲಿ ಕೊನೆವರೆಗೂ ಕಾಂಗ್ರೆಸ್ ಇಲ್ಲಿ ಬಿಜೆಪಿಗೆ ನೇರ ಪೈಪೋಟಿ ನೀಡಿತ್ತು.
ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅವರ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅವರ ಪತ್ನಿ ಮಂಗಲಾ ಅಂಗಡಿ ಕಾಂಗ್ರೆಸ್ನ ಸತೀಶ ಜಾರಕಿಹೊಳಿ ವಿರುದ್ಧ ಕೇವಲ 5,240 ಮತಗಳ ಅಂತರದಿಂದ ಅತ್ಯಂತ ಪ್ರಯಾಸದ ಗೆಲುವು ಸಾಧಿಸಿದ್ದರು. ಉಪ ಚುನಾವಣೆಯ ಮತ ಎಣಿಕೆಯಲ್ಲಿ ಹಾವು– ಏಣಿ ಆಟ ನಿರಂತರ ಮುಂದುವರಿದಿತ್ತು. ಇಬ್ಬರಿಗೂ ದೊಡ್ಡ ಮೊತ್ತದ ಮತಗಳ ಮುನ್ನಡೆ ಕೊನೆಯವರೆಗೂ ಲಭಿಸಲೇ ಇಲ್ಲ. ಕೊನೆಯ ಕೆಲವು ಸುತ್ತುಗಳಲ್ಲಿ ದೊರಕಿದ ಅಲ್ಪ ಮತಗಳ ಮುನ್ನಡೆಯೇ ಮಂಗಲಾ ಅವರನ್ನು ಗೆಲುವಿನ ದಡ ಮುಟ್ಟಿಸಿತ್ತು.
2019 ರ ಲೋಕಸಭಾ ಚುನಾವಣೆಯಲ್ಲಿ ಸುರೇಶ ಅಂಗಡಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 3.90 ಲಕ್ಷ ಮತಗಳ ಅಂತರದ ಗೆಲುವು ಪಡೆದಿದ್ದರು. ಬಹುತೇಕ ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಕಾಂಗ್ರೆಸ್ನ ಮತ ಗಳಿಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿತ್ತು.
ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿಗಳ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿದ್ದ ಶುಭಂ ಶೆಳ್ಕೆ 1.17 ಲಕ್ಷಗಳ ಮತ ಗಳಿಸಿದ್ದರು. ಇದು ಬಿಜೆಪಿಯ ಮತ ಗಳಿಕೆ ಕುಸಿಯಲು ಪ್ರಮುಖ ಕಾರಣ. ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಚದುರಿಸಲು ಎಂಇಎಸ್ ಪ್ರಯತ್ನಿಸಿ ಅದು ಒಂದು ಹಂತಕ್ಕೆ ಯಶ ಕಂಡಿತ್ತು. ಆದರೆ ಈ ಬಾರಿ ಎಂಇಎಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರುವುದು ಬಿಜೆಪಿ ಪಾಲಿಗೆ ಬಹುದೊಡ್ಡ ಆಶಾದಾಯಕ ಬೆಳವಣಿಗೆ ಆಗಿದೆ.
ಕಳೆದ ಸಲದ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಮಂಗಲಾ ಅಂಗಡಿ 4,40,327 ಮತಗಳನ್ನು ಪಡೆದರೆ, ಸತೀಶ ಜಾರಕಿಹೊಳಿ 4,35,087 ಪಡೆದಿದ್ದರು. 5240 ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು.
2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಶೇ.68ರಷ್ಟು ಮತದಾನವಾಗಿತ್ತು. ಸುರೇಶ ಅಂಗಡಿಯವರು 5,54,417 ಮತ ಪಡೆದು ಜಯಭೇರಿ ಬಾರಿಸಿದ್ದರು. ಕಾಂಗ್ರೆಸ್ ಲಕ್ಷ್ಮೀ ಹೆಬ್ಬಾಳ್ಕರ್ ಅವರು 4,78,557 ಮತ ಗಳಿಸಿ ಸುರೇಶ ಅಂಗಡಿಯವರಿಗೆ ಪೈಪೋಟಿ ನೀಡಿದ್ದರು.
2019 ರಲ್ಲಿ ನಡೆದ ಚುನಾವಣೆಯಲ್ಲಿ ಶೇ.67 ರಷ್ಟು ಮತದಾನವಾಗಿತ್ತು. ಸುರೇಶ ಅಂಗಡಿಯವರು 761,991 ಮತ ಪಡೆದು ಜಯಭೇರಿ ಬಾರಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಸಾಧುನವರ ಅವರು 3,70,687 ಮತ ಗಳಿಸಿದ್ದರು. ಚಲಾವಣೆಯಾದ ಪೈಕಿ ಶೇ.63 ರಷ್ಟು ಮತಗಳಿಸಿ ಅಂಗಡಿಯವರು ಸತತ ನಾಲ್ಕನೇ ಬಾರಿ ಜಯ ಗಳಿಸಿದ್ದರು.
ಸುರೇಶ ಅಂಗಡಿಯವರು ಕೋವಿಡ್ನಿಂದ ಅಕಾಲಿಕ ಮರಣದ ಹೊಂದಿದ ನಂತರ 2021 ರಲ್ಲಿ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಕಾಂಗ್ರೆಸ್ನಿಂದ ಸತೀಶ ಜಾರಕಿಹೊಳಿ ಸ್ಪರ್ಧಿಸಿದ್ದರು. ಕೇವಲ 5 ಸಾವಿರ ಮತಗಳ ಅಂತರದಲ್ಲಿ ಮಂಗಲಾ ಅಂಗಡಿ ಗೆಲುವು ಸಾಧಿಸಿದ್ದರು.
