⏩ *ಸೆಟ್ಟಿಂಗಗೂ ಮುನ್ನವೇ ಎಚ್ಚೆತ್ತ ಪ್ರಜ್ಞಾವಂತ ಪರೀಕ್ಷಾರ್ಥಿಗಳು…!
⏩ *ಸರಕಾರದ ಗಮನ ಸೆಳೆಯುವಲ್ಲಿ ಸಿದ್ಧವಾದ ಜಾಣ-ಜಾಣೆಯರು…!
ಜನ ಜೀವಾಳ ಸರ್ಚಲೈಟ್ : ಸೆಪ್ಟೆಂಬರ್ 27 ರಂದು ನಡೆಯಲಿರುವ ವಿಲೇಜ್ ಅಕೌಂಟ್ (ತಲಾಠಿ) ಹುದ್ದೆಗಳ ನೇಮಕಾತಿ ಸಂಬಂಧ ರಾಜ್ಯದ್ಯಂತ ನಡೆಯುವ ಪರೀಕ್ಷೆ ಇದೀಗ ಭಾರಿ ಅನುಮಾನ ಹಾಗೂ ಚರ್ಚೆಗೆ ಕಾರಣವಾಗಿದೆ.
ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಎಇ)ದಲ್ಲಿ ಹಲವು ದಿನಗಳ ನಂತರ ದೊಡ್ಡ ಪ್ರಮಾಣದಲ್ಲಿ ಈ ಹುದ್ದೆಗಳ ನೇಮಕಾತಿಗೆ ಈಗ ಪರೀಕ್ಷೆ ನಡೆಯುತ್ತಿದೆ. ಈ ನಡುವೆ ಉದ್ಯೋಗಾಕಾಂಕ್ಷಿಗಳು ಪರೀಕ್ಷೆ ಬರೆಯಲು ಉತ್ಸುಕತೆ ತೋರುತ್ತಿದ್ದರೆ, ತೆರೆಮರೆಯಲ್ಲಿ ಕೆಲವರು ರಾಜಾರೋಷವಾಗಿ ವಿದ್ಯಾರ್ಥಿಗಳಿಗೆ ಆಮಿಷ ತೋರುವುದು ಸಹ ಬೆಳಕಿಗೆ ಬರುತ್ತಿದೆ. ಈ ಹಿಂದೆ ಹಲವು ಅಕ್ರಮ ಪರೀಕ್ಷೆಗಳಲ್ಲಿ ಬಂಧಿತವಾಗಿ ಜಾಮೀನಿನ ಮೇಲೆ ಹೊರಬಂದಿರುವ ಗೋಕಾಕದ ಸುಮಾರು 25 ಜನರ ತಂಡ ಪರೀಕ್ಷಾರ್ಥಿಗಳಿಗೆ ಆಮಿಷವೊಡ್ಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಹಿಂದೆ ನಡೆದ ಪಿಎಸ್ಐ, ಪೋಲಿಸ್, ಕೆ ಪಿ ಎಸ್ ಸಿ, ಎಫ್ಡಿಸಿ, ಕೆಪಿಟಿಸಿಎಲ್, ಹೈಕೋರ್ಟ್ ಪರೀಕ್ಷೆಗಳಲ್ಲಿ ಅಕ್ರಮ ನಡೆದು ಕೆಲವರ ನೇಮಕಾತಿ ಆಗಿತ್ತು. ಅದೇ ತಂಡ ಈಗ ಒಂದು ಹುದ್ದೆಗೆ 25 ಲಕ್ಷ ₹ ನಿಗದಿ ಮಾಡುತ್ತಿದೆ. ಇಷ್ಟೆಲ್ಲಾ ರಾಜಾರೋಷವಾಗಿ ನಡೆಯುತ್ತಿದೆ. ಆದರೆ, ಬೆಳಗಾವಿ ಜಿಲ್ಲಾ ಅಪರಾಧ ತಂಡಕ್ಕೆ ಈ ವಿಷಯ ಗೊತ್ತಿದ್ದರೂ ಸಹಾ ಮೌನ ವಹಿಸುತ್ತಿದೆ. ಕಾರಣ ಇಷ್ಟೇ. ಈ ಹಿಂದಿನ ನೇಮಕಾತಿಗಳಲ್ಲಿ ಈ ತಂಡ ಕೋಟ್ಯಂತರ ರೂಪಾಯಿ ವಸೂಲಿ ಮಾಡಿ ಅಕ್ರಮವನ್ನು ಕೈ ಬಿಡಲಾಗಿದೆ ಎಂಬ ಆರೋಪ ಇದೆ.
ಇದನ್ನು ಗಮನದಲ್ಲಿಟ್ಟಿದ್ದ ಬೆಳಗಾವಿ ಆಗಿನ ಎಸ್ಪಿಗಳಾದ ಲಕ್ಷ್ಮಣ ನಿಂಬರಗಿ ಮತ್ತು ಸಂಜೀವ ಪಾಟೀಲ ಹಲವು ಪೊಲೀಸರಿಗೆ ನೋಟಿಸ್ ನೀಡಿದ್ದಲ್ಲದೆ ವರ್ಗಾವಣೆಯನ್ನು ಮಾಡಿದ್ದರು. ಇದೀಗ ಎಸ್ಪಿ ಡಾ. ಭೀಮಾಶಂಕರ ಗುಳೇದವರು ಸೂಕ್ಷ್ಮವಾಗಿ ಈ ಅಕ್ರಮವನ್ನು ಗಮನಿಸಬೇಕಾಗಿದೆ.
ಅವರು ಹಿಂದಿನ ಅಕ್ರಮಗಳ ಹಿಂದೆ ಯಾರು ಇದ್ದಿದ್ದರು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಈ ಸಲದ ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ಈ ನಡುವೆ ಈಗ ತಲಾಠಿ ಪರೀಕ್ಷೆಗೆ ಸಜ್ಜಾಗಿರುವ ಪ್ರಜ್ಞಾವಂತ ವಿದ್ಯಾರ್ಥಿಗಳು ಈ ಹಿಂದೆ ಆಗಿರುವ ತಪ್ಪು ಹಾಗೂ ಅಕ್ರಮದಲ್ಲಿ ಭಾಗಿಯಾಗಿಯಾದವರನ್ನು ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.