ಹರಿಯಾಣದ ಪಾಣಿಪತ್ ಗ್ರಾಮವೊಂದರಲ್ಲಿ ಮದುವೆಯ ಸಂಭ್ರಮದ ವಾದ್ಯಗಳು ನಿಶ್ಯಬ್ದವಾದವು, ಸಂಬಂಧಿಕರು ಸೇರಿದ್ದ ಮನೆಯಲ್ಲಿ ಆತಂಕ ಆವರಿಸಿತು. ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಆ ದಿನ ಒಂದು ದುಃಸ್ವಪ್ನವಾಗಿ ಬದಲಾಯಿತು. ಕೆಲವೇ ಗಂಟೆಗಳಲ್ಲಿ, ಸಂತೋಷದ ವಾತಾವರಣವು ಆತಂಕದ ಹುಡುಕಾಟವಾಗಿ ಮತ್ತು ನಂತರ ಅಪರಾಧದ ದೃಶ್ಯವಾಗಿ ಬದಲಾಯಿತು. ದಿನದ ಅಂತ್ಯದ ವೇಳೆಗೆ, ಪೊಲೀಸರು ಮನಕಲಕುವ ಕೊಲೆ ಪ್ರಕರಣವನ್ನು ಬಹಿರಂಗಪಡಿಸಿದರು.
ನಾಲ್ಕು ಮಕ್ಕಳನ್ನು ಕೊಂದ ಆರೋಪ ಹೊತ್ತಿರುವ ಮಹಿಳೆಯೊಬ್ಬಳು, ಪಾಣಿಪತ್ನಲ್ಲಿ ತನ್ನ ಸೋದರ ಸಂಬಂಧಿ ಬಾಲಕಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಇದಕ್ಕೆ ಕಾರಣ ತನಗಿಂತ ಯಾರೂ “ಹೆಚ್ಚು ಸುಂದರವಾಗಿ” ಕಾಣಬಾರದು ಎಂಬ ಅಸೂಯೆಯಂತೆ.
ಸೋಮವಾರ ಮದುವೆ ಸಮಾರಂಭಕ್ಕಾಗಿ ಇಡೀ ಕುಟುಂಬ ಸಂಭ್ರಮದಲ್ಲಿದ್ದಾಗ, ಆರೋಪಿ ಪೂನಂ, ತನ್ನ 6 ವರ್ಷದ ಸೋದರ ಸಂಬಂಧಿ ಬಾಲಕಿಯನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಂದಿದ್ದಾಳೆ. ಪೊಲೀಸರ ಪ್ರಕಾರ, ಪೂನಂ ಈ ಹಿಂದೆ 2023 ರಲ್ಲಿ ತನ್ನ ಮಗ ಸೇರಿದಂತೆ ಮೂರು ಮಕ್ಕಳನ್ನು ಇದೇ ರೀತಿ – ಅಂದರೆ ನೀರಿನಲ್ಲಿ ಮುಳುಗಿಸಿಯೇ ಕೊಲೆ ಮಾಡಿದ್ದಾಳೆ.
ನಡೆದದ್ದು ಹೇಗೆ?
ಸೋನಿಪತ್ನಲ್ಲಿ ವಾಸಿಸುತ್ತಿರುವ ಮೃತ ಬಾಲಕಿ ವಿಧಿ ತನ್ನ ಕುಟುಂಬದ ಜೊತೆ ಸಂಬಂಧಿಕರ ಮದುವೆ ಸಮಾರಂಭಕ್ಕೆ ಪಾಣಿಪತ್ನ ಇಸ್ರಾನಾ ಪ್ರದೇಶದ ನೌಲ್ತಾ ಗ್ರಾಮಕ್ಕೆ ಬಂದಿದ್ದಳು. ಆಕೆಯೊಂದಿಗೆ ಅಜ್ಜ ಪಾಲ ಸಿಂಗ್, ಅಜ್ಜಿ ಓಂವತಿ, ತಂದೆ ಸಂದೀಪ, ತಾಯಿ ಮತ್ತು 10 ತಿಂಗಳ ತಮ್ಮ ಇದ್ದರು. ಸೋಮವಾರ ಮಧ್ಯಾಹ್ನ ಸುಮಾರು 1:30 ಕ್ಕೆ ಮದುವೆ ಮೆರವಣಿಗೆ ನೌಲ್ತಾಕ್ಕೆ ಬಂದಾಗ, ಕುಟುಂಬವು ಅದರೊಂದಿಗೆ ಹೊರಟಿತು.
