ನವದೆಹಲಿ: ಚುನಾವಣೆಗೂ ಮುನ್ನ ಉಚಿತ ಕೊಡುಗೆಗಳನ್ನು ಘೋಷಿಸುವ ಪದ್ದತಿಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಉಚಿತವಾಗಿ ಪಡಿತರ ಮತ್ತು ಹಣವನ್ನು ನೀಡುವುದರಿಂದ ಜನರು ಕೆಲಸ ಮಾಡಲು ಸಿದ್ದರಿರುವುದಿಲ್ಲ ಎಂದು ಹೇಳಿದೆ.
ನಗರ ಪ್ರದೇಶಗಳಲ್ಲಿ ಸೂರಿಲ್ಲದವರಿಗೆ ಆಶ್ರಯ ಕಲ್ಪಿಸುವ ಹಕ್ಕಿನ ಕುರಿತಾದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಅಗಸ್ಟಿನ್ ಜಾರ್ಜ್ ಮಸಿಯಾ ಅವರಿದ್ದ ಪೀಠ ಈ ರೀತಿ ಅಭಿಪ್ರಾಯಪಟ್ಟಿದೆ.
ಅರ್ಜಿ ವಿಚಾರಣೆ ವೇಳೆ, ಜನರಿಗೆ ಉಚಿತ ಕೊಡುಗೆಗಳನ್ನು ನೀಡುವುದರಿಂದ ಅವರು ಯಾವುದೇ ಕೆಲಸಗಳನ್ನು ಮಾಡದೆ ಹಣ ಮತ್ತು ಪಡಿತರವನ್ನು ಪಡೆಯುತ್ತಾರೆ. ನಿಮ್ಮ ಕಳಕಳಿ ನಮಗೆ ಅರ್ಥವಾಗುತ್ತದೆ. ಆದರೆ ಅವರೂ ಮುಖ್ಯವಾಹಿನಿಗೆ ಬಂದು ಸಮಾಜದ ಭಾಗವಾಗಬೇಕು. ಜತೆಗೆ ದೇಶದ ಏಳಿಗೆಗೆ ಕೊಡುಗೆ ನೀಡಲು ಅವರಿಗೂ ಅವಕಾಶ ನೀಡಬೇಕು’ ಎಂದು ಅರ್ಜಿದಾರರಿಗೆ ಪೀಠ ಹೇಳಿದೆ.
ನಗರ ಬಡತನ ನಿರ್ಮೂಲನೆ ಅಭಿಯಾನ ನಡೆಸಲು ಕೇಂದ್ರ ಸರ್ಕಾರ ಕೊನೆಯ ಹಂತದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರಿಂದ ನಗರ ಪ್ರದೇಶಗಳಲ್ಲಿ ಸೂರಿಲ್ಲದವರಿಗೆ ಮನೆಯನ್ನು ಕಟ್ಟಿಕೊಡುವುದು ಸೇರಿ ಹಲವು ಸಮಸ್ಯೆಗಳನ್ನು ನಿವಾರಣೆಯಾಗಲಿದೆ ಎಂದು ನ್ಯಾಯಪೀಠಕ್ಕೆ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಈ ಅಭಿಯಾನ ಎಷ್ಟು ಸಮಯದಲ್ಲಿ ಮುಗಿಯಲಿದೆ ಎಂದು ಪರಿಶೀಲನೆ ನಡೆಸುವಂತೆ ಕೇಂದ್ರಕ್ಕೆ ಸೂಚಿಸಿ, ವಿಚಾರಣೆಯನ್ನು ಆರು ವಾರ ಮುಂದೂಡಿತು.