ಬೆಳಗಾವಿ :
ಬೆಳಗಾವಿ ನಗರದಲ್ಲಿ ಬಕ್ರೀದ ಹಬ್ಬವನ್ನು ಜೂ.29 ರಂದು ಆಚರಿಸಲಿರುವ ಹಿನ್ನಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಳಗಾವಿ ನಗರ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಹಾಗೂ ಪ್ರಭಾರ ಪೊಲೀಸ್ ಆಯುಕ್ತ(ಐಪಿಎಸ್) ಶೇಖರ್ ಹೆಚ್. ಟಿ. ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಕರ್ನಾಟಕ ಅಬಕಾರಿ ಕಾಯ್ದೆ ೧೯೬೫ ಕಲಂ ೨೧(೧) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ ೧೯೬೩ ಕಲಂ ೩೧ ರ ಪ್ರಕಾರ ಜೂ. 29 ರಂದು ಬೆಳಿಗ್ಗೆ 6 ಗಂಟೆಯಿಂದ ಜೂ. 30 ರಂದು ಬೆಳಿಗ್ಗೆ 6 ಗಂಟೆಯವರೆಗೆ ಮದ್ಯದ ಅಂಗಡಿ, ವೈನಶಾಪ್, ಬಾರ್ಗಳಲ್ಲಿ, ಕ್ಲಬ್ಗಳಲ್ಲಿ ಮತ್ತು ಹೊಟೇಲ್ಗಳಲ್ಲಿ ಮದ್ಯ ಮಾರಾಟ ಮತ್ತು ಮದ್ಯ ಸಾಗಣಿಕೆಯನ್ನು ನಿಷೇಧಿಸಿ, ಮದ್ಯದ ಅಂಗಡಿಗಳನ್ನು ಹಾಗೂ ಕೆಎಸ್ಬಿಸಿಎಲ್ ಡಿಪೋಗಳನ್ನು, ಹೊಟೇಲ್ಗಳಲ್ಲಿರುವ ಬಾರ್ಗಳನ್ನು ಮುಚ್ಚತಕ್ಕದ್ದು ಹಾಗೂ ಎಲ್ಲ ಅಬಕಾರಿ ಸನ್ನದು ಅಂಗಡಿಗಳನ್ನು ಮುಚ್ಚಿ ಸೀಲ್ ಹಾಕತಕ್ಕದ್ದು, ಇದಲ್ಲದೇ ಪರಿಸ್ಥಿತಿಗೆ ಅನುಗುಣವಾಗಿ ಸಾರ್ವಜನಿಕ ಶಾಂತತೆಯನ್ನು ಕಾಯ್ದುಕೊಂಡು ಬರುವ ಹಿತದೃಷ್ಟಿಯಿಂದ ಅಬಕಾರಿ ಇನ್ಸ್ಪೆಕ್ಟರ್ ಹಾಗೂ ಉಪ ವಿಭಾಗ ಅಬಕಾರಿ ಅಧೀಕ್ಷಕರು, ಕರ್ನಾಟಕ ಅಬಕಾರಿ ಕಾಯ್ದೆ ೧೯೬೫ರ ಕಲಂ ೨೧(೨) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ ೧೯೬೩ ಕಲಂ ೩೧ ರ ಪ್ರಕಾರ ಅವಶ್ಯಕತೆ ಕಂಡುಬಂದಲ್ಲಿ ಶಾಂತಿಪಾಲನೆಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗವುದು ಎಂದು ಆದೇಶ ಹೊರಡಿಸಲಾಗಿದೆ.
ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬೆಳಗಾವಿ ನಗರ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಹಾಗೂ ಪ್ರಭಾರ ಪೊಲೀಸ್ ಆಯುಕ್ತ (ಐಪಿಎಸ್) ಶೇಖರ್ ಹೆಚ್. ಟಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.