ಇದಾದ ಸ್ವಲ್ಪ ಸಮಯದ ನಂತರ, ವಿಧಿಯ ತಂದೆಗೆ ಮಗಳು ಕಾಣೆಯಾಗಿದ್ದಾಳೆ ಎಂದು ತಿಳಿಸುವ ದೂರವಾಣಿ ಕರೆ ಬಂದಿತು ಮತ್ತು ಕುಟುಂಬವು ಅವಳಿಗಾಗಿ ಹುಡುಕಲು ಪ್ರಾರಂಭಿಸಿತು. ಸುಮಾರು ಒಂದು ಗಂಟೆಯ ನಂತರ, ಆಕೆಯ ಅಜ್ಜಿ ಓಂವತಿ ಸಂಬಂಧಿಕರ ಮನೆಯ ಮೊದಲ ಮಹಡಿಯಲ್ಲಿರುವ ಒಂದು ಸ್ಟೋರ್ರೂಂಗೆ ಹೋದರು. ಸ್ಟೋರ್ರೂಂ ಬಾಗಿಲು ಹೊರಗಿನಿಂದ ಚಿಲಕ ಹಾಕಿತ್ತು. ಅವರು ಬಾಗಿಲು ತೆರೆದಾಗ, ವಿಧಿ ನೀರಿನ ತೊಟ್ಟಿಯಲ್ಲಿ ತಲೆ ಮುಳುಗಿಸಿ, ಕಾಲುಗಳನ್ನು ನೆಲದ ಮೇಲೆ ಇಟ್ಟ ಸ್ಥಿತಿಯಲ್ಲಿ ಪತ್ತೆಯಾದಳು.
ತಕ್ಷಣ ಮಗುವನ್ನು ಎನ್ಸಿ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು.
ಆದರೆ 6 ವರ್ಷದ ಆ ಬಾಲಕಿ ಕೇವಲ 1 ಅಡಿ ನೀರಿದ್ದ ಟಬ್ನಲ್ಲಿ ಮುಳುಗುವುದು ಹೇಗೆಂಬ ಬಗ್ಗೆ ಪೊಲೀಸರು ಅನುಮಾನ ಉಂಟಾಯಿತು. ವಿಧಿಯ ತಂದೆ ನಂತರ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಎಫ್ಐಆರ್ ದಾಖಲಿಸಿದರು. ಇದು ಭೀಕರ ಕೊಲೆ ಪ್ರಕರಣಗಳು ಹೊರಬರಲು ಕಾರಣವಾಯಿತು. ಪೊಲೀಸ್ ತನಿಖೆಯಲ್ಲಿ ಆರೋಪಿ ಪೂನಂ, ತಂದೆಯ ಸೋದರ ಸಂಬಂಧಿ ಎಂದು ತಿಳಿದು ಬಂದಿದೆ.
ಮಕ್ಕಳನ್ನು ಕೊಲ್ಲುವ ಆಘಾತಕಾರಿ ಪ್ರವೃತ್ತಿ
ಪೊಲೀಸರ ಪ್ರಕಾರ, ಪೂನಂ ಅಸೂಯೆ ಮತ್ತು ದ್ವೇಷದಿಂದ ಮಕ್ಕಳನ್ನು ಮುಳುಗಿಸಿ ಕೊಲ್ಲುವ ಆತಂಕಕಾರಿ ಪ್ರವೃತ್ತಿ ಹೊಂದಿದ್ದಳು. ಏಕೆಂದರೆ ತನಗಿಂತ ಯಾರೂ ಹೆಚ್ಚು ಸುಂದರವಾಗಿ ಕಾಣಬಾರದು ಎಂಬುದು ಆಕೆಯ ದುರುದ್ದೇಶವಾಗಿತ್ತು. ಆಕೆ ನಿರ್ದಿಷ್ಟವಾಗಿ ಚಿಕ್ಕ, ಸುಂದರ ಹುಡುಗಿಯರನ್ನು ಗುರಿಯಾಗಿಸಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಪೂನಂ ನಾಲ್ಕು ಮಕ್ಕಳನ್ನು – ಮೂವರು ಹೆಣ್ಣು ಮಕ್ಕಳು ಮತ್ತು ತನ್ನ ಸ್ವಂತ ಮಗನನ್ನು – ಇದೇ ರೀತಿಯ ಸಂದರ್ಭಗಳಲ್ಲಿ ಮುಳುಗಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
2023 ರಲ್ಲಿ, ಪೂನಂ ತನ್ನ ಅತ್ತಿಗೆಯ ಮಗಳನ್ನು ಕೊಂದಿದ್ದಳು. ಅದೇ ವರ್ಷ, ಅನುಮಾನ ಬಾರದಂತೆ ತನ್ನ ಮಗನನ್ನೇ ಮುಳುಗಿಸಿ ಕೊಂದಳು. ಈ ವರ್ಷದ ಆಗಸ್ಟ್ನಲ್ಲಿ, ಸಿವಾಹ್ ಗ್ರಾಮದಲ್ಲಿ ಮತ್ತೊಂದು ಹುಡುಗಿ ತನಗಿಂತ ‘ಹೆಚ್ಚು ಸುಂದರವಾಗಿ’ ಕಾಣುತ್ತಿದ್ದಾಳೆ ಎಂದು ಆಕೆಯನ್ನು ಕೊಲೆ ಮಾಡಿದ್ದಳು. ವಿಧಿ ಕೊಲೆ ಪ್ರಕರಣದ ವಿಚಾರಣೆಯ ವೇಳೆ ಪೂನಂ ಸತ್ಯವನ್ನು ಒಪ್ಪಿಕೊಳ್ಳುವವರೆಗೂ ಈ ಮಕ್ಕಳ ಸಾವುಗಳು ಆಕಸ್ಮಿಕ ಎಂದು ಭಾವಿಸಲಾಗಿತ್ತು.