ಸ್ವಾತಂತ್ರ್ಯ ನಂತರ ಮುಂಬಯಿ ರಾಜ್ಯವಿದ್ದ ಸಂದರ್ಭದಲ್ಲಿಯೇ ಬೆಳಗಾವಿ ಲೋಕಸಭೆ ಕ್ಷೇತ್ರವಿತ್ತು. ಸದ್ಯ ವಿವಿಧ ಲೋಕಸಭೆ ಕ್ಷೇತ್ರವಾಗಿ ವಿಂಗಡಣೆಯಾಗಿದೆ. ನಾಲ್ಕು ದಶಕ ಕಾಂಗ್ರೆಸ್ ಹಿಡಿತದಲ್ಲಿ ಬಳಿಕ ಎರಡು ದಶಕ ಬಿಜೆಪಿ ಹಿಡಿತದಲ್ಲಿ ಈ ಕ್ಷೇತ್ರವಿದೆ. ಸದ್ಯ ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರು ಲೋಕಸಭೆ ಸದಸ್ಯರಾಗಿದ್ದಾರೆ. ಇದೀಗ ಬರೋಬ್ಬರಿ ಎರಡು ದಶಕಗಳ ನಂತರ ಈ ಪ್ರತಿಷ್ಠಿತ ಕ್ಷೇತ್ರ ಅಂಗಡಿ ಕುಟುಂಬದಿಂದ ಅವರ ಬೀಗರಾದ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
1951ರಲ್ಲಿ ಮುಂಬಯಿ ರಾಜ್ಯ ಇದ್ದಾಗ ಬೆಳಗಾವಿ ಲೋಕಸಭಾ ಕ್ಷೇತ್ರವಾಗಿತ್ತು. ಆರಂಭದಲ್ಲಿ ಕಾಂಗ್ರೆಸ್ ಹಿಡಿತದಲ್ಲೇ ಇದ್ದಿದ್ದ ಈ ಕ್ಷೇತ್ರವು ಕಳೆದ ಎರಡು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದೆ. 2004 ರಿಂದ ನಾಲ್ಕು ಬಾರಿ ಹಾಗೂ ಒಂದು ಉಪ ಚುನಾವಣೆ ಸೇರಿ ಐದು ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಈ ಪಂಚ ಗೆಲುವಿನ ರುವಾರಿ ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿವಂಗತ ಸುರೇಶ ಅಂಗಡಿ. ಸದ್ಯ ಅವರ ಪತ್ನಿ ಮಂಗಲಾ ಅಂಗಡಿಯವರು ಈ ಕ್ಷೇತ್ರದ ಸಂಸದರಾಗಿದ್ದಾರೆ. ಇದೀಗ ಚುನಾವಣೆಯಲ್ಲಿ ರಾಜಕೀಯ ಅಧಿಪತ್ಯ ಸಾಧಿಸಲು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ದೊಡ್ಡ ಸೆಣಸಾಟ ನಡೆಯುವುದು ನಿಶ್ಚಿತ. ಒಟ್ಟಾರೆ ಈ ಬಾರಿ ಬೆಳಗಾವಿ ಲೋಕಸಭಾ ಮತಕ್ಷೇತ್ರ ಪೈಪೋಟಿಯ ಕಣವಾಗಿ ಪರಿವರ್ತನೆಗೊಂಡಿದ್ದು ಇಡೀ ನಾಡಿನ ಗಮನ ಇತ್ತ ಸೆಳೆದಿದೆ.
ಬೆಳಗಾವಿ ಜಿಲ್ಲೆಯ ಭಾಗವೇ ಆಗಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಚುನಾವಣಾ ಕಣ ಕಾವೇರಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದು ಏರ್ಪಟ್ಟಿದೆ.
ಬಿಜೆಪಿ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಮತ್ತೆ ಟಿಕೆಟ್ ನೀಡಿದೆ. ಇತ್ತ ಕಾಂಗ್ರೆಸ್ ಪಕ್ಷ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರಂಥ ಬಲಿಷ್ಠ ನಾಯಕಿಯನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿಯ ಎಡೆಮುರಿ ಕಟ್ಟಲು ಮುಂದಾಗಿದೆ.
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಅಣ್ಣಾ ಸಾಹೇಬ್ ಜೊಲ್ಲೆ ಅವರು ಪ್ರಕಾಶ ಹುಕ್ಕೇರಿ ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಆದರೆ, 2014ರಲ್ಲಿ ನರೇಂದ್ರ ಮೋದಿ ಅವರ ಅಲೆಯ ಮಧ್ಯೆಯೂ ಕಾಂಗ್ರೆಸ್ನ ಪ್ರಕಾಶ್ ಹುಕ್ಕೇರಿ ಅವರು ಬಿಜೆಪಿಯ ರಮೇಶ ಕತ್ತಿ ವಿರುದ್ಧ ಗೆಲುವು ಸಾಧಿಸಿದ್ದರು. ಇನ್ನು 2009ರಲ್ಲಿ ರಮೇಶ್ ಕತ್ತಿ, 2004ರಲ್ಲಿ ರಮೇಶ್ ಜಿಗಜಿಣಗಿ ಅವರು ಚಿಕ್ಕೋಡಿ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದರು.
ಒಟ್ಟಾರೆ ಗಮನಿಸಿದರೆ ಈ ಬಾರಿ ಚಿಕ್ಕೋಡಿ ಮತಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಇನ್ನಿಲ್ಲದ ಸ್ಪರ್ಧೆ ಏರ್ಪಟ್ಟಿದ್ದು ಕೊನೆಯವರೆಗೂ ಕುತೂಹಲ ಕಾವೇರಲಿರುವುದು ವಿಶೇಷವಾಗಿದೆ.